ರಾಯಚೂರು: ರಾಯಚೂರು ಗ್ರಾಮೀಣ ಕ್ಷೇತ್ರದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಆಡಳಿತಗಳು ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಪದೇ ಪದೇ ಎಡುವತ್ತಲೇ ಇದೆ. ಪ್ರತಿ ವರ್ಷದಂತೆ ಈ ವರ್ಷವೂ ಬಿಸಿಲಿನ ಧಗೆ ಏರುತ್ತಿದ್ದಂತೆಯೇ ಇಲ್ಲಿ ನೀರಿನ ಸಮಸ್ಯೆಯೂ ಬಿಗಡಾಯಿಸಿದೆ.
ಚುನಾವಣೆಗಳು ಬರುತ್ತವೆ, ಹೋಗುತ್ತವೆ ಆದರೆ ಜನರಿಗೆ ಎಷ್ಟು ಚುನಾವಣೆಗಳು ಬಂದರೂ ಕೇವಲ ಮತ ಹಾಕುವ ಕಾಯಕ ಬಿಟ್ಟರೆ ತಮ್ಮ ಊರಿನ ಮೂಲಸೌಕರ್ಯ ಕೊರತೆ, ಸಮಸ್ಯೆ ಮಾತ್ರ ನೀಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹನಿ ನೀರಿಗೂ ಪರಿತಪಿಸುತ್ತ ಮೂಲ ಸೌಕರ್ಯಗಳನ್ನೂ ಕಾಣದಂತಹ ದುಸ್ಥಿತಿಗೆ ಗ್ರಾಮೀಣ ಪ್ರದೇಶದ ಜನ ಸಿಲುಕಿದ್ದಾರೆ.
ರಾಯಚೂರು ತಾಲ್ಲೂಕಿನ ಕಮಲಾಪುರ, ಹಳೆ ಗೋನವರ, ಮಂಜರ್ಲಾ ಹಾಗೂ ಮಿಟ್ಟಿಮಲ್ಕಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳು ಸೇರಿ ಸುತ್ತಮುತ್ತಲಿನ ಗ್ರಾಮದಲ್ಲಿ ನೀರಿನ ಅಭಾವ ಗಂಭೀರವಾಗಿದೆ. ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆಯತೊಡಗಿದೆ.
2,400 ಜನಸಂಖ್ಯೆ ಹೊಂದಿರುವ ಕಮಲಾಪುರ ಗ್ರಾಮದಲ್ಲಿ 1,700 ಮನೆಗಳಿವೆ. ಆದರೆ ಇಲ್ಲಿರುವುದು ಒಂದೇ ಕೊಳವೆಬಾವಿ ಇದೆ. ಮಂಜರ್ಲಾ ಗ್ರಾಮ 600ಮನೆ, 1,500 ಜನಸಂಖ್ಯೆ ಹೊಂದಿದೆ. ಈ ಗ್ರಾಮದಲ್ಲಿ ಮೂರು ಕೊಳವೆಬಾವಿಗಳಿದ್ದರೂ ಸಮರ್ಪಕ ನಿರ್ವಹಣೆ ಮಾಡದ ಕಾರಣ ಎರಡು ಹಾಳಾಗಿವೆ. ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಕೊಳವೆಬಾವಿ ದುರಸ್ತಿಗೆ ನೆರವು ಕಲ್ಪಿಸುತ್ತಿಲ್ಲ.
ಸುಸುಜ್ಜಿತ ಶುದ್ಧ ನೀರಿನ ಟ್ಯಾಂಕ್ ಗಳಿದ್ದರೂ ನೀರಿಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ. ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ. ಟ್ಯಾಂಕ್ ಬಳಕೆಯಿಲ್ಲದೆ ಟ್ಯಾಂಕ್ ಗಳ ಕಂಬಿಗಳು ತುಕ್ಕು ಹಿಡಿಯುತ್ತಿವೆ. ನಿರ್ವಹಣೆಯ ನಿರ್ಲಕ್ಷ್ಯ ಹಾಗೂ ತಾಂತ್ರಿಕ ಸಮಸ್ಯೆಯಿಂದ ಟ್ಯಾಂಕ್ ಗಳು ಸ್ಥಗಿತಗೊಂಡ ನಂತರ ಗ್ರಾಮಸ್ಥರಿಗೆ ಬೇಸಿಗೆ ದಿನಮಾನಗಳಲ್ಲಿ ಚುರುಕು ಬಿಸಿಲಲ್ಲಿ ಶುದ್ಧ ಕುಡಿಯುವ ನೀರು ಅರಸಿ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ.
ಗ್ರಾಮಗಳಲ್ಲಿ ಕುಡಿಯುವ ನೀರಿನ ಕೆರೆ ಇದ್ದರೂ ಕೆರೆ ತುಂಬಿಸುವಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ತೋರಿದ್ದಾರೆ. ಲಭ್ಯವಿರುವ ನೀರನ್ನೇ ಸಮರ್ಪಕವಾಗಿ ಗ್ರಾಮಸ್ಥರಿಗೆ ಪೂರೈಕೆ ಮಾಡಲು ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ.
