ADVERTISEMENT

ಸಂಗೀತದಲ್ಲಿ ಅರಳುತ್ತಿರುವ ಪ್ರತಿಭಾವಂತೆ ವೈಷ್ಣವಿ

ನಾಗರಾಜ ಚಿನಗುಂಡಿ
Published 13 ನವೆಂಬರ್ 2019, 19:30 IST
Last Updated 13 ನವೆಂಬರ್ 2019, 19:30 IST
   

ರಾಯಚೂರು: ಕುಟುಂಬದ ಸಂಗೀತ ಪರಂಪರೆ ಮುಂದುವರಿಸಲು ಅಣಿಯಾಗಿರುವ ಏಳು ವರ್ಷದ ವೈಷ್ಣವಿ ದೇಶಪಾಂಡೆ, ಈಗಾಗಲೇ ವೇದಿಕೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿ ಗಮನ ಸೆಳೆದಿರುವ ಬಾಲ ಪ್ರತಿಭಾವಂತೆ.

ರಾಯಚೂರಿನ ಸಂಗೀತ ಭೀಷ್ಮ ಎಂದು ಕರೆಯುವ ವಿ.ಎಂ.ಜೋಶಿ ಅವರು, ತಮ್ಮ ಮೊಮ್ಮಗಳಾದ ವೈಷ್ಣವಿಗೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಹಾಗೂ ವಯೋಲಿನ್‌ ನುಡಿಸುವ ಪಾಠ ಹೇಳುತ್ತಿದ್ದಾರೆ. ತಾಯಿ ಸತ್ಯವತಿ ಗಿರೀಶ ದೇಶಪಾಂಡೆ ಸಂಗೀತ ಶಿಕ್ಷಕಿಯಾಗಿದ್ದು, ಸುಗಮ ಸಂಗೀತದ ಪಾಠ ಹೇಳಿಕೊಡುತ್ತಿದ್ದಾರೆ. ವಿದ್ಯಾಭಾರತಿ ಶಾಲೆಯಲ್ಲಿ ಎರಡನೇ ತರಗತಿ ಓದುತ್ತಿರುವ ವೈಷ್ಣವಿಯು ತನ್ನ ಆಟ, ಪಾಠಗಳೊಂದಿಗೆ ಸಂಗೀತ ಸಾಧನೆ ಮಾಡುತ್ತಿದ್ದಾಳೆ.

ಕನ್ನಡ, ಸಂಸ್ಕೃತ, ಹಿಂದಿ ಇಂಗ್ಲಿಷ್, ತೆಲುಗು ಹಾಗೂ ಮರಾಠಿ ಭಾಷೆಗಳಲ್ಲಿ ದೇವರ ನಾಮಗಳನ್ನು ಮನಮುಟ್ಟುವಂತೆ ಹಾಡುತ್ತಾಳೆ. ದಾಸರ ಕೀರ್ತನೆಗಳು, ದೇವರನಾಮ, ವಚನಗಳು, ಭಾವಗೀತೆ, ಜನಪದ ಗೀತೆಗಳನ್ನು ಸೊಗಸಾಗಿ ಹಾಡುತ್ತಾಳೆ. ಹಿಂದಿ ಭಜನ್‌ಗಳನ್ನು, ಚೀಸ್‌ಗಳನ್ನು ಮತ್ತು ಮರಾಠಿ ಅಭಂಗಗಳನ್ನು ಸ್ಪಷ್ಟ ಮತ್ತು ಸುಮಧುರವಾಗಿ ಹಾಡುವುದನ್ನು ಕೇಳಿದರೆ ಆನಂದವಾಗುತ್ತದೆ. ಸಂಗೀತ ವಿದ್ವಾಂಸರಂತೆ ಹಾವಭಾವ ಮಾಡುತ್ತಾ, ಹಾಡಲು ಕುಳಿತರೆ ಜನರು ಮೈಮರೆತು ಕೇಳುತ್ತಾರೆ.

ADVERTISEMENT

ಬಾಲ ಪ್ರತಿಭೆ ವೈಷ್ಣವಿ ಗಾಯನ ಕೇಳುವುದಕ್ಕಾಗಿ ವಿವಿಧೆಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಧಾರ್ಮಿಕ, ಸಾಂಸ್ಕೃತಿಕ, ಸಾಹಿತ್ಯಿಕ ವೇದಿಕೆಗಳಲ್ಲಿ ಸಂಗೀತ ಸುಧೆ ಹರಿಸುವುದು ಕರಗತವಾಗಿದೆ. ಸಿಂಧನೂರಿನಲ್ಲಿ ಈಚೆಗೆ ನಡೆದ ರಾಯಚೂರು ಜಿಲ್ಲಾ 10ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವೈಷ್ಣವಿ ಸಂಗೀತ ಗಾಯನವಿತ್ತು. ನವರಾತ್ರಿ ಉತ್ಸವ ನಿಮತ್ತ ರಾಯಚೂರಿನಲ್ಲಿ ಗಾಯನ ಮಾಡಲು ಅವಕಾಶ ಮಾಡಲಾಗಿತ್ತು.

ಮಕ್ಕಳೊಂದಿಗೆ ಆಟ, ಪಾಠ ಆಡಿ ಖುಷಿ ಪಡುವ ವೈಷ್ಣವಿ, ಸಂಗೀತ ಕ್ಷೇತ್ರದಲ್ಲೂ ತನ್ನದೇ ಆದ ಛಾಪು ಮೂಡಿಸುವ ಛಲ ಇಟ್ಟುಕೊಂಡು ಸಾಧನೆ ಮಾಡುತ್ತಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.