ADVERTISEMENT

ಮಳೆಯಲ್ಲೇ ಜಲಾವೃತ ಪ್ರದೇಶ ಪರಿಶೀಲನೆ

ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಲು ಜಿಲ್ಲಾಧಿಕಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2020, 3:11 IST
Last Updated 27 ಸೆಪ್ಟೆಂಬರ್ 2020, 3:11 IST
ರಾಯಚೂರಿನ ಮಾವಿನ ಕೆರೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಭೇಟಿ ನೀಡಿ ಪರಿಶೀಲಿಸಿದರು
ರಾಯಚೂರಿನ ಮಾವಿನ ಕೆರೆಗೆ ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಭೇಟಿ ನೀಡಿ ಪರಿಶೀಲಿಸಿದರು   

ರಾಯಚೂರು: ‘ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿ ಹಾನಿಯಾದ ಕುಟುಂಬಗಳಿಗೆ ₹ 10 ಸಾವಿರ ಪರಿಹಾರ ನೀಡಲಾಗುವುದು. ಗಂಜಿ ಕೇಂದ್ರ ಆರಂಭಿಸಿ ಊಟದ ವ್ಯವಸ್ಥೆ ಮಾಡಲಾಗುತ್ತಿದ್ದು ಯಾರು ಆತಂಕಪಡಬೇಡಿ‘ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಹೇಳಿದರು.

ನಗರದಲ್ಲಿ ಮಳೆಗೆ ಜಲಾವೃತಗೊಂಡ ನಗರದ ವಿವಿಧ ಬಡಾವಣೆಗಳಿಗೆ ಶನಿವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಜನರೊಂದಿಗೆ ಮಾತನಾಡಿದರು.

ರಸ್ತೆ ಹಾಗೂ ಮನೆಗಳಲ್ಲಿ ಸಂಗ್ರಹಗೊಂಡ ನೀರನ್ನು ಹೊರಹಾಕಲು ಅನುಕೂಲವಾಗುವಂತೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಆಡಳಿತದಿಂದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ. ವಿವಿಧ ಪ್ರದೇಶಗಳಲ್ಲಿ ನೀರು ನಿಂತಿರುವ ಪ್ರದೇಶಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅವರು ಅಗತ್ಯವಿರುವ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಂಡು ಅಲ್ಲಿ ಮಳೆ ನೀರನ್ನು ಹೊರ ಹಾಕುವ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಹೇಳಿದರು.

ADVERTISEMENT

ನಗರದ ಮಾವಿನ ಕೆರೆಗೆ ಭೇಟಿ ನೀಡಿ, ಅಲ್ಲಿಗೆ ಹರಿದು ಬರುತ್ತಿರುವ ಹಾಗೂ ಹೊರ ಹೋಗುತ್ತಿರುವ ನೀರನ್ನು ವೀಕ್ಷಿಸಿ ಯಾರು ಕೆರೆಗೆ ಇಳಿಯಬಾರದು ಎಂದು ನಿರ್ದೇಶನ ನೀಡಿದರು. ಆನಂತರ ಡ್ಯಾಡಿ ಕಾಲೊನಿ, ಜಹೀರಬಾದ್, ಹರಿಜನವಾಡ, ನೀರಭಾವಿ ಕುಂಟ ಮತ್ತು ಗದ್ವಾಲ್ ರಸ್ತೆಯಲ್ಲಿರುವ ಕಾಕಿನ ಕರೆ ಮತ್ತು ಜಲಾಲ್ ನಗರದಲ್ಲಿ ಮಳೆ ನೀರು ನಿಂತ ವಿವಿಧ ಸ್ಥಳಗಳನ್ನು ಪರಿಶೀಲಿಸಿ ಸ್ಥಳೀಯರೊಂದಿಗೆ ಮಾತನಾಡಿದರು.

ಡ್ಯಾಡಿ ಕಾಲೊನಿ ಸೇರಿದಂತೆ ಹಲವೆಡೆ ಜಲಾವೃತವಾದ ಕಾರಣ ಮಳೆ ನೀರು ಸಾರಗವಾಗಿ ಹರಿಯಲು ಪರ್ಯಾಯ ಮಾರ್ಗ ಕಲ್ಪಿಸಬೇಕು. ಹರಿಜನವಾಡ ಬಡಾವಣೆಯಲ್ಲಿ ರಾಜ ಕಾಲುವೆ ಸ್ವಚ್ಛಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ
ನೀಡಿದರು.

ಎಲ್ಲಾ ನೋಡಲ್ ಅಧಿಕಾರಿಗಳು ಮಳೆ ಕಡಿಮೆಯಾಗುವವರೆಗೆ ಮತ್ತು ಪರಿಸ್ಥಿತಿ ಸುಧಾರಿಸುವವರೆಗೆ ತಮಗೆ ನಿಯೋಜಿಸಲ್ಪಟ್ಟ ಪ್ರದೇಶದಲ್ಲಿ ಕಡ್ಡಾಯವಾಗಿ ಇರಬೇಕು. ಮಳೆ ನೀರು ಆದಷ್ಟು ಬೇಗ ಹರಿದುಹೋಗುವಂತೆ ಎಲ್ಲಾ ವ್ಯವಸ್ಥೆ, ಆಹಾರ ಕೊರತೆಯಾಗಿರುವ ಜನರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಸಾಧ್ಯವಾದಲ್ಲಿ ಸ್ವತಃ ಅಥವಾ ರಾಯಚೂರು ತಾಲ್ಲೂಕ ತಹಶೀಲ್ದಾರ್‌ ಅವರನ್ನು ಸಂಪರ್ಕಿಸಬೇಕು ಎಂದು ಸೂಚಿಸಿದರು.

ನಿರಾಶ್ರಿತರಿಗೆ ಕಲ್ಯಾಣ ಮಂಟಪ, ಶಾಲೆ, ಹಾಸ್ಟೆಲ್, ಇತ್ಯಾದಿ ಸ್ಥಳಗಳಲ್ಲಿ ಆಶ್ರಯ ನೀಡಬೇಕು. ನಗರಸಭೆಯ ಸಹಾಯ ಪಡೆದು ಊಟ ಹಂಚುವ, ಇತರೆ ಯಾವುದೇ ಕಾರ್ಯಕ್ಕೆ ನೋಡಲ್ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಣೆಗೆ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಈ ವೇಳೆ ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ, ನಗರಸಭೆಯ ಎಂಜಿನಿಯರ್ ಶಫಿ, ಪಿ. ಬೂದೆಪ್ಪ, ನಾಗರಾಜ ಇತರೆ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.