ADVERTISEMENT

ಕೊಳೆಗೆರೆ ನಿವಾಸಿಗಳ ಸಭೆ ಏರ್ಪಡಿಸಿ

ಸ್ಲಂ ನಿವಾಸಿಗಳ ಕ್ರಿಯಾವೇದಿಕೆ ಸದಸ್ಯರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 13:48 IST
Last Updated 17 ಡಿಸೆಂಬರ್ 2018, 13:48 IST
ರಾಯಚೂರಿನಲ್ಲಿ ಸೋಮವಾರ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸದಸ್ಯ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು
ರಾಯಚೂರಿನಲ್ಲಿ ಸೋಮವಾರ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸದಸ್ಯ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು   

ರಾಯಚೂರು: ನಿವೇಶನ ರಹಿತರಿಗೆ ನಿವೇಶನ ಹಂಚಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಕೊಳೆಗೆರೆ ನಿವಾಸಿಗಳ ಸಭೆ ಕರೆಯಲು ಒತ್ತಾಯಿಸಿ ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆ ಸದಸ್ಯರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.

ಸ್ವಂತ ಮನೆಯಿಲ್ಲದೇ ಬಾಡಿಗೆದಾರರು ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ, ಜಿಲ್ಲಾಡಳಿತ ಸ್ಪಂದಿಸಿಲ್ಲ. ನಿವೇಶನ ರಹಿತರಿಗೆ ನಿವೇಶನಗಳು ಮಂಜೂರಾಗಿ ಎರಡು ವರ್ಷಗಳು ಕಳೆದರೂ, ಇನ್ನೂ ಹಂಚಿಕೆ ಮಾಡಿಲ್ಲ. ಫಲಾನುಭವಿಗಳಿಗೆ ಹಕ್ಕುಪತ್ರ ನೀಡಿ ಸಮಾಧಾನ ಪಡಿಸಲಾಗಿದೆ. ಅಘೋಷಿತ ಕೊಳಚೆ ಪ್ರದೇಶಳನ್ನು ಘೋಷಣೆ ಮಾಡಲು ಅರ್ಜಿ ಸಲ್ಲಿಸಿ 10 ವರ್ಷ ಕಳೆದರೂ ಯಾವುದೇ ಪ್ರಕ್ರಿಯೆ ನಡೆದಿಲ್ಲ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

94 ಸಿಸಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದರೂ ಅರ್ಜಿಗಳ ವಿವೇವಾರಿ ಆಗಿಲ್ಲ. ಕಂದಾಯ ಇಲಾಖೆಯಲ್ಲಿ ಅರ್ಜಿಗಳು ಕೊಳೆಯುತ್ತಿವೆ. ಅಕ್ರಮವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ಸಕ್ರಮಗೊಳಿಸಲು ಶಾಸಕರು ತೀರ್ಮಾನಿಸಿದರು. ನಗರಸಭೆಯಿಂದ ನಿರ್ಲಕ್ಷ್ಯ ಮಾಡಲಾಗಿದೆ ಎಂದು ದೂರಿದರು.

ADVERTISEMENT

ನಗರದಲ್ಲಿ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿಲ್ಲ. ಕೊಳಚೆ ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿ ಮಾಡದೇ ಕಾಮಗಾರಿ ಪೂರ್ಣಗೊಂಡಿದೆ ಎನ್ನಲಾಗುತ್ತಿದೆ. ವೈಯಕ್ತಿಕ ಶೌಚಾಲಯಗಳು ನಿರ್ಮಾಣ ಮಾಡದೇ ಬಹಿರ್ದೇಸೆಗೆ ಹೋಗುವವರ ವಿರುದ್ಧ ಕ್ರಮ ಜರುಗಿಸಲು ಪೌರಾಯುಕ್ತರ ಆದೇಶ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಒಳಚರಂಡಿ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಿ ಕಪ್ಪುಪಟ್ಟಿಗೆ ಸೇರಿಸಬೇಕು. ಸ್ವಚ್ಛ ಭಾರತ ಯೋಜನೆಯಡಿ ಎಲ್ಲ ಕೊಳಚೆ ಪ್ರದೇಶಗಳಲ್ಲಿ ವೈಯಕ್ತಿಕ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಬೇಕು. ಅಘೋಷಿತ ಕೊಳಚೆ ಪ್ರದೇಶಗಳನ್ನು ಘೋಷಣೆ ಮಾಡಬೇಕು. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 1050 ಮನೆಗಳ ಕಾಮಗಾರಿ ವಿಳಂಬವಾಗಿದ್ದು, ತ್ವರಿತವಾಗಿ ಕೈಗೊಂಡು ಜನರಿಗೆ ಅನುಕೂಲ ಮಾಡಬೇಕು. ಸ್ವಚ್ಛತೆ ಇಲ್ಲದ ಪರಿಣಾಮ ಡೆಂಗಿ, ಮಲೇರಿಯಾದಂತಹ ರೋಗಗಳಿಗೆ ತುತ್ತಾಗುವಂತಾಗಿದೆ. ಸೊಳ್ಳೆ ಕಾಟದಿಂದ ಬಹಳಷ್ಟು ತೊಂದರೆಗಳು ಎದುರಿಸುವಂತಾಗಿದ್ದು, ಮುನ್ನೆಚ್ಚರಿಕಾ ಕ್ರಮಗಳನ್ನು ಜರುಗಿಸಬೇಕು ಎಂದು ಆಗ್ರಹಿಸಿದರು.

ಅಧ್ಯಕ್ಷ ಜನಾರ್ದನ ಹಳ್ಳಿಬೆಂಚಿ, ವೆಂಕಟೇಶ ಭಂಡಾರಿ, ನಗರಸಭೆ ಸದಸ್ಯ ಎನ್.ಕೆ.ನಾಗರಾಜ, ಆರ್. ಆಂಜನೇಯ, ವೆಂಕಟೇಶ, ನಾಗರಾಜ, ವೀರೇಶ, ರಾಮಕೃಷ್ಣ, ತಾಯಪ್ಪ, ನೂರ್‌ಜಾನ್‌ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.