ADVERTISEMENT

ಕನಕಪುರ: ಸ್ವಾವಲಂಬನೆ ಜೀವನ ಮಂತ್ರವಾಗಲಿ

ಸೌಂದರ್ಯವರ್ಧನಾ ತರಬೇತಿ ಶಿಬಿರದ ಸಮಾರೋಪ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2018, 9:50 IST
Last Updated 31 ಮಾರ್ಚ್ 2018, 9:50 IST
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸಂಧ್ಯಾಶರ್ಮ ವಿತರಿಸಿದರು
ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಸಂಧ್ಯಾಶರ್ಮ ವಿತರಿಸಿದರು   

ಕನಕಪುರ: ಸಾಮಾನ್ಯರನ್ನು ಅಸಾಮಾನ್ಯರನ್ನಾಗಿ ಮಾಡುವ ಚಮತ್ಕಾರ ಸೃಜನಶೀಲತೆಗೆ ಇದೆ. ಮಹಿಯರು ಆರ್ಥಿಕವಾಗಿ ಸಬಲತೆ ಸಾಧಿಸಬೇಕೆಂದು ನಾಟಕ ನೃತ್ಯ ವಿಮರ್ಶಕಿ ಸಂಧ್ಯಾಶರ್ಮ ತಿಳಿಸಿದರು.

ತಾಲ್ಲೂಕಿನ ಹಾರೋಹಳ್ಳಿ ಕೆನರಾಬ್ಯಾಂಕ್‌ ಗ್ರಾಮೀಣ ಮಹಿಳಾ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆದ ಸೌಂದರ್ಯ ವರ್ಧನಾ ತರಬೇತಿಶಿಬಿರದ ಸಮಾರೋಪ ಸಮಾರಂಭ ಮತ್ತು ಪ್ರಮಾಣ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹಿಳೆಯರು ಎಲ್ಲಾ ರಂಗದಲ್ಲೂ ತೊಡಗಿಸಿಕೊಳ್ಳುತ್ತಿರುವುದು ಸಂತೋಷದ ಸಂಗತಿ. ಹೆಣ್ಣು ತ್ಯಾಗಮಯಿ ಎಂದು ಎಲ್ಲ ದೌರ್ಜನ್ಯಗಳನ್ನು ಸಹಿಸಿಕೊಳ್ಳುವುದು ಸಲ್ಲದು. ಸ್ವಾವಲಂಬನೆ ಸೂತ್ರವೇ‌ ಜೀವನ ಮಂತ್ರವಾಗಬೇಕು. ಸಾಮಾಜಿಕ ಸ್ಥಿತಿಗತಿ ಬಗ್ಗೆ ಆಲೋಚಿಸುವ ಶಕ್ತಿ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ADVERTISEMENT

ಮಹಿಳೆ ಸರ್ವತೋಮುಖ ಅಭಿವೃದ್ಧಿ ಸಾಧಿಸುವುದರ ಜತೆಗೆ ಎಲ್ಲ ವಿಚಾರಗಳ ಬಗ್ಗೆ ತಿಳಿದುಕೊಂಡಿರಬೇಕು. ಆರೋಗ್ಯದ ವಿಷಯದಲ್ಲಿಯೂ ಗಮನ ಹರಿಸಬೇಕು. ಹಾಗೆಯೇ ಕೀಳರಿಮೆ ಭಾವನೆ ತೊಡೆದು ಹಾಕಬೇಕು ಎಂದರು.

‌ಹಾರೋಹಳ್ಳಿ ರೋಟರಿ ಸಂಸ್ಥೆ ಅಧ್ಯಕ್ಷ ಮೊಹಮ್ಮದ್ ಏಜಾಸ್ ಮಾತನಾಡಿ, ಕೌಟುಂಬಿಕವಾಗಿ ಶ್ರಮ ವಹಿಸುವ ಮಹಿಳೆ  ಸ್ವಾವಲಂಬಿ ಬದುಕಿನ ಕಡೆಗೂ ಗಮನ ಹರಿಸುವುದು ಅನಿವಾರ್ಯ ಎಂದರು.

ತರಬೇತಿ ಸಂಸ್ಥೆ ನಿರ್ದೇಶಕಿ ಸುಮ.ಎನ್.ಗಾಂವಕರ್ ಮಾತನಾಡಿ, ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದರ ಜತೆಗೆ ಅವರಿಗೆ ಸ್ವಯಂ ಉದ್ಯೋಗದ ನೆಲೆಗಟ್ಟು ಕಲ್ಪಿಸಿ ಕೊಡುವುದೇ ಸಂಸ್ಥೆ ಉದ್ದೇಶ ಎಂದರು.

ಮೊಹಮ್ಮದ್ ಏಜಾಸ್ ಪತ್ನಿ ಪೌಜಿಯಾ ಸುಲ್ತಾನ, ತರಬೇತಿ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸಂಧ್ಯಾ ಸುರೇಶ್, ಸಂಸ್ಥೆಯ ಉಪನ್ಯಾಸಕರಾದ ದೇವಿಂದ್ರಪ್ಪ, ಗವಿರಾಜ್, ನೇತ್ರಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.