ADVERTISEMENT

ಜಿಲ್ಲಾ ಆಸ್ಪತ್ರೆಗೂ ‘ಇ–ಹಾಸ್ಪಿಟಲ್‌’ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2017, 9:32 IST
Last Updated 28 ಅಕ್ಟೋಬರ್ 2017, 9:32 IST

ರಾಮನಗರ: ಸರ್ಕಾರಿ ಆಸ್ಪತ್ರೆಗಳ ಆಡಳಿತ ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಪಾರದರ್ಶಕತೆ ತರುವ ನಿಟ್ಟಿನಲ್ಲಿ ರೂಪಿಸಿರುವ ‘ಇ–ಹಾಸ್ಪಿಟಲ್‌’ ಯೋಜನೆಯು ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಈಚೆಗೆ ಜಾರಿಗೆ ಬಂದಿದೆ. ಪರಿಣಾಮ ಈವರೆಗೆ ಆಸ್ಪತ್ರೆಯಲ್ಲಿ ಹೆಸರು ನೋಂದಾಯಿಸುವ ರೋಗಿಗಳಿಗೆ ನೀಡುತ್ತಿದ್ದ ಹಳದಿ ಬಣ್ಣದ ಪುಟಾಣಿ ಪುಸ್ತಕ ಈಗ ಕಣ್ಮರೆಯಾಗಿದೆ.

ಜಿಲ್ಲಾ ಆಸ್ಪತ್ರೆಯಲ್ಲಿ ಆಗಸ್ಟ್ 9ರಿಂದ ‘ಇ–ಹಾಸ್ಪಿಟಲ್‌’ ವ್ಯವಸ್ಥೆಯಡಿ ರೋಗಿಗಳ ನೋಂದಣಿ ಕಾರ್ಯ ಆನ್‌ಲೈನ್‌ನಲ್ಲಿಯೇ ನಡೆಯುತ್ತಿದೆ. ಅದಕ್ಕಾಗಿಯೇ ನೋಂದಣಿ ಕೌಂಟರ್‌ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಐದು ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ.

ಏನಿದರ ವೈಶಿಷ್ಟ್ಯ?: ಜಿಲ್ಲಾ ಆಸ್ಪತ್ರೆಯಲ್ಲಿ ₹ 2 ರೂಪಾಯಿ ನೀಡಿ ಹೆಸರು ನೋಂದಾಯಿಸಿಕೊಳ್ಳುವ ರೋಗಿಗಳಿಗೆ ವಿಶಿಷ್ಟ ಸಂಖ್ಯೆಯುಳ್ಳ ವೈದ್ಯಕೀಯ ಚಿಕಿತ್ಸಾ ವಿವರ ನಮೂದಿಸುವ ಪತ್ರವೊಂದನ್ನು ನೀಡಲಾಗುತ್ತದೆ. ಅದರಲ್ಲಿ ರೋಗಿಯ ವಿಳಾಸ, ಮೊಬೈಲ್‌ ಸಂಖ್ಯೆ, ಚಿಕಿತ್ಸೆ ಪಡೆಯಲು ಹೋಗಬೇಕಾದ ಕೊಠಡಿ ಸಂಖ್ಯೆ ಕೂಡ ಆ ಪತ್ರದಲ್ಲಿ ನಮೂದಾಗಿರುತ್ತದೆ.

ADVERTISEMENT

ಒಂದು ಬಾರಿ ನೋಂದಣಿ ಮಾಡಿಸಿಕೊಂಡವರು ಒಂದು ವರ್ಷದಲ್ಲಿ ಎಷ್ಟೇ ಬಾರಿ ಆಸ್ಪತ್ರೆಗೆ ಭೇಟಿ ನೀಡಿದರೂ ನೋಂದಣಿ ಶುಲ್ಕ ಪಾವತಿಸಬೇಕಿಲ್ಲ. ಜತೆಗೆ ನೋಂದಣಿ ಪತ್ರ ತಂದರೆ ಸಾಕು. ಅದರಲ್ಲಿರುವ ವಿಶಿಷ್ಟ ಸಂಖ್ಯೆಯನ್ನು ಬಾರ್‌ಕೋಡ್‌ನಿಂದ ಸ್ಕ್ಯಾನ್‌ ಮಾಡಿದರೆ ರೋಗಿಯ ಈ ಹಿಂದಿನ ಎಲ್ಲ ‘ವಿವರ’ ವೈದ್ಯರಿಗೆ ಸುಲಭವಾಗಿ ದೊರೆಯುತ್ತದೆ. ಒಂದೊಮ್ಮೆ, ರೋಗಿ ಆ ಪತ್ರವನ್ನು ಕಳೆದುಕೊಂಡರೆ ಮೊಬೈಲ್‌ ಸಂಖ್ಯೆ ಅಥವಾ ಹೆಸರು, ವಿಳಾಸ ಹೇಳಿದರೂ ಸಾಕು. ಅವರ ಹಿಂದಿನ ಭೇಟಿಯ ವಿವರ ಪತ್ತೆ ಮಾಡಬಹುದಾಗಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌.ಐ.ಸಿ) ತಾಂತ್ರಿಕ ಸಹಕಾರದೊಂದಿಗೆ ಈ ಯೋಜನೆ ರೂಪಿಸಲಾಗಿದೆ. ಆಸ್ಪತ್ರೆಯಲ್ಲಿ ಪ್ರತಿ ದಿನ ಎಷ್ಟು ಹೊಸ ರೋಗಿಗಳು ನೋಂದಾಯಿಸಿಕೊಳ್ಳುತ್ತಿದ್ದಾರೆ, ಒಳರೋಗಿಗಳಾಗಿ ಎಷ್ಟು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಷ್ಟು ಔಷಧಿ ಖರ್ಚಾಗಿದೆ, ಎಷ್ಟು ನೋಂದಣಿ ಶುಲ್ಕ ಸಂಗ್ರಹವಾಗಿದೆ, ಎಷ್ಟು ರಕ್ತ ಸಂಗ್ರಹವಿದೆ.... ಹೀಗೆ ಪ್ರತಿಯೊಂದು ವಿವರವನ್ನು ಯಾರು ಬೇಕಾದರೂ ‘ಇ–ಹಾಸ್ಪಿಟಲ್‌’ ಜಾಲತಾಣಕ್ಕೆ ಹೋಗಿ ಪರಿಶೀಲಿಸಬಹುದು ಎನ್ನುತ್ತಾರೆ ಆಸತ್ರೆಯ ಅಧಿಕಾರಿಗಳು.

