ADVERTISEMENT

ಕೋರ್ಟಿನ ಅಂಗಳಕ್ಕೆ ಸಂಸಾರ...

​ಪ್ರಜಾವಾಣಿ ವಾರ್ತೆ
Published 30 ಮೇ 2012, 10:20 IST
Last Updated 30 ಮೇ 2012, 10:20 IST

ಕನಕಪುರ: `ಮಾಜಿ ಪ್ರಿಯಕರ ತನ್ನ ಮೊಬೈಲ್ ಫೋನಿನ ಮುಖಾಂತರ ಗಂಡನಿಗೆ ಕೆಟ್ಟ ಮೆಸೇಜುಗಳನ್ನು ಕಳಿಸುವ ಮೂಲಕ ನನ್ನ ಸಂಸಾರವನ್ನೇ ಹಾಳು ಮಾಡಿದ್ದಾನೆ~ ಎಂದು ಆರೋಪಿಸಿ ಆತನೇ ಈಗ ನನ್ನನ್ನು ಮದುವೆಯಾಗಬೇಕೆಂದು ಕಳೆದೆರಡು ತಿಂಗಳಿಂದ ಆತನ ಮನೆಯ ಮುಂದೆ ಧರಣಿ ನಡೆಸುತ್ತಿದ್ದ ಮಹಿಳೆಯೊಬ್ಬರ ಘಟನೆ ಮಂಗಳವಾರ ರಾತ್ರಿ ಹೊಸ ತಿರುವು ಪಡೆದುಕೊಂಡಿತು.

ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಹಣಕಡುಬೂರು ಗ್ರಾಮದ ಜೆಡಿಎಸ್ ಮುಖಂಡ ಸಿದ್ದೇಗೌಡರ ಪುತ್ರ ಮಧು ಮತ್ತು ಅದೇ ಗ್ರಾಮದ ಕಾಂಗ್ರೆಸ್ ಮುಖಂಡ ಕಾಳೇಗೌಡರ ಪುತ್ರಿ ಶಿಲ್ಪಾ ಒಬ್ಬೊರನ್ನೊಬ್ಬರು ಪ್ರೀತಿಸುತ್ತಿದ್ದರು. ಕುಟುಂಬಗಳ ರಾಜಕೀಯ ಕಾರಣದಿಂದಾಗಿ ಮದುವೆಯಾಗಲು ಸಾಧ್ಯವಾಗದೇ ಅಂತಿಮವಾಗಿ ಅವರು ಪ್ರತ್ಯೇಕ ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.

ಆದರೆ ಮದುವೆಯ ನಂತರವೂ ಮಧು ಶಿಲ್ಪಾಳ ಗಂಡನಿಗೆ ಮೊಬೈಲ್‌ನಲ್ಲಿ ಮೆಸೇಜುಗಳನ್ನು ಕಳುಹಿಸುತ್ತಿದ್ದ. `ನಾನು ಪ್ರೀತಿಸಿ ಬಿಟ್ಟ ಹುಡುಗಿಯನ್ನು ನೀನು ಮದುವೆಯಾಗಿದ್ದೀಯ~ ಎಂಬಂತಹ ಅರ್ಥದಲ್ಲಿ ಈ ಮೆಸೇಜುಗಳು ಇರುತ್ತಿದ್ದವು. ಇದರಿಂದ ಬೇಸರಗೊಂಡ ಶಿಲ್ಪಾಳ ಗಂಡ ಆಕೆ ಯಿಂದ ದೂರಾಗಲು ಮುಂದಾದರು. ಇಬ್ಬರಿಂದಲೂ ಈ ರೀತಿ ಅನ್ಯಾಯಕ್ಕೊಳಗಾದ ಶಿಲ್ಪಾ ಬೇಸತ್ತು `ನನ್ನ ಮಾಜಿ ಪ್ರಿಯಕರ ನನಗೆ ಮೋಸಮಾಡಿದ್ದಾನೆ. ನನ್ನ ಸಂಸಾರವನ್ನು ನಾಶ ಮಾಡಿದ್ದಾನೆ~ ಎಂದು ಆರೋಪಿಸಿ ಆತನ ಮನೆಯ ಮುಂದೆ ಧರಣಿ ಕುಳಿತು ತನಗೆ ನ್ಯಾಯ ದೊರಕಿಸಿಕೊಡುವಂತೆ ಆಗ್ರಹಿಸಿದ್ದಳು. ಈ ರೀತಿ ಆಕೆ 63 ದಿನಗಳಿಂದ ನಿರಂತರವಾಗಿ ಧರಣಿ ನಡೆಸಿಕೊಂಡು ಬಂದಿದ್ದಳು.

