ADVERTISEMENT

ಶುದ್ಧ ನೀರಿಗಾಗಿ ಕಾದಿರುವ ಗ್ರಾಮೀಣ ಜನರು

ಜಿಲ್ಲೆಯ ವಿವಿಧೆಡೆ ಶುದ್ಧ ನೀರಿನ ಘಟಕಗಳ ಸ್ಥಗಿತದಿಂದ ತೊಂದರೆ

ನಾಗರಾಜ ಚಿನಗುಂಡಿ
Published 28 ಡಿಸೆಂಬರ್ 2018, 19:45 IST
Last Updated 28 ಡಿಸೆಂಬರ್ 2018, 19:45 IST
ನಲಿನ್‌ ಅತುಲ್‌
ನಲಿನ್‌ ಅತುಲ್‌   

ರಾಯಚೂರು: ಕಳೆದ ಆರು ವರ್ಷಗಳಲ್ಲಿ ಜಿಲ್ಲೆಯ ವಿವಿಧೆಡೆ ಸ್ಥಾಪಿಸಿರುವ ಶುದ್ಧ ನೀರಿನ ಘಟಕಗಳ ಪೈಕಿ 98 ಘಟಕಗಳು ಕಾರ್ಯಸ್ಥಗಿತಗೊಳಿಸಿ ಅನೇಕ ತಿಂಗಳುಗಳಾದರೂ ಪುನರಾರಂಭವಾಗಿಲ್ಲ!

2012–13ನೇ ಸಾಲಿನಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ 118 ಶುದ್ಧ ನೀರಿನ ಘಟಕಗಳ ಸ್ಥಾಪನೆ ಮತ್ತು ನಿರ್ವಹಣೆ ಹೊಣೆಯನ್ನು ಹೈದರಾಬಾದ್‌ನ ಸ್ಮಾರ್ಟ್‌ ಇಂಡಿಯಾ ಏಜೆನ್ಸಿಗೆ ವಹಿಸಲಾಗಿತ್ತು. ಇದರಲ್ಲಿ 33 ಘಟಕಗಳು ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿವೆ. 2013–14 ನೇ ಸಾಲಿನಲ್ಲಿ 113 ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲಾಗಿತ್ತು. ಅಹ್ಮದಾಬಾದ್‌ನ ದೊಷಿಯನ್‌ ವಿವೊಲ್ಲಾ ಸೇರಿ ಮೂರು ಏಜೆನ್ಸಿಗಳು ಈ ಘಟಕಗಳನ್ನು ಸ್ಥಾಪಿಸಿ, ನಿರ್ವಹಣೆಯ ಜವಾಬ್ದಾರಿ ಹೊತ್ತುಕೊಂಡಿದೆ. ಸದ್ಯ 34 ಘಟಕಗಳು ದುರಸ್ತಿಗೀಡಾಗಿವೆ.

2014–15 ನೇ ಸಾಲಿನಲ್ಲಿ 242 ಶುದ್ಧ ನೀರಿನ ಘಟಕಗಳು ಸ್ಥಾಪನೆಗೊಂಡಿದ್ದವು. ಅವುಗಳ ಪೈಕಿ 25 ಘಟಕಗಳು ಸ್ಥಗಿತಗೊಂಡಿವೆ. 2016–17 ನೇ ಸಾಲಿನಲ್ಲಿ 72 ಘಟಕಗಳು ಮಂಜೂರಿಯಾಗಿದ್ದವು. ಅವುಗಳ ಪೈಕಿ 38 ಘಟಕಗಳ ಮಾತ್ರ ಸ್ಥಾಪನೆಯಾಗಿದ್ದು, 3 ಘಟಕಗಳು ಕಾರ್ಯನಿರ್ವಹಿಸುತ್ತಿಲ್ಲ. 2017–18 ನೇ ಸಾಲಿನಲ್ಲಿ 72 ಘಟಕಗಳ ಸ್ಥಾಪನೆಗೆ ಸರ್ಕಾರವು ಮಂಜೂರಾತಿ ನೀಡಿದ್ದರೂ 8 ಘಟಕಗಳನ್ನು ಮಾತ್ರ ಸ್ಥಾಪಿಸಲಾಗಿದೆ. ಇವುಗಳಲ್ಲಿ ಎರಡು ಘಟಕಗಳು ಕೆಲಸ ಮಾಡುತ್ತಿಲ್ಲ.