‘ಸದ್ಯ ನಾವು ಜಾಲತಾಣದಲ್ಲಿ ಮೊದಲ ಹಂತದಲ್ಲಿ ಕೇವಲ ರೋಗಿಗಳ ನೋಂದಣಿ ಕಾರ್ಯ ಮಾಡುತ್ತಿದ್ದೇವೆ. ಪೂರ್ಣ ಪ್ರಮಾಣದಲ್ಲಿ ಆ ಯೋಜನೆ ಸದುಪಯೋಗ ಪಡೆಯಬೇಕಾದರೆ ನಮಗೆ ಕರ್ನಾಟಕ ರಾಜ್ಯ ನಿಸ್ತಂತು ಜಾಲ (ಕೇಸ್ವಾನ್‌) ಸೌಲಭ್ಯ ಬೇಕು. ಇದಕ್ಕಾಗಿ ನಾವು ಆರೋಗ್ಯ ಇಲಾಖೆಯ ಪ್ರಧಾನ ಕಚೇರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎನ್ನುತ್ತಾರೆ ‘ಇ–ಹಾಸ್ಪಿಟಲ್‌’ ಯೋಜನಾಧಿಕಾರಿ ಡಾ. ಪಿ. ಉಮಾಮಹೇಶ್ವರಿ.

‘ಕೇಸ್ವಾನ್‌ ಸೌಲಭ್ಯ ಬಂದರೆ ಪ್ರತಿಯೊಂದು ವಿಭಾಗಕ್ಕೂ ಒಂದೊಂದು ಕಂಪ್ಯೂಟರ್‌ ಅಳವಡಿಸಲಾಗುತ್ತದೆ. ಆಯಾಯ ವಿಭಾಗದಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಚಿಕಿತ್ಸಾ ವಿವರವನ್ನು ವೈದ್ಯರು ಈ ವ್ಯವಸ್ಥೆಯಡಿ ದಾಖಲಿಸುತ್ತಾರೆ. ಇದರಿಂದ ಸುಲಭವಾಗಿ ರೋಗಿ ಆಸ್ಪತ್ರೆಗೆ ಆಗಾಗ ಭೇಟಿಗೆ ಬಂದಾಗ ಅವರ ಪೂರ್ವದ ಇತಿಹಾಸ ಅರಿಯಲು ಅನುಕೂಲವಾಗುತ್ತದೆ’ ಎಂದರು.

‘ಇ–ಹಾಸ್ಪಿಟಲ್‌ ನೋಂದಣಿಯಡಿ ರೋಗಿಗೆ ನೀಡುವ ವಿಶಿಷ್ಟ ಸಂಖ್ಯೆಯೊಂದಿಗೆ ಆಧಾರ್‌ ಕಾರ್ಡ್ ಸಂಖ್ಯೆಯನ್ನು ಬೆಸೆಯುವ ಪ್ರಯತ್ನ ಮಾಡಬೇಕು. ಇದರಿಂದ ರೋಗಿಯು ಜಗತ್ತಿನ ಯಾವುದೇ ಮೂಲೆಯಲ್ಲಿರುವ ಆಸ್ಪತ್ರೆಗೆ ಹೋಗಿ ಬೆರಳಚ್ಚು ನೀಡಿದರೆ ಸಾಕು.

ಆತನ ಪೂರ್ವ ಚಿಕಿತ್ಸಾ ಮಾಹಿತಿ ಡಿಜಿಟಲ್‌ ಸ್ವರೂಪದಲ್ಲಿ ಬೆರಳ ತುದಿಯಲ್ಲಿ ಲಭ್ಯವಾಗುತ್ತದೆ. ಇದರಿಂದ ವೈದ್ಯರಿಗೆ ತ್ವರಿತವಾಗಿ ಚಿಕಿತ್ಸೆ ನೀಡಲು ಸಹಾಯಕವಾಗಲಿದೆ’ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ವಿವೇಕ್‌ ದೊರೆ ಅಭಿಪ್ರಾಯಪಟ್ಟರು.   

ಎಸ್. ರುದ್ರೇಶ್ವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.