ADVERTISEMENT

ಚನ್ನ‍ಪಟ್ಟಣದಿಂದ ಸ್ಪರ್ಧೆ ಇಲ್ಲ– ಎಚ್‌.ಎಂ.ರೇವಣ್ಣ

ಮಾಗಡಿಯಲ್ಲಿ ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2018, 10:34 IST
Last Updated 12 ಏಪ್ರಿಲ್ 2018, 10:34 IST

ಮಾಗಡಿ: ಪ್ರಜಾಪ್ರಭುತ್ವದಲ್ಲಿ ಜನಸಂಪರ್ಕದಲ್ಲಿ ಇಲ್ಲದಿದ್ದರೆ ಜನನಾಯಕರಾಗೋದು ಅಸಾಧ್ಯ ಎಂದು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ತಿಳಿಸಿದರು.

ಪಟ್ಟಣದ ತಮ್ಮ ತೋಟದ ಮನೆಯಲ್ಲಿ ಬುಧವಾರ ನಡೆದ ಮೂಲ ಕಾಂಗ್ರೆಸ್‌ ಕಾರ್ಯಕರ್ತರ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.‘ಜೆಡಿಎಸ್‌ ಅಭ್ಯರ್ಥಿ ಎ.ಮಂಜುಗೆ ಪೋನ್‌ ಮಾಡಿ ನೊಡಿ ನಿಮ್ಮ ಪೋನ್‌ ಸ್ವೀಕರಿಸಿದರೆ ಅವರು ಶಾಸಕರಾಗಬಹುದು. ಪೋನ್‌ ಸ್ವೀಕರಿಸದವರನ್ನು ಶಾಸಕರನ್ನಾಗಿ ಮಾಡಬಹುದೇ ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷ ರೈಲುಗಾಡಿ ಇದ್ದಂತೆ ನಾವೆಲ್ಲ ಬೋಗಿಗಳು. ರೈಲು ಹತ್ತುವವರು ಇಳಿಯುವವರು ಇದ್ದೇ ಇರುತ್ತಾರೆ, ತಾಳ್ಮೆ ಇದ್ದರೆ ನಾಯಕರಾಗಬಹುದು.ಕಾರ್ತಕರ್ತರನ್ನು ರಕ್ಷಿಸಲು ಹಿಂದೆ ಎಚ್‌.ಸಿ.ಬಾಲಕೃಷ್ಣ ಮತ್ತು ನಾನು ವಿರೋಧಿಗಳಾಗಿದ್ದು ನಿಜ. ಆದರೆ ಕಾಂಗ್ರೆಸ್‌ ತತ್ವ ಸಿದ್ದಾಂತ ಒಪ್ಪಿ ಬಂದವರೆಲ್ಲರೂ ಕಾಂಗ್ರೆಸ್ಸಿಗರು. ಮಾಗಡಿಯಲ್ಲಿ ಕಾಂಗ್ರೆಸ್‌ ಪಕ್ಷ ಸದೃಡವಾಗಿದೆ. ಹಿಂದೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಹಾಕಿಸಿದ್ದ ಕೇಸುಗಳನ್ನು ರಾಜಿಸಂಧಾನದ ಮೂಲಕ ಬಗೆಹರಿಸಲಾಗುವುದು’ ಎಂದರು.

ADVERTISEMENT

‘ತಾಲ್ಲೂಕಿನ 84 ಕೆರೆಗಳಿಗೆ ಹೇಮಾವತಿ ನದಿ ನೀರು ಹರಿಸುವುದು ನನ್ನ ಜೀವನದ ಆಸೆಯಾಗಿತ್ತು. ಹಣ ಮಂಜೂರಾಗಿದೆ.ಕಾಮಗಾರಿಗೆ ಚಾಲನೆ ನೀಡಿದೆ. ಮಾಗಡಿ ಜನತೆ ನನ್ನನ್ನು ರಾಜ್ಯಮಟ್ಟದ ನಾಯಕನನ್ನಾಗಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಸಹೋದರರು ನಮ್ಮ ತಂಟೆಗೆ ಬರುವುದು ಬೇಡ. ಚನ್ನಪಟ್ಟಣದಲ್ಲಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಸಿದ್ದರಾಮಯ್ಯ ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ನಾನು ಮಾಗಡಿ ಮತ್ತು ಬಾದಾಮಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳು ಗೆಲುವಿಗೆ ದುಡಿಯುತ್ತೇನೆ’ ಎಂದರು.

