ADVERTISEMENT

ಒಡಲು ತಣಿಸಲು ಕಾದಿರುವ ಕಲ್ಲಂಗಡಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2014, 8:51 IST
Last Updated 24 ಫೆಬ್ರುವರಿ 2014, 8:51 IST
ರಾಮನಗರದ ಬೆಂಗಳೂರು-–ಮೈಸೂರು ರಸ್ತೆಯಲ್ಲಿ ಮಾರುತ್ತಿರುವ ಕಲ್ಲಂಗಡಿ ಹಣ್ಣು
ರಾಮನಗರದ ಬೆಂಗಳೂರು-–ಮೈಸೂರು ರಸ್ತೆಯಲ್ಲಿ ಮಾರುತ್ತಿರುವ ಕಲ್ಲಂಗಡಿ ಹಣ್ಣು   

ರಾಮನಗರ: ಜಿಲ್ಲೆಯಲ್ಲಿ  ಚಳಿ ಕಡಿ­ಮೆ­­­­­­­­­­ಯಾಗಿ ಬಿಸಿಲಿನ ಝಳ ಹೆಚ್ಚುತ್ತಿದೆ. ಮುಂಜಾನೆ ಚಳಿ ಇದ್ದರೂ ಮಧ್ಯಾ­ಹ್ನದ ವೇಳೆಗೆ ಸೂರ್ಯ ನೆತ್ತಿ ಸುಡು­ತ್ತಾನೆ. ಹೀಗಾಗಿ, ನಾಗರಿಕರು ಕಲ್ಲಂ­ಗಡಿ ಹಣ್ಣು ತಿಂದು ದೇಹ ತಂಪು ಮಾಡಿ­ಕೊಳ್ಳುತ್ತಿದ್ದಾರೆ.

ಮಾಗಿಯ ಚಳಿ ಮಾಸುವ ಮುನ್ನವೇ ನಗರದಲ್ಲಿ ಕಲ್ಲಂಗಡಿ ಹಣ್ಣು­ಗಳ ಮಾರಾಟ ಭರಾಟೆ ಪ್ರಾರಂಭ­ವಾಗಿದೆ.

ನಗರದ ಬೆಂಗಳೂರು–ಮೈಸೂರು ರಸ್ತೆ­ಯಲ್ಲಿ  ಹಣ್ಣಿನ ಅಂಗಡಿಗಳನ್ನು ತೆರೆ­ಯಲಾಗಿದ್ದು, ವ್ಯಾಪಾರ ವಹಿ­ವಾಟು ಬಿರುಸಿನಿಂದ ಸಾಗಿದೆ.
ಪ್ರತಿ 1 ಕೆ.ಜಿ ಕಲ್ಲಂಗಡಿ ಬೆಲೆ 15 ರೂಪಾಯಿ  ನಿಗದಿಪಡಿಸಲಾಗಿದೆ.

ಜಿಲ್ಲೆಯಲ್ಲಿ ನೀರಿನ ಅಭಾವ­ವಿರು­ವುದ­ರಿಂದ ಕಲ್ಲಂಗಡಿ ಬೆಳೆ ಬೆಳೆ­ಯುವ­ವರು ತೀರಾ ಅಪರೂಪ. ಹಾಗಾಗಿ ಇಲ್ಲಿನ ವ್ಯಾಪಾರಿಗಳು ಆಂಧ್ರಪ್ರದೇಶ­ದಿಂದ ಕಲ್ಲಂಗಡಿ ತಂದು ಮಾರಾಟ ಮಾಡುತ್ತಿದ್ದಾರೆ.