ಇದರಿಂದ ಬೇಸತ್ತ ಸಿದ್ದೇಗೌಡರು ತಮ್ಮ ಮನೆಯ ಮುಂದೆ ಶಿಲ್ಪಾ ಧರಣಿ ನಡೆಸದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರು. ಆದರೂ ಶಿಲ್ಪಾ ನ್ಯಾಯಾಲಯದ ಆಜ್ಞೆಯನ್ನು ಧಿಕ್ಕರಿಸಿ ತನ್ನ ಧರಣಿ ಮುಂದುವರಿಸಿದ್ದರಿಂದ ಸೋಮವಾರ ರಾತ್ರಿ ಎರಡೂ ಕಡೆಯವರ ನಡುವೆ ಘರ್ಷಣೆಯಾಗಿ ಹೊಡೆದಾಟವಾಗಿತ್ತು. ಈ ಸಂದರ್ಭದಲ್ಲಿ ಶಿಲ್ಪಾಳ ಮನೆಯವರು ಸಿದ್ದೇಗೌಡ, ಅವರ ಪತ್ನಿ, ಮಗ, ಹೆಣ್ಣುಮಕ್ಕಳು ಮತ್ತು ಅಳಿಯಂದಿರ ಮೇಲೆ ಕೋಡಿಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು.

ಏತನ್ಮಧ್ಯೆ ನ್ಯಾಯಾಲಯದ ತಡೆಯಾಜ್ಞೆಯನ್ನು ಉಲ್ಲಂಘಿಸಿದ ಆರೋಪದಲ್ಲಿ ಶಿಲ್ಪಾಳ ವಿರುದ್ಧ ಕೋಡಿಹಳ್ಳಿ ಪೋಲಿಸರು ಪ್ರಕರಣ ದಾಖಲಿಸಿ ಆಕೆಯನ್ನು ವಶಕ್ಕೆ ತೆಗೆದುಕೊಂಡಿದ್ದರು. ಅದೇ ರೀತಿ ಸಿದ್ದೇಗೌಡ ಮತ್ತು ಆತನ ಪತ್ನಿಯನ್ನೂ ವಶಕ್ಕೆ  ತೆಗೆದುಕೊಂಡ್ದ್ದಿದರು. ಬಂಧಿಸಲಾಗಿದ್ದ ಶಿಲ್ಪಾಳನ್ನು ಮಂಗಳವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ ಕನಕಪುರ ಜೆಎಂಎಫ್ ನ್ಯಾಯಾಧೀಶರ ಮನೆಯಲ್ಲಿ ಹಾಜರು ಪಡಿಸಲಾಯಿತು.

ಈ ಸಂದರ್ಭದಲ್ಲಿ ಉಚಿತ ನೆರವು ಕಾನೂನು ಪ್ರಾಧಿಕಾರದ ವತಿಯಿಂದ ಶಿಲ್ಪಾಳ ಬಿಡುಗಡೆಗೆ ಜಾಮೀನು ಅರ್ಜಿ ಸಲ್ಲಿಸಲಾಯಿತು. ನ್ಯಾಯಾಧೀಶರು ಅರ್ಜಿಯನ್ನು ಮಾನ್ಯ ಮಾಡಿ ಆಕೆಗೆ ಜಾಮೀನು ನೀಡಿದರು.

ಆದರೆ  ಜಾಮೀನು ಪಡೆಯಲು ನಿರಾಕರಿಸಿದ ಶಿಲ್ಪಾ, ನಾನೀಗ ಎಲ್ಲಿಗೆ ಹೋಗಲಿ? ಎಂದು ತನ್ನ ಅಳಲು ತೋಡಿಕೊಂಡಳು. `ನನ್ನ ಗಂಡನ ಮನೆಯವರು ನನ್ನನ್ನು ಬಿಟ್ಟಿದ್ದಾರೆ. ನನಗೆ ಮೋಸ ಮಾಡಿರುವ ಮಧುವಿನ ಮನೆಗೇ ನಾನು ಹೋಗುತ್ತೇನೆ~ ಎಂದು ಹಟ ಹಿಡಿದಿದ್ದಳು. ನ್ಯಾಯಾಧೀಶರು ಸದ್ಯಕ್ಕೆ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವಂತೆ ಆಕೆಗೆ ನಿರ್ದೇಶನ ನೀಡಿದರು.

ಮಧು ತಂದೆ ಸಿದ್ದೇಗೌಡ ಮತ್ತು ಹಾಗೂ ಮಧುವಿನ ತಾಯಿ ಸುನಂದಮ್ಮನನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.