ADVERTISEMENT

ಎನ್‌ಎಸ್‌ಎಸ್ ಸೇವೆಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಚನ್ನಪಟ್ಟಣ: ಎನ್ನೆಸ್ಸೆಸ್ ಘಟಕಗಳು ಗ್ರಾಮಾಂತರ ಪ್ರದೇಶಗಳಲ್ಲಿ ಶಿಬಿರ ಆಯೋಜಿಸಿ ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಹೊಂಗನೂರು ಗ್ರಾ.ಪಂ. ಅಧ್ಯಕ್ಷ ಅನಂತ ಕೃಷ್ಣರಾಜೇ ಅರಸು ಪ್ರಶಂಸೆ ವ್ಯಕ್ತಪಡಿಸಿದರು.

ಪಟ್ಟಣದ ವಿದ್ಯಾನಿಕೇತನ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕದ ವತಿಯಿಂದ ತಾಲ್ಲೂಕಿನ ಚನ್ನಂಕೇಗೌಡನ ದೊಡ್ಡಿಯಲ್ಲಿ ಆಯೋಜಿಸಿರುವ ಎನ್ನೆಸ್ಸೆಸ್ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಶಿಬಿರಾರ್ಥಿಗಳು ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಅರಿತು ಅವುಗಳ ಶಾಶ್ವತ ಪರಿಹಾರಕ್ಕೆ ಪ್ರಯತ್ನಿಸಬೇಕು ಎಂದು ಅವರು ತಿಳಿಸಿದರು.

ಶಿಬಿರ ಉದ್ಘಾಟಿಸಿದ ಬಿಜೆಪಿ ಮುಖಂಡ ಸಿ.ಪಿ.ನಾಗೇಶ್ ಮಾತನಾಡಿ, ಶಿಬಿರದ ವೇಳೆ ಸ್ವಚ್ಚತಾ ಕಾರ್ಯಕ್ರಮ ನಡೆಸುವುದಲ್ಲದೆ ಜನತೆಗೆ ಆರೋಗ್ಯ ತಪಾಸಣೆ, ಕಾನೂನಿನ ಬಗ್ಗೆ ಅರಿವು, ಜಾನುವಾರು ಆರೋಗ್ಯ ತಪಾಸಣೆ ಇಂತಹ ಕಾರ್ಯಕ್ರಮ ಹಾಕಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಟಿ.ಎಂ.ರಾಜು ಮಾತನಾಡಿ, ಶಿಬಿರಾರ್ಥಿಗಳು ಶ್ರಮದಾನದ ಮೂಲಕ ಗ್ರಾಮದ ಸೇವೆ ಮಾಡಲು ಆಗಮಿಸಿದ್ದು, ಗ್ರಾಮಸ್ಥರು ಸಹಕಾರ ನೀಡುವಂತೆ ಮನವಿ ಮಾಡಿದರು.

ನಿವೃತ್ತ ಮುಖ್ಯ ಶಿಕ್ಷಕ ಭುಜಂಗಯ್ಯ, ಎಂಪಿಸಿಎಸ್ ಅಧ್ಯಕ್ಷ ಗಿರಿಯಪ್ಪ, ಗ್ರಾಮದ ಮುಖಂಡ ಮಹದೇವ್ ಮುಂತಾದವರು ಉಪಸ್ಥಿತರಿದ್ದರು.

ಶಿಬಿರಾಧಿಕಾರಿ ಬಿ.ಪಿ.ಸುರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಉಪನ್ಯಾಸಕ ವೆಂಕಟೇಶ್ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ಚೇತನ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.