ADVERTISEMENT

ಏಜೆನ್ಸಿಗಳ ನಿರ್ವಹಣೆಯಲ್ಲಿರುವ ಶುದ್ಧ ನೀರಿನ ಘಟಕಗಳು ಹಾಗೂ ಗ್ರಾಮ ಪಂಚಾಯಿತಿ ನಿರ್ವಹಣೆಯಲ್ಲಿರುವ ಶುದ್ಧ ನೀರಿನ ಘಟಕಗಳಿಂದ ಜನರಿಗೆ ಅನುಕೂಲವಾಗುತ್ತಿದೆ. ಆದರೆ, ಇದ್ದಕ್ಕಿದ್ದಂತೆ ತಾಂತ್ರಿಕ ತೊಂದರೆಗೀಡಾಗುವ ಘಟಕಗಳಿಂದಾಗಿ ಜನರು ಆಗಾಗ ತಾಪತ್ರಯ ಅನುಭವಿಸುತ್ತಿದ್ದಾರೆ. ಸೇವಿಸುವ ನೀರಿನ ಬದಲಾವಣೆಯಿಂದ ಶೀತ, ಕೆಮ್ಮು ಹಾಗೂ ಜ್ವರದ ಬಾಧೆಗೆ ಜನರು ಈಡಾಗುತ್ತಿದ್ದಾರೆ. ಎರಡು ಮೂರು ದಿನಗಳಲ್ಲಿ ಸಮಸ್ಯೆ ಪರಿಹಾರವಾಗುತ್ತದೆ ಎಂದು ಜನರು ನಿರೀಕ್ಷಿಸುತ್ತಾರೆ. ಆದರೆ, ವಾರ, ತಿಂಗಳುಗಳಾದರೂ ಕೆಲವು ಕಡೆಗಳಲ್ಲಿ ಘಟಕಗಳ ದುರಸ್ತಿಯಾಗಿಲ್ಲ. ಶುದ್ಧ ನೀರು ಸೇವಿಸಬೇಕೆನ್ನುವ ಗ್ರಾಮೀಣರ ಕನಸು ಆಗಾಗ ನುಚ್ಚುನುರಾಗುತ್ತಿದೆ.

’ಶುದ್ಧ ನೀರನ್ನು ಹಣ ಪಡೆದುಕೊಂಡು ಕೊಡುತ್ತಾರೆ. ಸಮಯಕ್ಕೆ ಸರಿಯಾಗಿ ದುರಸ್ತಿ ಮಾಡಿದರೆ ಎಲ್ಲರಿಗೂ ವಿಶ್ವಾಸ ಬರುತ್ತದೆ. ಎರಡು ದಿನ ಶುದ್ಧ ನೀರು, ಎರಡು ದಿನ ಕೊಳವೆಬಾವಿ ನೀರು ಕುಡಿದರೆ ಮಕ್ಕಳು, ವಯೋವೃದ್ಧರ ಪರಿಸ್ಥಿತಿ ಹದಗೆಡುತ್ತದೆ. ಶುದ್ಧ ನೀರು ಕುಡಿಯುವುದನ್ನು ರೂಢಿ ಮಾಡಿಕೊಂಡಿದ್ದು ತಪ್ಪಾಯಿತು ಅನ್ನಿಸುತ್ತಿದೆ. ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗಳಲ್ಲಿ ಚಿಕಿತ್ಸೆಗಾಗಿ ಜನರು ವೆಚ್ಚ ಮಾಡುವ ಪರಿಸ್ಥಿತಿ ಇದೆ ’ ಎನ್ನುತ್ತಾರೆ ಜಕ್ಕಲದಿನ್ನಿ ಗ್ರಾಮದ ರೈತ ದೇವೇಗೌಡ.

‘ಶುದ್ಧ ನೀರಿನ ಘಟಕದಿಂದ ಕೆಲವು ತಿಂಗಳು ಸರಿಯಾದ ನೀರು ಬರುತ್ತದೆ. ಕೆಲವೊಮ್ಮೆ ನೀರು ಸೋಸಿಕೊಂಡು ಬಂದರೂ ಕುಡಿಯುವುದಕ್ಕೆ ಸಾಧ್ಯವಾಗುವುದಿಲ್ಲ. ನೀರು ಕುಡಿದು ಕೆಲವರು ವಾಂತಿ ಮಾಡಿಕೊಂಡಿದ್ದಾರೆ. ಜನರ ಆರೋಗ್ಯದ ಬಗ್ಗೆ ಅಧಿಕಾರಿಗಳಿಗೆ ಕಾಳಜಿ ಇದ್ದರೆ, ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೇಲಿಂದ ಮೇಲೆ ಬಂದು ತಪಾಸಣೆ ಮಾಡಿಕೊಂಡು ಹೋಗಬೇಕು’ ಎನ್ನುವುದು ಅವರ ಒತ್ತಾಯ.

ಜಿಲ್ಲೆಯ ಶುದ್ಧ ನೀರಿನ ಘಟಕಗಳ ವಿವರ
617 ಮಂಜೂರಿಯಾದ ಘಟಕಗಳು

519 ಘಟಕಗಳನ್ನು ಸ್ಥಾಪಿಸಲಾಗಿದೆ

496 ಘಟಕಗಳು ಕಾರ್ಯಾರಂಭಿಸಿದ್ದವು

398 ಘಟಕಗಳು ಕಾರ್ಯನಿರ್ವಹಣೆಯಲ್ಲಿವೆ

98 ಘಟಕಗಳು ಕಾರ್ಯಸ್ಥಗಿತಗೊಳಿಸಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.