ಕುಡಿಯುವ ನೀರಿನ ಸಮಸ್ಯೆಗೆ ಸ್ಪಂದಿಸಬೇಕಾದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಿದೆ. ನರೇಗಾದಲ್ಲಿ ಕೂಲಿಪಾವತಿ ವಿಳಂಬವಾಗುತ್ತಿರುವ ಕಾರಣ ಜನರು ಕೆಲಸಕ್ಕೆ ಬರುತ್ತಿಲ್ಲ. ನೀರೂ ಇಲ್ಲ, ದುಡಿದ ಹಣವೂ ಇಲ್ಲ ಎಂದ ಮೇಲೆ ಏಕೆ ಕೆಲಸಕ್ಕೆ ಬರಬೇಕು ಎಂದು ಗ್ರಾಮಸ್ಥರು ಪ್ರಶ್ನಿಸುತ್ತಾರೆ.
‘ಜನರು ಕನಿಷ್ಠ ಅರ್ಧಗಂಟೆಯಾದರೂ ನೀರು ಬಿಡುವಂತೆ ಪಿಡಿಒ ಗಳಿಗೆ ಕರೆ ಮಾಡಿದರೆ ಹೊಳೆ ಹರಿಸಬೇಕಾ? ಎಂದು ಉಡಾಫೆಯಿಂದ ಉತ್ತರಿಸುತ್ತಾರೆ. ಕೆಲ ಗ್ರಾಮಗಳಲ್ಲಿ ಕೇವಲ 8 ನಿಮಿಷ ಮಾತ್ರ ನೀರು ಬಿಡುತ್ತಾರೆ. ಹೀಗಾಗಿ ಬೇಸಿಗೆಯಲ್ಲಿ ಜನ ಕುಡಿಯುವ ನೀರು ಸಂಗ್ರಹಿಸಿಕೊಟ್ಟಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ದೇವನಪಲ್ಲಿ ಗ್ರಾಮಸ್ಥ ಉರುಕುಂದಪ್ಪ.
'ಕೊಳವೆ ಬಾವಿ ಮತ್ತು ಇತರೆ ಜಲಮೂಲಗಳ ನಿರ್ವಹಣೆಯಲ್ಲಿ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ವಿಫಲವಾಗಿವೆ. ಅಸಮರ್ಪಕ ನಿರ್ವಹಣೆಯ ಪರಿಣಾಮ ನೀರಿನ ಸಮಸ್ಯೆ ತೀವ್ರವಾಗುತ್ತಿದೆ' ಎಂದು ವಿನಾಯಕ ಕಮಲಾಪುರ ದೂರುತ್ತಾರೆ.
ಬೇಸಿಗೆ ಮೊದಲೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ನೀರು ಹೊತ್ತುತಂದು ಸಾಕಾಗಿದ್ದು ಜಿಲ್ಲೆಯಲ್ಲಿ ನಮ್ಮ ಗೋಳು ಕೇಳುವವರಿಲ್ಲ ಜೆ. ತಿಮ್ಮಪ್ಪ ನಾಯಕ ಮಂಜರ್ಲಾ ಗ್ರಾಮಸ್ಥ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಹಾಗೂ ಶಾಸಕರಿಗೆ ನೀರಿನ ಸಮಸ್ಯೆ ಬಗೆ ಹರಿಸುವಂತೆ ಹಲವು ಬಾರಿ ಮನವಿ ಮಾಡಿಕೊಂಡರೂ ಯಾರೊಬ್ಬರೂ ಸ್ಪಂದಿಸುತ್ತಿಲ್ಲ ಮಹಾದೇವ ದೇವನಪಲ್ಲಿ ಗ್ರಾಮಸ್ಥ ಗ್ರಾಮದಲ್ಲಿ ಕೊಳವೆಬಾವಿಗೆ ಅಳವಡಿಸಿದ್ದ ನೀರಿನ ಮೋಟರ್ ಸುಟ್ಟು ಹೋಗಿದ್ದು ಶೀಘ್ರ ದುರಸ್ತಿಪಡಿಸಿ ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ತಾರಕೇಶ್ವರಿ ಕಮಲಾಪುರ ಗ್ರಾಂ.ಪಂ ಪಿಡಿಒ ರಾಯಚೂರು ತಾಲ್ಲೂಕಿನ ಕಮಲಾಪುರ ಮತ್ತು ಮಂಜರ್ಲಾ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿ ಸಮಸ್ಯೆ ಬಗೆಹರಿಸಿ ನೀರು ಸರಬರಾಜು ಮಾಡಲಾಗುವುದು ಚಂದ್ರಶೇಖರ ಪವಾರ ತಾ.ಪಂ ಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.