ADVERTISEMENT

ಕಳವು ಪ್ರಕರಣ ಪತ್ತೆ: ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 19 ಜೂನ್ 2013, 13:53 IST
Last Updated 19 ಜೂನ್ 2013, 13:53 IST

ರಾಮನಗರ: ಮಾಗಡಿ, ಮಾದನಾಯಕನಹಳ್ಳಿ ಮತ್ತು ತಲಘಟ್ಟಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕಳ್ಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ರಾಮನಗರ ಜಿಲ್ಲಾ ಪೊಲೀಸರು ರೂ. 8.50 ಲಕ್ಷ ಮೌಲ್ಯದ 100 ಗ್ರಾಂ ಚಿನ್ನ, 14 ಕೆ.ಜಿ.ಬೆಳ್ಳಿಯನ್ನು ಹಾಗೂ ಒಂದು ಕಾರನ್ನು ವಶಪಡಿಸಿಕೊಂಡಿದ್ದಾರೆ.

ತಲಘಟ್ಟಪುರ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿ ಬಂಧಿಸಲಾಗಿದ್ದ ಹಾಗೂ ಅಂತರರಾಜ್ಯ ಕಳ್ಳರನ್ನು ನ್ಯಾಯಾಲಯದ ಆದೇಶದ ಮೇರೆಗೆ ವಶಕ್ಕೆ ಪಡೆದು ಮೂರು ಪ್ರಮುಖ ಪ್ರಕರಣಗಳನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂತರರಾಜ್ಯ ಕಳ್ಳವು ಪ್ರಕರಣಗಳ ಆರೋಪಿಗಳಾದ ಒರಿಸ್ಸಾದ ಸೈಯದ್ ಮುಬಾಸಿರ್ (23) , ಮಾಗಡಿಯ ರೋಷನ್ ಬೇಗ್ (22), ಪೀಣ್ಯದ ಅಲ್ಲಾರಕ್ಕ (23) ಅವರಿಂದ ಈ ಪ್ರಕರಣಗಳನ್ನು ಪತ್ತೆ ಮಾಡಲಾಯಿತು. ಮಾಗಡಿಯ ಹೊಸೂರು ಶೆಟ್ಟರ ಜ್ಯುವೆಲರಿ ಅಂಗಡಿಯಲ್ಲಿ ನಡೆದಿದ್ದ ಕಳಪು ಪ್ರಕರಣಕ್ಕೆ ಸಂಬಂಧಿಸಿದಂತೆ 13 ಕೆ.ಜಿ ಬೆಳ್ಳಿ, 100 ಗ್ರಾಂ ಚಿನ್ನ ಹಾಗೂ ತಲಘಟ್ಟಪುರದ ಆರ್‌ಸಿಸಿ ಜ್ಯುವೆಲರಿ ಅಂಗಡಿಯಲ್ಲಿ ಕಳವಾಗಿದ್ದ 1 ಕೆ.ಜಿ ಗಟ್ಟಿ ಬೆಳ್ಳಿಯನ್ನು ವಶಕ್ಕೆ ಪಡೆಯಲಾಯಿತು. ಅಲ್ಲದೆ ಮಾದನಾಯಕನಹಳ್ಳಿ ವ್ಯಾಪ್ತಿಯಲ್ಲಿ ಇವರು ಕದ್ದಿದ್ದ ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದರು.

ಈ ಕಳ್ಳತನ ಪ್ರಕರಣಗಳ ಮತ್ತಷ್ಟು ಆರೋಪಿಗಳಾದ ಅರುಣ್, ತೌಸಿಪ್ ಅಹಮದ್, ಹೆಗ್ಗನಹಳ್ಳಿ ರಾಜ ತಲೆ ಮರೆಸಿಕೊಂಡಿದ್ದು, ಅವರ ಪತ್ತೆಗೆ ಜಾಲ ಬೀಸಲಾಗಿದೆ ಎಂದರು.

ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಕ್ಕಲೂರು ನಿವಾಸಿ ಸುನೀಲ್ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಪತ್ತೆ ಮಾಡಲಾಗಿದ್ದು, ಆರೋಪಿ ಚಕ್ಕಲೂರು ಗ್ರಾಮದ ರಾಜೇಶ್ ಎಂಬಾತನನ್ನು ಬಂಧಿಸಲಾಗಿದೆ. ಬಂಧಿತನಿಂದ ಬೆಳ್ಳಿ ಚೆಂಬು, ಬೆಳ್ಳಿಎಯ ಕಾಲು ಚೈನುಗಳು, ಮುತ್ತು ಗುಂಡುಗಳಿಂದ ಕೂಡಿದ ಎರಡು ಎಳೆಯ ಚಿನ್ನದ ಚೈನು, 2 ಚಿನ್ನದ ಮುತ್ತಿನ ಓಲೆ ಜುಮುಕಿಗಳು, 2 ಸಾದಾ ಫ್ಯಾನ್ಸಿ ಓಲೆ, 2 ಮುತ್ತಿನ ಓಲೆ, 1 ಜತೆಗೆ ಫ್ಯಾನಿಸ ಸಾದಾ ಓಲೆ ಹಾಗೂ ಒಂದು ಕೈಗಡಿಯಾರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.