ADVERTISEMENT

ಡಿ.ಸಿ.ಕಚೇರಿ ಮುಂದೆ ಶವ ಇಟ್ಟು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 9:06 IST
Last Updated 25 ಅಕ್ಟೋಬರ್ 2017, 9:06 IST
ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಮಂಗಳವಾರ ಸಿಂಗ್ರಾಭೋವಿ ದೊಡ್ಡಿಯ ನಿವಾಸಿಗಳು ಶವ ಇಟ್ಟು ಪ್ರತಿಭಟನೆ ನಡೆಸಿದರು
ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಮಂಗಳವಾರ ಸಿಂಗ್ರಾಭೋವಿ ದೊಡ್ಡಿಯ ನಿವಾಸಿಗಳು ಶವ ಇಟ್ಟು ಪ್ರತಿಭಟನೆ ನಡೆಸಿದರು   

ರಾಮನಗರ: ಸ್ಮಶಾನಕ್ಕೆ ಜಾಗ ನೀಡದಿರುವ ಜಿಲ್ಲಾಡಳಿತದ ಕ್ರಮವನ್ನು ಖಂಡಿಸಿ ಸಿಂಗ್ರಾಭೋವಿ ದೊಡ್ಡಿಯ ನಿವಾಸಿಗಳು ಮಂಗಳವಾರ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.

ರಾಮನಗರ ನಗರಸಭೆಯ ಒಂದನೇ ವಾರ್ಡ್ ವ್ಯಾಪ್ತಿಗೆ ಬರುವ ಸಿಂಗ್ರಾಭೋವಿದೊಡ್ಡಿ, ಚಾಮುಂಡಿಪುರ ಗ್ರಾಮದಲ್ಲಿ ಭೋವಿ ಸಮುದಾಯಕ್ಕೆ ಸ್ಮಶಾನ ಮಂಜೂರು ಮಾಡಲಾಗಿದೆ. ಆದರೆ ಇನ್ನೂ ಸ್ಥಳ ಗುರುತು ಮಾಡದ ಹಿನ್ನೆಲೆಯಲ್ಲಿ ಶವ ಸಂಸ್ಕಾರಕ್ಕೆ ಜಾಗವಿಲ್ಲದಂತಾಗಿದೆ ಎಂದು ಆರೋಪಿಸಿದ ನಿವಾಸಿಗಳು ನರಸಮ್ಮ ಎಂಬುವರ ಶವ ಇಟ್ಟು ಪ್ರತಿಭಟನೆಗೆ ಮುಂದಾದರು.

‘ಸಿಂಗ್ರಾಭೋವಿ ದೊಡ್ಡಿ ಗ್ರಾಮಗಳಲ್ಲಿ 350–400 ಕುಟುಂಬಗಳು ವಾಸವಿವೆ. ಇದೇ ಗ್ರಾಮದ ಗ್ರಾಮದ ಸರ್ವೇ ನಂ.139 ರಲ್ಲಿ ಸ್ಮಶಾನಕ್ಕೆ ಜಾಗವನ್ನು ಸರ್ಕಾರ ಮೀಸಲಿಟ್ಟಿದೆ. ಪ್ರಸ್ತುತ ಸದರಿ ಜಾಗವನ್ನು ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಭೂಸ್ವಾಧೀನ ಪಡಿಸಿಕೊಂಡಿರುವುದರಿಂದ ಸ್ಮಶಾನಕ್ಕೆ ಜಾಗಲ್ಲದಂತಾಗಿದೆ.

ADVERTISEMENT

ಸೋಮವಾರ ಗ್ರಾಮದ ನರಸಮ್ಮ (70) ಎಂಬುವರು ಮೃತಪಟ್ಟಿದ್ದು, ಶವಸಂಸ್ಕಾರಕ್ಕೆ ಮಾಡಲು ಜಾಗ ಕೋರಿ ಸ್ಥಳೀಯರು ಮಂಗಳವಾರ ಬೆಳಿಗ್ಗೆ ಅಧಿಕಾರಿಗಳ ಮೊರೆ ಹೋದರು. ಆದರೆ ಸಮರ್ಥ ಪ್ರತ್ಯುತ್ತರ ದೊರಕದ ಹಿನ್ನೆಲೆಯಲ್ಲಿ ಶವವನ್ನು ಮೆರವಣಿಗೆಯಲ್ಲಿ ತಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಇಟ್ಟು ಪ್ರತಿಭಟನೆ ನಡೆಸಿದರು.

‘ಸ್ಮಶಾನಕ್ಕೆ ಪರ್ಯಾಯ ಜಾಗ ನೀಡುವಂತೆ ಕೋರಿ ಗ್ರಾಮ ಲೆಕ್ಕಾಧಿಕಾರಿಯಿಂದ ಜಿಲ್ಲಾಧಿಕಾರಿಗಳ ವರೆಗೆ ಎಲ್ಲರಿಗೂ ಮನವಿ ಮಾಡುತ್ತಾ ಬಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶವ ಸಂಸ್ಕಾರಕ್ಕೆ ಜಾಗ ನೀಡುವವರೆಗೆ ಇಲ್ಲಿಂದ ತೆರಳುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಆರ್.ಪ್ರಶಾಂತ್ ಮಧ್ಯ ಪ್ರವೇಶಿಸಿ ಕೂಡಲೇ ಜಾಗವನ್ನು ಗುರುತಿಸಿ ಕೊಡಲಾಗುವುದು. ಶವ ಸಂಸ್ಕಾರಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಎಂದು ಭರವಸೆ ನೀಡಿದರು. ಅಧಿಕಾರಿಗಳ ಮನವೊಲಿಕೆ ನಂತರ ಕಚೇರಿ ಮುಂಭಾಗದಿಂದ ಶವವನ್ನು ತಮ್ಮ ಸ್ವಗ್ರಾಮಕ್ಕೆ ತೆಗೆದುಕೊಂಡಿ ಹೋಗಿ ಶವಸಂಸ್ಕಾರ ನೆರವೇರಿಸಿದರು.

ಜಿಲ್ಲಾಡಳಿತ ಇದೇ ಧೋರಣೆ ಮುಂದುವರಿಸಿದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸ್ಥಳೀಯರು ಎಚ್ಚರಿಸಿದರು. ಬೋವಿ ಜನಾಂಗದ ಮುಖಂಡ ಹನುಮಂತಯ್ಯ, ಜಗದೀಶ್, ನಾಗರಾಜು, ಪುಟ್ಟಮ್ಮ, ಲಕ್ಷ್ಮಮ್ಮ, ಕಮಲಮ್ಮ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.