ADVERTISEMENT

ದಿಢೀರ್‌ ಭೂಕುಸಿತ : ಜನರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2017, 9:30 IST
Last Updated 23 ಅಕ್ಟೋಬರ್ 2017, 9:30 IST

ರಾಮನಗರ: ನಗರದ ಚರ್ಚ್‌ ರಸ್ತೆಯಲ್ಲಿ ಭಾನುವಾರ ದಿಢೀರನೆ ಕುಸಿದುದರಿಂದ ಜನರಿಗೆ ತೊಂದರೆಯಾಗಿದೆ. 13ನೇ ವಾರ್ಡಿಗೆ ಸೇರಿರುವ ಈ ರಸ್ತೆಯ ಮೂಲಕ ಬಾಲಗೇರಿ, ಟ್ರೂಪ್‌ಲೇನ್‌, ಅರ್ಕೇಶ್ವರ ಕಾಲೊನಿ, ಯಾರೂಬ್‌ನಗರ, ಮಹಬೂಬ್‌ನಗರ, ತೋಪ್‌ಖಾನ್ ಮಹಲ್‌ ಹಾಗೂ ನಗರದ ರೈಲ್ವೆ ನಿಲ್ದಾಣಕ್ಕೆ ಹೋಗಲು ಸೇರಿದಂತೆ ಹಲವು ನಗರಗಳ ಜನರು ಈ ರಸ್ತೆಯಲ್ಲಿಯೆ ಸಂಚರಿಸಬೇಕು. ಜತೆಗೆ ಇಲ್ಲಿರುವ ರೋಮನ್‌ ಕ್ಯಾಥೊಲಿಕ್ ಚರ್ಚ್‌ ಹಾಗೂ ಲೂರ್ದು ಪಬ್ಲಿಕ್‌ ಶಾಲೆಗೆ ಹೋಗಲು ಈ ರಸ್ತೆಯನ್ನೇ ಜನರು ಅವಲಂಬಿಸಿದ್ದಾರೆ.

ಮೃತ್ಯಕೂಪ: ‘ಭೂಮಿ ಕುಸಿದಿದ್ದು ಜನರು ಭಯಭೀತರಾಗಿದ್ದಾರೆ. ಕಾವೇರಿನ ವಾಟರ್‌ ಪೈಪ್‌ ಒಡೆದು ಹೋಗಿರುವುದರಿಂದ ಈ ರೀತಿ ಕುಸಿತ ಉಂಟಾಗಿದೆ. ನಗರಸಭೆಯ ಅಧಿಕಾರಿಗಳು ಕೂಡಲೇ ಈ ಗುಂಡಿಯನ್ನು ಮುಚ್ಚಬೇಕು. ಇಲ್ಲದಿದ್ದರೆ ಈ ಗುಂಡಿ ಮೃತ್ಯುಕೂಪವಾಗಿ ಪರಿಣಮಿಸುತ್ತದೆ’ ಎಂದು ನಿವಾಸಿ ರಘು ಹೇಳಿದರು.

ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷ್ಯ: ‘ನಗರಸಭೆಯವರು ಈ ಪ್ರದೇಶವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ರಸ್ತೆಗೆ ಡಾಂಬರು ಹಾಕುವಾಗ ಹಾಗೂ ಕಾವೇರಿ ಪೈಪ್‌ ಅಳವಡಿಸುವಾಗ ಕಳಪೆ ಕಾಮಗಾರಿ ನಡೆದಿರುವುದರಿಂದ ಈ ಕುಸಿತ ಉಂಟಾಗಿದೆ’ ಎಂದು ಸ್ಥಳೀಯರು ದೂರಿದರು.

ADVERTISEMENT

‘ಭೂಕುಸಿತ ಉಂಟಾಗಿದೆ ಸರಿಪಡಿಸಿ ಎಂದು ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಪೈಪ್‌ ಒಡೆದಿರುವುದರಿಂದ ನೀರು ಪೋಲಾಗುತ್ತಿದೆ. ಇದರಿಂದ ರಸ್ತೆ ಮತ್ತಷ್ಟು ಕುಸಿಯಲಿದೆ. ಸಂಬಂಧಪಟ್ಟವರು ಕೂಡಲೇ ಪೈಪ್‌ ಅನ್ನು ಸರಿಪಡಿಸಿ, ಗುಂಡಿಯನ್ನು ಸಮರ್ಪಕವಾಗಿ ಮುಚ್ಚಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.