ADVERTISEMENT

ಜಿಲ್ಲೆಯ ಗಡಿಗಳಲ್ಲಿ ಚೆಕ್‌ಪೋಸ್ಟ್

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 8:54 IST
Last Updated 5 ಆಗಸ್ಟ್ 2013, 8:54 IST

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯ ಗಡಿಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ ಎಂದು ಚುನಾವಣಾ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

ಪೋಲಿಸ್, ಆರ್.ಟಿ.ಓ ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡ ಈ ದಳವು ಜಿಲ್ಲೆಗೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ಎಚ್ಚರಿಕೆ ವಹಿಸುವುದು. ಯಾವುದೇ ವಾಹನದಲ್ಲಿ ಅಕ್ರಮವಾಗಿ ಹಣ, ಮದ್ಯ, ಕೊಡುಗೆಗಳನ್ನು ಸಾಗಿಸುವುದು ಕಂಡುಬಂದಲ್ಲಿ ಜಪ್ತಿ ಮಾಡುವ ಅಧಿಕಾರವನ್ನು ಈ ದಳ ಹೊಂದಿರುತ್ತದೆ ಎಂದು ಹೇಳಿದ್ದಾರೆ.

ತಪಾಸಣೆ ಸಂದರ್ಭದಲ್ಲಿ ವಾಹನದಲ್ಲಿ ಇರುವವರ ಜೊತೆ ಸಭ್ಯ ರೀತಿಯಲ್ಲಿ ವರ್ತಿಸುವಂತೆ ಸೂಚಿಸಲಾಗಿದೆ. ಅಕ್ರಮ ಕಂಡುಬಂದಲ್ಲಿ ಮಾತ್ರ ಕ್ರಮ ಜರುಗಿಸಲು ಈ ತಂಡಗಳಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಚಕ್ಷಣ ದಳವು ಯಾವುದಾದರೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸುವಾಗ ಅವುಗಳ ಸಂಪೂರ್ಣ ದಾಖಲೀಕರಣಕ್ಕಾಗಿ `ವಿಡಿಯೋ ಸರ್ವಿಯಲೆನ್ಸ್' ತಂಡವು ಕಾರ್ಯ ನಿರ್ವಹಿಸಲಿದೆ. ಜಪ್ತಿ ಮಾಡಿದ ಅಥವಾ ವಶಪಡಿಸಿಕೊಂಡ ಅಕ್ರಮ ಹಣ, ಮದ್ಯ, ಇತ್ಯಾದಿಗಳ ಕುರಿತು ಕೂಡಲೇ ಎಫ್‌ಐಆರ್ ದಾಖಲಿಸಬೇಕು. ಹಣ ವಶಪಡಿಸಿಕೊಂಡಿದ್ದಲ್ಲಿ ರಾಜ್ಯ ಖಜಾನೆಗೆ 24 ಗಂಟೆಯೊಳಗೆ ಜಮಾ ಮಾಡಬೇಕು. ಬಳಿಕ ಪೊಲೀಸ್ ಕೇಂದ್ರ ಸ್ಥಾನದ ನೊಡಲ್ ಅಧಿಕಾರಿಯು ಪ್ರಕರಣವನ್ನು ಮುಂದುವರಿಸಿ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಅವರು ಆದೇಶಿಸಿದ್ದಾರೆ.

ಚೆಕ್‌ಪೋಸ್ಟ್‌ಗಳಲ್ಲಿ ವಿಚಕ್ಷಣ ದಳವು 2 ಪಾಳಿಯಲ್ಲಿ ಕಾರ್ಯ ನಿರ್ವಹಿಸಲಿದ್ದು, ಬೆಳಿಗ್ಗೆ 8 ರಿಂದ ರಾತ್ರಿ 8 ಗಂಟೆವರೆಗೆ ಮೊದಲನೇ ಪಾಳಿ ಹಾಗೂ ರಾತ್ರಿ 8 ರಿಂದ ಬೆಳಿಗ್ಗೆ 8 ಗಂಟೆವರೆಗೆ ಎರಡನೇ ಪಾಳಿಯಲ್ಲಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.