ADVERTISEMENT

ರಾಜಕಾಲುವೆ ಸ್ವಚ್ಛತೆಗೆ ಮುಂದಾದ ಮಹಾನಗರಪಾಲಿಕೆ

ಚರಂಡಿಗಳಲ್ಲಿ ಹೂಳು ತೆಗೆದು ನೀರು ಹರಿದು ಹೋಗಲು ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 31 ಮೇ 2025, 5:53 IST
Last Updated 31 ಮೇ 2025, 5:53 IST
ರಾಯಚೂರಿನಲ್ಲಿ ಪೌರ ಕಾರ್ಮಿಕರು ಕೇಂದ್ರ ಬಸ್‌ ನಿಲ್ದಾಣ ಸಮೀಪ ರಾಜಕಾಲುವೆ ಸ್ವಚ್ಛತೆ ಮಾಡುತ್ತಿರುವುದು
ರಾಯಚೂರಿನಲ್ಲಿ ಪೌರ ಕಾರ್ಮಿಕರು ಕೇಂದ್ರ ಬಸ್‌ ನಿಲ್ದಾಣ ಸಮೀಪ ರಾಜಕಾಲುವೆ ಸ್ವಚ್ಛತೆ ಮಾಡುತ್ತಿರುವುದು   

ರಾಯಚೂರು: ಜಿಲ್ಲೆಗೆ ಇನ್ನೂ ಮುಂಗಾರು ಪ್ರವೇಶ ಮಾಡಿಲ್ಲ. ಆದರೂ ಆಗಾಗ ತುಂತುರು ಮಳೆ ಸುರಿಯುತ್ತಿದೆ. ಮಳೆಗಾಲ ಮುನ್ನವೇ ಮಹಾನಗರಪಾಲಿಕೆಯಿಂದ ನಗರದಲ್ಲಿ ಎಲ್ಲ ಚರಂಡಿಗಳಲ್ಲಿನ ಹೂಳು ಎತ್ತುತ್ತಿದೆ. ರಾಜಕಾಲುವೆ ಸ್ವಚ್ಚತಾ ಕಾರ್ಯವನ್ನೂ ಆರಂಭಿಸಿದೆ.

ಸುಮಾರು ವರ್ಷಗಳಿಂದ ಸ್ವಚ್ಚತಾ ಕಾಣದ ಚರಂಡಿ ಹಾಗೂ ರಾಜಕಾಲುವೆಗಳಲ್ಲಿ ಭಾರಿ ಪ್ರಮಾಣದಲ್ಲಿ ಹೊಲಸು ತುಂಬಿಕೊಂಡಿತ್ತು. ಜೆಸಿಬಿ, ಹಿಟಾಚಿ ಜತೆಗೆ 60 ಜನ ಪೌರ ಕಾರ್ಮಿಕರನ್ನು ಬಳಿಸಿ ಸ್ವಚ್ಛತಾ ಕಾರ್ಯವನ್ನು ತೀವ್ರಗೊಳಿಸಲಾಗಿದೆ.

ಮಳೆ ಬಂದಾಗ ರಸ್ತೆಯಲ್ಲಿ ಹರಿಯುವ ಗಲೀಜು ನೀರು, ಕಸ ಸಂಗ್ರಹಗೊಂಡು ದುರ್ನಾತ ಬೀರುತ್ತಿತ್ತು ಚರಂಡಿ, ಕಾಲುವೆಗಳು ಸ್ವಚ್ಛವಾದ ನಂತರ ಸೊಳ್ಳೆ ಕಾಟವೂ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಳೆದ ವರ್ಷ ಹಾನಿಯಾಗಿದ್ದ ಪ್ರದೇಶಗಳಲ್ಲಿನ ನಾಲಾ ಹೂಳು ತೆಗೆಯಲಾಗಿದೆ. ನಾಲಾ ಸುತ್ತಲೂ ಬೆಳೆದಿದ್ದ ಗಿಡ ಗಂಟಿ, ತ್ಯಾಜ್ಯ ವಸ್ತುಗಳನ್ನು ಮೇಲೆತ್ತಿ ಅದೇ ದಿನ ಬೇರೆಡೆಗೆ ಸಾಗಿಸುವ ಕೆಲಸ ನಡೆದಿದೆ.

ADVERTISEMENT

ರಾಜಕಾಲುವೆಯಲ್ಲಿ ಹೂಳು ತುಂಬಿದ್ದು, ಬಿರುಸಿನ ಮಳೆಯಾದರೆ ಕಾಲುವೆಗಳಿಂದ ಮಳೆಯ ನೀರು ಸಾರಗವಾಗಿ ಹರಿಯದೇ ಮನೆಗಳಿಗೆ ನುಗ್ಗಬಹುದು ಎಂದು ಅಂದಾಜು ಮಾಡಿ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಹಾಗೂ ಸ್ವಚ್ಛತಾ ಸಿಬ್ಬಂದಿ ಕಾಲುವೆ ಶುಚಿಗೊಳಿಸುವ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ.