‘ಬಿಸಿಲು ಹೆಚ್ಚುತ್ತಿದ್ದಂತೆ ದೇಹ ಒಣ­ಗುತ್ತದೆ.  ಊಟದ ಬದಲು ತಂಪು ಪಾನೀಯ ಹಾಗೂ ತಾಜಾ ಹಣ್ಣು­ಗಳನ್ನು ಸೇವಿಸಲು ಮನಸಾ­ಗುತ್ತದೆ.  ಕಲ್ಲಂಗಡಿ ಹಣ್ಣು ಹೆಚ್ಚು ತಂಪು ಮತ್ತು ನೀರಿನ ಅಂಶವನ್ನು ಒದಗಿ­ಸುವುದರಿಂದ ಬೇಸಿಗೆಯಲ್ಲಿ ಕಲ್ಲಂಗಡಿಯನ್ನು ಯಥೇಚ್ಛ­­ವಾಗಿ ಸೇವಿ­ಸುತ್ತೇನೆ ಎನ್ನುತ್ತಾರೆ’ ನಗರದ ನಿವಾಸಿ ಎಚ್.ಪಿ. ನಂಜೇಗೌಡ. 

‘ಬಿಸಿಲು ಹೆಚ್ಚಾದಂತೆ ಕಲ್ಲಂಗಡಿ ಕೊಳ್ಳು­ವವರ ಸಂಖ್ಯೆಯೂ ಹೆಚ್ಚುತ್ತಿದೆ. ದಿನೇ ದಿನೇ ವ್ಯಾಪಾರ ಹೆಚ್ಚುತ್ತಿದೆ ಎನ್ನುತ್ತಾರೆ ಕಲ್ಲಂಗಡಿ ಅಂಗಡಿ ಮಾಲೀಕ ಫಯಾಜ್‌ ಪಾಷಾ. 

‘ಅಂಗಡಿಗಳಲ್ಲಿ ರಾಸಾಯನಿಕ ಮಿಶ್ರಣ­­­­ವಾಗಿರುವ ತಂಪು ಪಾನೀಯ­ಗಳನ್ನು ಸೇವಿಸುವುದಕ್ಕಿಂತ ತಾಜಾ ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆ­­ಯದು. ಅಲ್ಲದೆ ರಸ್ತೆ ಬದಿಯಲ್ಲಿ ಸ್ನೇಹಿತ­ರೊಂದಿಗೆ ಹರಟೆ ಹೊಡೆ­ಯುತ್ತಾ ಕಲ್ಲಂಗಡಿ ಮೆಲ್ಲು­ವುದೇ ಒಂದು ರೀತಿಯ ಮಜಾ ಎನ್ನುತ್ತಾರೆ ಗ್ರಾಹಕ ಶಫೀರ್.

ರಸ್ತೆ ಬದಿಯಲ್ಲಿ ಕತ್ತರಿಸಿ ಮಾರುವ ಹಣ್ಣುಗಳನ್ನು ಸೇವಿಸು­ವ­ವರ ಸಂಖ್ಯೆ ಅಧಿಕವಾಗಿದೆ. ಹೀಗೆ ಕತ್ತರಿ­ಸಿಟ್ಟ ಹಣ್ಣುಗಳನ್ನು ಸೇವಿಸು­ವುದರಿಂದ ಆರೋಗ್ಯದ ಮೇಲೆ ದುಷ್ಪ­ರಿಣಾಮ ಉಂಟಾಗುತ್ತದೆ. ನೊಣ, ಇತರೆ ಕೀಟಗಳು ಹಣ್ಣು­ಗ­ಳನ್ನು ಮುತ್ತಿಕೊಳ್ಳುತ್ತವೆ. ಅಲ್ಲದೆ ದೂಳು ಸಹಾ ಮೆತ್ತಿಕೊಳ್ಳುತ್ತದೆ.  ಕತ್ತರಿಸಿದ ಹಣ್ಣುಗಳನ್ನು ಮುಚ್ಚಿಟ್ಟ ಬಾಕ್ಸ್‌ಗಳಲ್ಲಿ ಮಾರಾಟ ಮಾಡು­ವುದು ಒಳಿತು’ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಬಿ. ವಿನಯ್‌­­­­ಕುಮಾರ್ ತಿಳಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.