ADVERTISEMENT

ಹೆಚ್ಚಿದ ದಾಹಕ್ಕೆ ಬರಿದಾಗುತ್ತಿದೆ ಜಲ ಸಂಗ್ರಹ!

ಕೆರೆ, ಜಲಾಶಯಗಳ ನೀರನ್ನು ಆಪೋಶನ ಪಡೆಯುತ್ತಿದೆ ಬಿಸಿಲು

ನಾಗರಾಜ ಚಿನಗುಂಡಿ
Published 19 ಮಾರ್ಚ್ 2019, 10:20 IST
Last Updated 19 ಮಾರ್ಚ್ 2019, 10:20 IST
ನಲಿನ್‌ ಅತುಲ್‌
ನಲಿನ್‌ ಅತುಲ್‌   

ರಾಯಚೂರು: ಬೇಸಿಗೆ ಕಾಲದ ದಾಹ ಎದುರಿಸಲು ಕಾಲುವೆಗಳ ಮೂಲಕ ಕೆರೆಗಳಿಗೆ ಮತ್ತು ಬ್ರಿಡ್ಜ್‌ ಕಂ ಬ್ಯಾರೇಜ್‌ಗಳಲ್ಲಿ ಸಂಗ್ರಹಿಸಿಕೊಂಡಿದ್ದ ನೀರು ಏಪ್ರಿಲ್‌ ಆರಂಭದಲ್ಲೆ ಬರಿದಾಗುತ್ತಿದೆ!

ಲಿಂಗಸುಗೂರು ಪಟ್ಟಣ ಪಕ್ಕದ ಕೆರೆ ಭರ್ತಿ ಇರುವುರಿಂದನೀರಿನ ಸಮಸ್ಯೆಯಿಲ್ಲ. ಇನ್ನುಳಿದಂತೆ ದೇವದುರ್ಗ, ಸಿಂಧನೂರು, ರಾಯಚೂರು ಮತ್ತು ಮಾನ್ವಿ ತಾಲ್ಲೂಕು ಕೇಂದ್ರಗಳಲ್ಲಿ ನೀರಿಗಾಗಿ ಮೇ ತಿಂಗಳಲ್ಲಿ ಹಾಹಾಕಾರ ಶುರುವಾಗಲಿದೆ. ಗ್ರಾಮೀಣ ಭಾಗಗಳಲ್ಲಿರುವ ಕೆರೆಗಳು, ತೆರೆದ ಬಾವಿಗಳು ಹಾಗೂ ಮೇಲಿಂದ ಮೇಲೆ ಕೊರೆದ ಕೊಳವೆಬಾವಿಗಳಲ್ಲಿ ಈಗಾಗಲೇ ನೀರು ಬರಿದಾಗತೊಡಗಿದೆ ಎನ್ನುವ ಮಾಹಿತಿಯನ್ನು ಸರ್ಕಾರಿ ಅಧಿಕಾರಿಗಳು ನೀಡುತ್ತಿದ್ದಾರೆ.

ಕೃಷ್ಣಾನದಿ ಹರಿವು ಆಶ್ರಯಿಸಿದ ದೇವದುರ್ಗ ಪಟ್ಟಣ ಮತ್ತು ನದಿಪಾತ್ರದ ಗ್ರಾಮಗಳಲ್ಲಿ ನದಿ ಬತ್ತಿದ್ದರಿಂದ ಈಗಲೇ ನೀರಿನ ಸಮಸ್ಯೆ ಅರಂಭವಾಗಿದೆ. ಸಿಂಧನೂರು ನಗರಕ್ಕೆ ನೀರು ಒದಗಿಸಲು ಸಂಗ್ರಹಿಸಿಕೊಡಿದ್ದ ಕೆರೆ ಖಾಲಿಯಾಗುತ್ತಿದೆ. ಬಾಂದಾರಿನಲ್ಲಿ ಬೊಂಗಾ ಬಿದ್ದಿರುವುದರಿಂದ ಹೆಚ್ಚು ನೀರು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಮಾನ್ವಿಯಲ್ಲಿ ಶಾಶ್ವತ ಕುಡಿಯುವ ನೀರಿನ ಕಾಮಗಾರಿ ಇನ್ನೂ ಮುಗಿದಿಲ್ಲ. ನೀರಿಗಾಗಿ ತತ್ವಾರ ಪಡುವ ಸ್ಥಿತಿ ಇದೆ.