‘ಚುನಾವಣೆಯಲ್ಲಿ ನಾನು ಎ.ಮಂಜುಗೆ ಸಹಾಯ ಮಾಡುವ ಅನುಮಾನ ಬೇಡ. ನನ್ನ ರಕ್ತದಲ್ಲಿ ಕಾಂಗ್ರೆಸ್‌ ಅಂಶವಿದೆ. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಎಚ್‌.ಸಿ,ಬಾಲಕೃಷ್ಣ ಅವರ ಗೆಲುವಿಗೆ ನಾವೂ ಐವರು ಒಂದಾಗಿ ದುಡಿಯುತ್ತೇವೆ. ನಿಮ್ಮ ಮತ ಎಚ್‌.ಎಂ.ರೇವಣ್ಣ ಅವರಿಗೆ ಅಂತ ತಿಳಿಯಿರಿ. ಬಾಲಕೃಷ್ಣ ಅವರ ಗೆಲುವು ಕಾಂಗ್ರೆಸ್‌ ಪಕ್ಷದ ಗೆಲುವು’ ಎಂದು ತಿಳಿಸಿದರು.

ಮೂಲಕಾಂಗ್ರೆಸ್‌ ಮತ್ತು ಹೊಸಕಾಂಗ್ರೆಸ್‌ ಎಂಬ ತಾರತಮ್ಯ ಬೇಡ. ಕಾಂಗ್ರೆಸ್‌ ಪಕ್ಷ ಬಡವರ ಪಕ್ಷ. ಜಾತಿಧರ್ಮದ ಅಂತರ ಕಾಂಗ್ರೆಸ್‌ ಪಕ್ಷದಲ್ಲಿ ಇಲ್ಲ. ಎಚ್‌.ಸಿ.ಬಾಲಕೃಷ್ಣ ಗೆಲುವಿಗೆ ಎಲ್ಲರೂ ಒಗ್ಗೂಡಿ ಚುನಾವಣೆ ನಡೆಸೋಣ ಎಂದು ಸಂಸದ ಡಿ.ಕೆ.ಸುರೇಶ್‌ ತಿಳಿಸಿದರು. ಚನ್ನಪಟ್ಟಣದಲ್ಲಿ ಎಚ್‌.ಎಂ.ರೇವಣ್ಣ ಸ್ಪರ್ಧಿಸಿದರೆ ಸ್ವಾಗತಿಸುವುದಾಗಿ ತಿಳಿಸಿದರು.

‘ನನ್ನ ಕಾರ್ಯಕರ್ತರನ್ನು ರಕ್ಷಿಸಲು ಜೆಡಿಎಸ್‌ ನಲ್ಲಿ ಇದ್ದಾಗ ಕೆಲವರ ಮೇಲೆ ಪ್ರಕರಣ ದಾಖಲಿಸಲು ಸೂಚಿಸಿದ್ದೇನೆ. ನೋವುಂಡ ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೇನೆ. ಮೂಲಕಾಂಗ್ರೆಸ್ಸಿಗರ ಆಶಯದಂತೆ ನಡೆಯುತ್ತೇನೆ. ವೈಯಕ್ತಿಕವಾಗಿ ನಾನು ಎಚ್‌.ಎಂ.ರೇವಣ್ಣ ಅವರ ವಿರೋಧಿ ಅಲ್ಲ. ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರೆಲ್ಲರೂ ಒಗ್ಗೂಡಿ ನನಗೆ ಬೆಂಬಲ ನೀಡಿ’ ಎಂದು ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿ ಎಚ್‌.ಸಿ.ಬಾಲಕೃಷ್ಣ ತಿಳಿಸಿದರು.

ರಾಜ್ಯ ಬೆಸ್ಕಾಂ ನಿರ್ದೇಶಕ ಬಿ.ವಿ.ಜಯರಾಮು ಮಾತನಾಡಿ ದಲಿತ ಹಿಂದುಳಿದ ಅಲ್ಪಸಂಖ್ಯಾತರೆಲ್ಲರು ಕಾಂಗ್ರೆಸ್‌ ಪಕ್ಷದ ಬೆಂಬಲಿಗರಾಗಿದ್ದಾರೆ. ಕಾಂಗ್ರೆಸ್‌ ಪಕ್ಷದ ಚೈತನ್ಯ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಎಚ್‌.ಸಿ.ಬಾಲಕೃಷ್ಣ ಅವರ ಮೇಲಿದೆ. ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಎಲ್ಲರೂ ಒಂದಾಗಿ ಶ್ರಮಿಸೋಣ ಎಂದರು.

ಕಲ್ಪನಾ ಶಿವಣ್ಣ, ಸಿ.ಜಯರಾಮ್‌, ಕುದೂರಿನ ಬಾಲರಾಜು, ಕಣ್ಣೂರಿನ ಜಯಶಂಕರ್‌ ಮಾತನಾಡಿದರು. ಹೆಚ್ಚಿನ ಸಂಖ್ಯೆಯಲ್ಲಿ ಮೂಲ ಕಾಂಗ್ರೆಸ್‌ ಕಾರ್ಯಕರ್ತರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.