ADVERTISEMENT

ಕಾಡಾನೆಗಳ ದಾಳಿಯಿಂದ ಬೆಳೆ ನಷ್ಟ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 5:58 IST
Last Updated 29 ಡಿಸೆಂಬರ್ 2017, 5:58 IST

ರಾಮನಗರ: ತಾಲ್ಲೂಕಿನ ಕೈಲಾಂಚ ಹೋಬಳಿಯಾದ್ಯಂತ ಕಾಡಾನೆಗಳ ದಾಳಿ ಮುಂದುವರಿದಿದ್ದು, ಬುಧವಾರ ರಾತ್ರಿ ಹೊಲಗಳಿಗೆ ನುಗ್ಗಿ ಬೆಳೆಗಳನ್ನು ನಾಶ ಮಾಡಿವೆ. ಅಂಜನಾಪುರ, ವಿಭೂತಿಕೆರೆ, ಚಿಕ್ಕೇನಹಳ್ಳಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿ ಆನೆಗಳು ದಾಳಿ ನಡೆಸಿವೆ. ಟೊಮ್ಯಾಟೊ. ಗೆಣಸು, ರಾಗಿ ಮೆದೆಗಳು ಗಜಪಡೆಗಳ ದಾಳಿಗೆ ತುತ್ತಾಗಿ ನಾಶವಾಗಿವೆ.

ಬುಧವಾರ ಸಂಜೆ ಅಚ್ಚಲು ಸಮೀಪ ಐದು ಆನೆಗಳ ಹಿಂಡು ಕಾಣಿಸಿಕೊಂಡಿದ್ದು, ಅವುಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು. ರಾತ್ರಿ ವೇಳೆಗೆ ಈ ಗಜಪಡೆ ಅಂಜನಾಪುರ, ವಿಭೂತಿಕೆರೆಯ ಅಕ್ಕಪಕ್ಕವೇ ಕಾಣಿಸಿಕೊಂಡು ಆತಂಕ ಸೃಷ್ಟಿಸಿದವು. ಜನರು ಮನೆಗಳಿಂದ ಹೊರಬರದಂತೆ ಧ್ವನಿವರ್ಧಕದ ಮೂಲಕ ಎಚ್ಚರಿಸಿದ ಸಿಬ್ಬಂದಿ ಅವುಗಳನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದತ್ತ ಅಟ್ಟಿದರು.

ಆನೆಗಳು ಹಿಂತಿರುಗುವ ಹಾದಿಯಲ್ಲಿ ಚಿಕ್ಕೇನಹಳ್ಳಿ ಗ್ರಾಮದ ಈಶ್ವರ್‌ ಎಂಬುವರ ಬಾಳೆತೋಟ, ಅಂಜನಾಪುರ ಗ್ರಾಮದ ವೀರಭದ್ರಯ್ಯ, ರಾಜಣ್ಣ, ರೇವಣ್ಣ, ಬಸವರಾಜು, ಮಹದೇವಯ್ಯ, ಕೆಂಪಯ್ಯ, ವೀರಮಾದಯ್ಯ ಎಂಬುವರ ರಾಗಿ ಮೆದೆಗಳನ್ನು ಆನೆಗಳು ಧ್ವಂಸಗೊಳಿಸಿದವು.

ADVERTISEMENT

ಅಂತೆಯೇ ಪುಟ್ಟಸ್ವಾಮಯ್ಯ ಎಂಬುವರಿಗೆ ಸೇರಿದ ತೆಂಗಿನ ಮರ, ಭದ್ರಯ್ಯ ಎಂಬುವರು ಬೆಳೆದ ಟೊಮ್ಯಾಟೊ, ಗೆಣಸು ತೋಟ, ತೆಂಗಿನ ಸಸಿಗಳು, ವಿಭೂತಿಕೆರೆ ಗ್ರಾಮದ ಮಾದಯ್ಯ, ನಾಗರಾಜು, ಸಿದ್ದಪ್ಪ, ಶಿವಲಿಂಗಯ್ಯ, ಶಿವಕುಮಾರ್ ಎಂಬುವರ ರಾಗಿಮೆದೆಗಳು, ಬಸವಣ್ಣ ಅವರ ಹೊಲದಲ್ಲಿನ ಜೋಳ, ಮರಿಮಾದಯ್ಯ ಎಂಬುವರ ಕೊಳವೆಬಾವಿ ಪೈಪ್‌, ನೀರಿನ ಪರಿಕರಗಳನ್ನು ಆನೆಗಳು ನಾಶ ಮಾಡಿವೆ.

ಬಳಿಕ ಆನೆಗಳ ಹಿಂಡು ಬನ್ನಿಕುಪ್ಪೆ, ಚೌಡಯ್ಯನದೊಡ್ಡಿ, ಲಕ್ಕೋಜನಹಳ್ಳಿ, ನಂಜಾಪುರ, ದೊಡ್ಡನಹಳ್ಳಿ, ಕಾಡನಕುಪ್ಪೆ ಮುಖಾಂತರ ತೆಂಗಿನಕಲ್ಲು ಅರಣ್ಯ ಸೇರಿಕೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.