ಪ್ರತಿ ವರ್ಷ ಮಳೆಗಾಲದಲ್ಲಿ ಹೂಳು ತುಂಬಿದ ರಾಜಕಾಲುವೆ ನೀರು ಸುತ್ತಮುತ್ತಲಿನ ಬಡಾವಣೆಗಳಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗುತ್ತಿತ್ತು. ಈ ಬಗ್ಗೆ ಮಹಾನಗರ ಪಾಲಿಕೆ ಆಯುಕ್ತ ಜುಬಿನ್ ಮೊಹಾಪಾತ್ರ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿ ಸ್ವಚ್ಚತಾ ಹಾಗೂ ಅಭಿವೃದ್ಧಿಗೆ ಹೆಚ್ಚಿನ ಗಮನಹರಿಸಿದ್ದಾರೆ.

ನಗರದ ಸಿಯಾತಲಾಬ್ ವಾರ್ಡ್ ನಂಬರ್ 30,‌ 31, ಅರಬ್ ಮೊಹಲ್ಲಾ, ಮಡ್ಡಿಪೇಟೆ, ದೇವಿನಗರ ವಾರ್ಡ್ ನಂಬರ್ 21, ಹರಿಜನವಾಡ 19, 20, ಮಕ್ತಲ್ ವಾರ್ಡ್ ನಂಬರ್ 25, ಬಂಗಿಕುಂಟಾ ವಾರ್ಡ್ ನಂಬರ್ 26 ಪ್ರದೇಶಗಳಲ್ಲಿ ಸ್ವಚ್ಛಗೊಳಿಸಲಾಗಿದೆ.


ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸುವಂತೆ ಹಲವು ಸಂಘಟನೆಗಳು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿವೆ. ಆದರೆ, ಒತ್ತುವರಿಗಳನ್ನು ತೆರವುಗೊಳಿಸುವ ಕೆಲಸವನ್ನು ಮಹಾನಗರ ಪಾಲಿಕೆ ಮಾಡುತ್ತಿಲ್ಲ. ರಾಜಕಾಲುವೆಗಳ ಒತ್ತುವರಿಯ ಪರಿಣಾಮದಿಂದ ಮಳೆಯ ನೀರು ಮನೆಗಳಿಗೆ ನುಗ್ಗಿ ಹಾನಿ ಉಂಟು ಮಾಡುತ್ತಿದೆ' ಎನ್ನುವುದು ಜನರ ಅಳಲು

ರಾಜಕಾಲುವೆಯಲ್ಲಿ 20 ಸಾವಿರ ಟನ್ ಪ್ಲಾಸ್ಟಿಕ್ ಸಂಗ್ರಹವಾಗಿತ್ತು ಸ್ವಚ್ಛಗೊಳಿಸಲಾಗಿದೆ, ಹಲವೆಡೆ ರಾಜಕಾಲುವೆ ಸರಿಯಾಗಿ ಸ್ವಚ್ಛಗೊಳಿಸದ ಪರಿಣಾಮ ನೀರು ಸಾರಗವಾಗಿ ಹರಿಯದೇ ಜಾಮ್ ಆಗುತ್ತಿತ್ತು, ಹೂಳಿನ ಜೊತೆಗೆ ಟನ್ ಗಟ್ಟಲೇ ಪ್ಲಾಸ್ಟಿಕ್ ತೆಗೆಯಲಾಗಿದೆ.


‘ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಪ್ಲಾಸ್ಟಿಕ್‌ ತ್ಯಾಜ್ಯವನ್ನು ರಸ್ತೆ ಬದಿ, ಗಟಾರಗಳಲ್ಲಿ ಎಸೆಯುವನ್ನು ಮೊದಲು ನಿಲ್ಲಿಸಬೇಕು. ಮನೆಯ ಮುಂದೆ ಬರುವ ಕಸದ ಗಾಡಿಯವರಿಗೆ ಕಸ ಕೊಟ್ಟು ಸಹಕರಿಸಬೇಕು‘ ಎಂದು ಮಹಾನಗರಪಾಲಿಕೆ ಆಯುಕ್ತ ಜುಬಿನ್ ಮೋಹಾಪಾತ್ರ ಮನವಿ ಮಾಡಿದರು.


‘ನಗರದಲ್ಲಿ ಘನತ್ಯಾಜ್ಯ ವೈಜ್ಞಾನಿಕವಾಗಿ ಕಸ ವಿಲೇವಾರಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಹಸಿ ಹಾಗೂ ಒಣ ಕಸ ಬೇರ್ಪಡಿಸಿ ಮಹಾನಗರಪಾಲಿಕೆಯ ವಾಹನದ ಕಾರ್ಮಿಕರಿಗೆ ನೀಡಬೇಕು‌ ಆ ಮೂಲಕ ಸ್ವಚ್ಛ ರಾಯಚೂರು ನಗರ ನಿರ್ಮಾಣಕ್ಕೆ ಸಹಕಾರ ನೀಡಬೇಕು ಎಂದು ಹೇಳಿದರು.

ರಾಯಚೂರಿನಲ್ಲಿ ಪೌರ ಕಾರ್ಮಿಕರು ಟ್ರಾಕ್ಟರ್ ಮೂಲಕ ತ್ಯಾಜ್ಯ ವಸ್ತುಗಳನ್ನು ಮೇಲೆತ್ತಿ ಬೇರೆಡೆಗೆ ಸಾಗಿಸುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.