ADVERTISEMENT

ವಿದ್ಯಾರ್ಥಿನಿ ಸಾವಿನ ಪ್ರಕರಣ ತ್ವರಿತ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 11:28 IST
Last Updated 22 ಏಪ್ರಿಲ್ 2019, 11:28 IST
   

ರಾಯಚೂರು: ಎಂಜಿನಿಯರಿಂಗ್ ವಿದ್ಯಾರ್ಥಿನಿ ಸಂಶಯಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಿಒಡಿ ತ್ವರಿತವಾಗಿ ಪೂರ್ಣಗೊಳಿಸಿ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿ ನವರತ್ನ ಯುವಕ ಸಂಘದ ಸದಸ್ಯರು ಜಿಲ್ಲಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.

ಮಾಣಿಕಪ್ರಭು ದೇವಸ್ಥಾನದ ಹಿಂಭಾಗದಲ್ಲಿನ ಗುಡ್ಡದ ಪ್ರದೇಶದಲ್ಲಿ ವಿದ್ಯಾರ್ಥಿನಿ ಶವನೇಣಿಗೇರಿಸಿದ ಸ್ಥಿತಿಯಲ್ಲಿ ದೊರಕಿರುವುದು ಆತಂಕ ಹೆಚ್ಚಿಸಿದೆ. ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಅಮಾನವೀಯ ಹಾಗೂ ಪೈಶಾಚಿಕ ಕೃತ್ಯದಿಂದ ಜಿಲ್ಲೆ ಬೆಚ್ಚಿಬಿದ್ದಿದ್ದು, ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ ಎಂದರು ಬೇಸರ ವ್ಯಕ್ತಪಡಿಸಿದರು.

ಪ್ರೀತಿಸಲು ಪೀಡಿಸುತ್ತಿದ್ದ ಸುದರ್ಶನ ಯಾದವನನ್ನು ಬಂಧಿಸಲಾಗಿದ್ದು, ಆರೋಪಿಯ ಹೊಲದಲ್ಲಿಯೇ ಮೃತದೇಹ ಪತ್ತೆಯಾಗಿರುವುದರಿಂದ ಆರೋಪಿಯ ಜೊತೆಗೆ ಇತರರು ಭಾಗಿಯಾಗಿರುವ ಸಾಧ್ಯತೆಯಿದೆ. ಚುನಾವಣೆ ನಡೆಯುವುದರೊಳಗಾಗಿ ತನಿಖೆ ಕೈಗೊಂಡು ನಿರ್ಭಯಾ ಪ್ರಕರಣದಂತೆ ತೀವ್ರಗತಿಯಲ್ಲಿ ವಿಚಾರಣೆ ನಡೆಸಿ ದುಷ್ಕರ್ಮಿಗಳನ್ನು ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಇಂತಹ ಕೃತ್ಯ ಎಸಗುವ ವ್ಯಕ್ತಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಸಂದೇಶ ಸಾರಬೇಕಿದೆ ಎಂದರು.

ADVERTISEMENT

ಈಚೆಗೆ ಸಿಂಧನೂರು ತಾಲ್ಲೂಕಿನ ದೇವಿಕ್ಯಾಂಪ್‌ನಲ್ಲಿ ಯುವಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಆರ್.ಎಚ್.ಕ್ಯಾಂಪ್ ಅಂಗನವಾಡಿ ಕಾರ್ಯಕರ್ತೆಯ ಅತ್ಯಾಚಾರ, ರಾಯಚೂರಿನ ಮೆಡಿಕಲ್ ಶಾಪ್ ಉದ್ಯೋಗಿ ಅನುಮಾನಾಸ್ಪದ ಸಾವು, ಆಶಾಪುರ ರಸ್ತೆಯಲ್ಲಿ ಜರುಗಿದ ಅತ್ಯಾಚಾರ ಕೊಲೆ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸಮರ್ಪಕವಾದ ತನಿಖೆ ಕೈಗೊಂಡು ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಲ್ಲಿ ವಿಫಲಗೊಂಡಿರುವುದರಿಂದ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಆದ್ದರಿಂದ ಪೊಲೀಸ್ ಇಲಾಖೆ ಕಠಿಣ ಕ್ರಮ ಜರುಗಿಸಿ ನೊಂದ ಕುಟುಂಬಕ್ಕೆ ನ್ಯಾಯ ದೊರಕಿಸಬೇಕು ಎಂದು ಆಗ್ರಹಿಸಿದರು.

ಪದಾಧಿಕಾರಿಗಳಾದ ಜನಾರ್ಧನ ಹಳ್ಳಿಬೆಂಚಿ, ಆರ್.ಆಂಜಿನೇಯ, ಕೆ.ಪಿ.ಅನಿಲಕುಮಾರ, ಎಸ್.ವೆಂಕಟೇಶ, ಚಂದ್ರು, ಹುಲಿಗೆಪ್ಪ, ಈರೇಶ, ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.