ADVERTISEMENT

ರಾಯಚೂರು ಪಟ್ಟಣಕ್ಕೆ ಬೇಸಿಗೆಪೂರ್ಣ ಅಗತ್ಯಕ್ಕಾಗಿ ಸಂಗ್ರಹಿಸಿದ್ದ ನೀರಿನ ಪ್ರಮಾಣದಲ್ಲಿ ಭಾರಿ ಕುಸಿತವಾಗಿದೆ. ತುಂಗಭದ್ರಾ ಎಡದಂಡೆ ಕಾಲುವೆ (ಟಿಎಲ್‌ಬಿಸಿ)ಯಿಂದ ನೀರು ಸಂಗ್ರಹಿಸಿದ್ದ ರಾಂಪೂರ ಕೆರೆಯಲ್ಲಿ ತಳಮಟ್ಟ ಕಾಣುತ್ತಿದೆ. ಕೃಷ್ಣಾನದಿಯಲ್ಲಿ ನೀರು ಹರಿದು ಬರುತ್ತಿಲ್ಲ. ಹೀಗಾಗಿ ಜಾಕ್ವೆಲ್‌ಗೆ ನೀರು ಸಾಕಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ನೀರಿನ ಬಳಕೆಯನ್ನು ಅನಿವಾರ್ಯವಾಗಿ ಮಿತಗೊಳಿಸುವ ಸ್ಥಿತಿ ಎದುರಾಗಲಿದೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹೇಳುವಂತೆ, ’ಈ ವರ್ಷ ಬೇಸಿಗೆ ಬಿಸಿಲು ಫೆಬ್ರುವರಿಯಿಂದಲೇ ಆರಂಭವಾಗಿರುವುದು ನೀರಿನ ಸಮಸ್ಯೆ ಉದ್ಭವಿಸಲು ಕಾರಣ. ಕಳೆದ ವರ್ಷ ಸಮರ್ಪಕ ಮಳೆ ಸುರಿದಿದ್ದರೆ ಅಂತರ್ಜಲದಿಂದ ಸಮಸ್ಯೆಗೆ ಒಂದಿಷ್ಟು ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಅಂತರ್ಜಲವೂ ಇಲ್ಲ ಹಾಗೂ ಬಿಸಿಲಿನ ತಾಪಕ್ಕೆ ಸಂಗ್ರಹಿಸಿಕೊಂಡಿದ್ದ ನೀರು ಕೂಡಾ ಬೇಗನೆ ಆವಿಯಾಗುತ್ತಿದೆ.

239 ಕೊಳವೆ ಬಾವಿ ಸ್ಥಗಿತ

ರಾಯಚೂರು ತಾಲ್ಲೂಕಿನ 162 ಗ್ರಾಮಗಳ ಪೈಕಿ 34 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದ್ದು, ತಾಲ್ಲೂಕಿನಲ್ಲಿ 239 ಕೊಳವೆಬಾವಿಗಳು ನಿಂತುಹೋಗಿವೆ. ಯರಗೇರಾ ಮತ್ತು ಯದ್ಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಲಾ 14 ಅತಿಹೆಚ್ಚು ಕೊಳವೆಬಾವಿಗಳು ಕಾರ್ಯಸ್ಥಗಿತವಾಗಿವೆ. 219 ಪೈಪ್‌ಲೈನ್‌ ಮೂಲಕ ನೀರು ಒದಗಿಸಲಾಗುತ್ತಿದೆ. ತಾಲ್ಲೂಕಿನಲ್ಲಿರುವ 112 ಶುದ್ಧ ನೀರಿನ ಘಟಕಗಳ ಪೈಕಿ 61 ಮಾತ್ರ ಕಾರ್ಯ ಮಾಡುತ್ತಿವೆ.

ಸಮಸ್ಯಾತ್ಮಕ ಗ್ರಾಮಗಳಲ್ಲಿ ಒಟ್ಟು 99 ಕೊಳವೆಬಾವಿಗಳನ್ನು ಕೊರೆಸುವ ಯೋಜನೆ ಮಾಡಿಕೊಳ್ಳಲಾಗಿದೆ. ಎಲ್‌.ಕೆ. ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅತಿಹೆಚ್ಚು ಎಂಟು ಕೊಳವೆಬಾವಿಗಳನ್ನು ಕೊರೆಯಲು ಬೇಸಿಗೆ ಪೂರ್ವದಲ್ಲೇ ತಾಲ್ಲೂಕು ಪಂಚಾಯಿತಿಯಿಂದ ಯೋಜನೆ ಮಾಡಿಕೊಳ್ಳಲಾಗಿದೆ. 74 ಕೊಳವೆಬಾವಿಗಳಿಗೆ ಪೈಪ್‌ಲೈನ್‌ ಕಾಮಗಾರಿ ವಿಸ್ತರಣೆ ಮಾಡಲಾಗಿದೆ. ತಾಲ್ಲೂಕಿನಲ್ಲಿ 36 ಖಾಸಗಿ ಕೊಳವೆಬಾವಿಗಳನ್ನು ಗುರುತಿಸಿ ಬಾಡಿಗೆ ಪಡೆಯಲಾಗಿದೆ.

***

ಊರಲ್ಲಿ ಮೂರು ಕೊಳವೆಬಾವಿಯಲ್ಲಿ ನೀರು ನಿಂತುಹೋಗಿದ್ದು, ಉಳಿದ ಒಂದು ಕೊಳವೆಬಾವಿ ನೀರು ಸಣ್ಣದಾಗಿರುವುದರಿಂದ ಟ್ಯಾಂಕ್‌ಗೆ ಏರುವುದಿಲ್ಲ. ಅದು ಸ್ಥಗಿತವಾದರೆ ದೇವರೆ ಕಾಪಾಡಬೇಕು.

ಭೀಮಣ್ಣ,ಮುರಕಿದೊಡ್ಡಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.