ವಾಡಿ: ತರಕಾರಿ ತಂದು, ತಿಂಡಿ ತಿಂದು, ಅದಕ್ಕೆ ಇದಕ್ಕೆ... ಬಳಸಿ ಎಸೆದ ಪ್ಲಾಸ್ಟಿಕ್ ಕವರ್, ಪೊಟ್ಟಣಗಳನ್ನು ಸಂಗ್ರಹಿಸಿ ಕೊಟ್ಟು ಟೈಲ್ಸ್ ಖರೀದಿಸುವ ಕಾರ್ಯಕ್ಕೆ ಸ್ಥಳೀಯ ಪುರಸಭೆ ಮುಂದಾಗಿದ್ದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜ್ಯದ ವಿವಿಧೆಡೆ ಟೈಲ್ಸ್ ನಿರ್ಮಾಣಕ್ಕಾಗಿ ಪ್ಲಾಸ್ಟಿಕ್ ತ್ಯಾಜ್ಯ ಬಳಸುತ್ತಿದ್ದು ಪಟ್ಟಣದ ಪುರಸಭೆಯೂ ಈ ಪ್ರಯತ್ನಕ್ಕೆ ಮುಂದಾಗಿದೆ.
ಪಟ್ಟಣದಲ್ಲಿ 23 ವಾರ್ಡ್‌ಗಳು, 8,316 ಮನೆಗಳಿದ್ದು 43ಸಾವಿರಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ. ಬಳಸಿ ಬಿಸಾಡುವ ಪ್ಲಾಸ್ಟಿಕ್ ಸಂಗ್ರಹಿಸಿ ಕೊಟ್ಟು ಟೈಲ್ಸ್ ಪಡೆಯಲು ಹೈದರಾಬಾದ್ ಮೂಲದ ರಿವೈವ್ ವೇಸ್ಟ್ ಮ್ಯಾನೇಜ್ಮೆಂಟ್ ಜತೆ ಪುರಸಭೆ ಒಪ್ಪಂದ ಮಾಡಿಕೊಂಡಿದೆ. ಇದಕ್ಕಾಗಿ 2023ರ ಬೆಸ್ಟ್ ಪ್ರಾಕ್ಟೀಸ್ ಅವಾರ್ಡ್ ಪ್ರಶಸ್ತಿ ಗಿಟ್ಟಿಸಿಕೊಂಡಿದೆ.
ಪ್ರತಿದಿನ ಮನೆ, ಅಂಗಡಿ, ವಾಣಿಜ್ಯ ಮಳಿಗೆಗಳಿಂದ ಹಸಿ ಹಾಗೂ ಒಣ ಕಸವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ಸಂಗ್ರಹಿಸಲಾಗುತ್ತಿದೆ. ಸಂಗ್ರಹವಾಗಿರುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರು ವಿಂಗಡಣೆ ಮಾಡಿ ಪ್ಲಾಸ್ಟಿಕ್ ಬೆಲಿಂಗ್ ಮಷೀನ್‌ನಲ್ಲಿ ಹಾಕಿ ಒಪ್ಪವಾಗಿ ಜೋಡಿಸಲಾಗುತ್ತದೆ. 1 ಟನ್ ಪ್ಲಾಸ್ಟಿಕ್ ಸಂಗ್ರಹಗೊಂಡರೆ ಲಾರಿಗಳ ಮೂಲಕ ರಿವೈವ್ ವೇಸ್ಟ್ ಮ್ಯಾನೇಜ್ಮೆಂಟ್‌ಗೆ ಕಳುಹಿಸಿಕೊಡಲಾಗುತ್ತದೆ. ಇಲ್ಲಿಯವರೆಗೂ 5 ಟನ್ ಪ್ಲಾಸ್ಟಿಕ್ ತ್ಯಾಜ್ಯ ಕಳುಹಿಸಿಕೊಡಲಾಗಿದ್ದು 500 ಟೈಲ್ಸ್ ತರಿಸಿಕೊಳ್ಳಲಾಗಿದೆ ಎನ್ನುತ್ತಾರೆ ನೈರ್ಮಲ್ಯ ಅಧಿಕಾರಿ ಲತಾಮಣಿ.
ಪ್ಲಾಸ್ಟಿಕ್‌ನಿಂದ ತಯಾರಿಸಿದ ಇಂಟರ್ ಲಾಕಿಂಗ್ ಸಿಸ್ಟಮ್ ಟೈಲ್ಸ್‌ಗಳನ್ನು ಸದ್ಯ ಕಸ ವಿಲೇವಾರಿ ಘಟಕದ ಕಚೇರಿ ಮುಂದೆ ಹಾಕಲಾಗಿದೆ.
ಪುರಸಭೆ ವ್ಯಾಪ್ತಿಯ ಸ್ವಚ್ಛತೆಗಾಗಿ 48 ಜನ ಪೌರಕಾರ್ಮಿಕರು ಶ್ರಮಿಸುತ್ತಿದ್ದು ಕಸವಿಲೇವಾರಿ ಘಟಕದಲ್ಲೇ 15 ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಸಂಗ್ರಹವಾಗುವ ಒಟ್ಟು ಕಸವನ್ನು ಟ್ರ್ಯಾಕ್ಟರ್ ಮೂಲಕ ಇಲ್ಲಿಗೆ ತಂದು ಅದರಿಂದ 320ರಿಂದ 350 ಕೆ.ಜಿ ಪ್ಲಾಸ್ಟಿಕ್ ಪ್ರತ್ಯೇಕಿಸಲಾಗುತ್ತಿದೆ.
‘ವಿಲೇವಾರಿ ಘಟಕದಲ್ಲೇ ಟೈಲ್ಸ್ ತಯಾರಿ’ ಕಸ ವಿಲೇವಾರಿ ಘಟಕದಲ್ಲಿಯೇ ಪ್ಲಾಸ್ಟಿಕ್ ಕರಗಿಸಿ ಟೈಲ್ಸ್ ತಯಾರಿಸುವಂತೆ ಕಲಬುರಗಿಯ ರಿವೈವ್ ವೇಸ್ಟ್ ಮ್ಯಾನೇಜ್ಮೆಂಟ್ ಜತೆ ಮಾತನಾಡಲಾಗಿದ್ದು ಶೆಡ್ ಹಾಗೂ ನಿವೇಶನ ಒದಗಿಸಿದರೆ ಇಲ್ಲಿಯೇ ಕಾರ್ಯಪ್ರವೃತ್ತರಾಗುವುದಾಗಿ ತಿಳಿಸಿದ್ದಾರೆ. ಅದಕ್ಕಾಗಿ ಸ್ಥಳವಕಾಶ ಕಲ್ಪಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಸ್ಥಳೀಯವಾಗಿಯೇ ಪ್ಲಾಸ್ಟಿಕ್ ಕರಗಿಸಿ ಟೈಲ್ಸ್ ತಯಾರಿಸಿದರೆ ಸುತ್ತಲಿನ ಚಿತ್ತಾಪುರ ತಾಲ್ಲೂಕಿನ ಬಹುತೇಕ ಪ್ಲಾಸ್ಟಿಕ್ ಇಲ್ಲಿ ಟೈಲ್ಸ್ ರೂಪ ತಳೆದು ಮತ್ತೆ ಜನರಿಗೆ ಸಿಗಲಿದೆ ಎನ್ನುತ್ತಾರೆ ಪುರಸಭೆ ಮುಖ್ಯಧಿಕಾರಿ ಸಿ.ಫಕೃದ್ದಿನ್ ಸಾಬ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.