ಸಿಂಧನೂರು: ‘ಮಂಡ್ಯ, ರಾಮನಗರ ಮತ್ತು ಚನ್ನಪಟ್ಟಣಗಳ ಚುನಾವಣೆಯಲ್ಲಿ ಸರದಿ ಸ್ವರೂಪದಲ್ಲಿ ನನಗಾದ ಸೋಲು ಪರಿಪಕ್ವತೆ ಪಡೆಯಲು ಅವಕಾಶ ನೀಡಿದಂತಾಗಿದೆ’ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಸ್ಥಳೀಯ ಯಲಮಂಚಾಲಿ ವಾಸುದೇವರಾವ್ ಕಮ್ಮವಾರಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ತಾಲ್ಲೂಕು ಘಟಕದಿಂದ ಗುರುವಾರ ಹಮ್ಮಿಕೊಂಡಿದ್ದ ‘ಜನರೊಂದಿಗೆ ಜನತಾದಳ’ ಅಂಗವಾಗಿ ಪಕ್ಷದ ಸಮಾವೇಶ ಹಾಗೂ ಮಿಸ್ಡ್ ಕಾಲ್ ಮೂಲಕ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಚುನಾವಣೆಯಲ್ಲಿ ಅಭಿವೃದ್ಧಿಯೇ ಮಾನದಂಡ ಆಗುತ್ತದೆಂಬ ಭಾವನೆ ತಪ್ಪು. ಕುಮಾರಣ್ಣನವರು ವಿಶೇಷವಾಗಿ ಚನ್ನಪಟ್ಟಣ ಒಂದೇ ತಾಲ್ಲೂಕಿಗೆ ₹1200 ಕೋಟಿ ಅನುದಾನ ತಂದು ಶಾಲೆ, ಆಸ್ಪತ್ರೆ, ರಸ್ತೆ, 109 ಕೆರೆಗಳ ಪ್ರಗತಿ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದರೂ ಸಹ ನಾನು ಪರಾಭವಗೊಳ್ಳಬೇಕಾಯಿತು. ಜನರು ಮತ್ತು ಕಾರ್ಯಕರ್ತರು ಸೋಲಿಸಿ ನಮ್ಮನ್ನು ಪರೀಕ್ಷಿಸುತ್ತಾರೆ. ದೃತಿಗೆಡದೆ ಆತ್ಮಸ್ಥೈರ್ಯದಿಂದ ಜನಸೇವೆಯಲ್ಲಿ ತೊಡಗಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ವೆಂಕಟರಾವ್ ನಾಡಗೌಡ, ಸಿಂಧನೂರು ಕ್ಷೇತ್ರದಲ್ಲಿ ಇತಿಹಾಸದಲ್ಲಿ ದಾಖಲಾಗುವಂತಹ ಕೆಲಸ ಮಾಡಿದ್ದರೂ ಸಹ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನನ್ನನ್ನು ಯಾಕೆ ಸೋಲಿಸಿದ್ದಾರೆನ್ನುವದು ಈಗಲೂ ಯಕ್ಷಪ್ರಶ್ನೆಯಾಗಿ ಉಳಿದಿದೆ ಎಂದು ನೋವು ತೋಡಿಕೊಂಡರು.
ಹಗರಿಬೊಮ್ಮನಹಳ್ಳಿ ಶಾಸಕ ಹೇಮಚಂದ್ರ ನಾಯಕ, ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ, ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ, ಜೆಡಿಎಸ್ ಮಹಿಳಾ ಘಟಕದ ರಾಜ್ಯ ಅಧ್ಯಕ್ಷೆ ರಷ್ಮಿ ರಾಮೇಗೌಡ, ಸಿ.ಬಿ.ಚಂದ್ರಶೇಖರ ಮಾತನಾಡಿದರು. ಅಂಗವಿಕಲರ ಸಂಘದ ರಾಜ್ಯ ಘಟಕದ ಅಧ್ಯಕ್ಷ ದೇವೇಂದ್ರಗೌಡ, ಜೆಡಿಎಸ್ ಮುಖಂಡರಾದ ಶಿವಶಂಕರ ವಕೀಲ, ಸಿದ್ದು ಬಂಡಿ, ಮರುಳ ಸಿದ್ಧಯ್ಯಸ್ವಾಮಿ ಗೊರೇಬಾಳ, ಮಹಾಂತೇಶ ಪಾಟೀಲ್ ಅತ್ತನೂರು, ನರಸಿಂಹ ನಾಯಕ, ಲಕ್ಷ್ಮಿಪತಿ, ಧರ್ಮನಗೌಡ ಮಲ್ಕಾಪೂರ, ಚಂದ್ರಶೇಖರ ಮೈಲಾರ, ಸರಸ್ವತಿ ಪಾಟೀಲ್, ಜಿ.ಸತ್ಯನಾರಾಯಣ ಉಪಸ್ಥಿತರಿದ್ದರು.
ಬಸವರಾಜ ನಾಡಗೌಡ ಪ್ರಾಸ್ತವಿಕವಾಗಿ ಮಾತನಾಡಿದರು. ಸುಮಿತ್ ತಡಕಲ್ ನಿರೂಪಿಸಿದರು.
‘ಕಲ್ಯಾಣ ಕರ್ನಾಟಕ ಹೆಸರು ತುಂಬಾ ಚೆನ್ನಾಗಿದೆ. ಆದರೆ ಜನರ ಕಲ್ಯಾಣ ಆಗದಿರುವುದು ವಿಷಾದದ ಸಂಗತಿ’ನಿಖಿಲ್ ಕುಮಾರಸ್ವಾಮಿ ರಾಜ್ಯ ಘಟಕದ ಅಧ್ಯಕ್ಷ ಜೆಡಿಎಸ್ ಯುವ ಘಟಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.