ADVERTISEMENT

ನೀರಿನ ಸಮಸ್ಯೆ ಬಗೆಹರಿಸಲು ಆಗ್ರಹ

ಚನ್ನಪಟ್ಟಣ–ಹಲಗೂರು ರಸ್ತೆತಡೆ; ಆಕ್ರೋಶಭರಿತ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2014, 8:19 IST
Last Updated 6 ಫೆಬ್ರುವರಿ 2014, 8:19 IST
ಮೂರು ವರ್ಷಗಳಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಆರೋಪಿಸಿ ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ ಗ್ರಾಮಸ್ಥರು ಬುಧವಾರ ಚನ್ನಪಟ್ಟಣ–ಹಲಗೂರು ರಸ್ತೆಯಲ್ಲಿ ರಸ್ತೆತಡೆ ನಡೆಸಿದರು
ಮೂರು ವರ್ಷಗಳಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಪರಿತಪಿಸುವಂತಾಗಿದೆ ಎಂದು ಆರೋಪಿಸಿ ಚನ್ನಪಟ್ಟಣ ತಾಲ್ಲೂಕಿನ ಸಂತೆಮೊಗೇನಹಳ್ಳಿ ಗ್ರಾಮಸ್ಥರು ಬುಧವಾರ ಚನ್ನಪಟ್ಟಣ–ಹಲಗೂರು ರಸ್ತೆಯಲ್ಲಿ ರಸ್ತೆತಡೆ ನಡೆಸಿದರು   

ಚನ್ನಪಟ್ಟಣ: ‘ಕಳೆದ ಮೂರು ವರ್ಷ­ಗಳಿಂದ ಗ್ರಾಮದಲ್ಲಿ ಕುಡಿಯಲು ನೀರಿಲ್ಲದೆ ಜನ–ಜಾನುವಾರು ಪರಿತಪಿ­ಸು-­ವಂತಾಗಿದೆ’ ಎಂದು ಆರೋಪಿಸಿ ತಾಲ್ಲೂ­ಕಿನ ಸಂತೆಮೊಗೇನ ಹಳ್ಳಿ ಗ್ರಾಮಸ್ಥರು ಬುಧವಾರ ಚನ್ನಪಟ್ಟಣ–ಹಲಗೂರು ರಸ್ತೆಯಲ್ಲಿ ರಸ್ತೆತಡೆ ನಡೆಸಿ ಪ್ರತಿಭಟನೆ ನಡೆಸಿದರು.

‘ಕುಡಿಯುವ ನೀರಿಲ್ಲದೆ ಗ್ರಾಮಸ್ಥರು ಪರಿತಪಿಸುತ್ತಿದ್ದರೂ ಇದುವರೆಗೂ ಅಧಿ­ಕಾರಿಗಳು, ಜನಪ್ರತಿನಿಧಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ಸಮಸ್ಯೆ ಕುರಿತು ಮೂರು ವರ್ಷಗಳಿಂದ ಅಧಿ­ಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿ­ಸಿದರು.

‘ಈಗಾಗಲೇ ಜಿಲ್ಲಾಧಿಕಾರಿ ಕಚೇರಿ, ತಾಲ್ಲೂಕು ಕಚೇರಿ, ತಾ.ಪಂ.ಕಚೇರಿ ಎದುರು ಪ್ರತಿಭಟನೆ ನಡೆಸಿದ್ದರೂ ಅಧಿ­ಕಾರಿಗಳು ನಮ್ಮ ಸಮಸ್ಯೆ ಬಗೆಹರಿಸಿಲ್ಲ. ಸಮಸ್ಯೆ ಬಗೆಹರಿಸು ವುದಾಗಿ ಕೇವಲ ಭರವಸೆ ನೀಡು ತ್ತಾರೆಯೇ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಗ್ರಾಮದಲ್ಲಿ ಒಂದು ಬಿಂದಿಗೆ ನೀರಿಗೆ ` 3  ನೀಡಿ ಖರೀದಿಸುವಂತಹ ಪರಿಸ್ಥಿತಿ ನಿರ್ಮಾ­ಣವಾಗಿದೆ.  ನಮ್ಮ ಸಮಸ್ಯೆಗೆ ಪರಿಹಾರ ದೊರೆಯುವವರೆಗೂ ನಾವು ಜಾಗ ಬಿಟ್ಟು ಕದಲುವುದಿಲ್ಲ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

‘ಗ್ರಾಮಕ್ಕೆ ಕಾವೇರಿ ನೀರು ಪೂರೈಸುವುದಾಗಿ ಶಾಸಕರು ತಿಳಿಸಿದ್ದರು. ಇದಕ್ಕೆ ` 8 ಲಕ್ಷ ಖರ್ಚು ಮಾಡಿ ಪೈಪ್‌­ಲೈನ್ ನಿರ್ಮಿಸಲಾಗಿದೆ. ಆದರೆ ನೀರು ಮಾತ್ರ ಬಂದಿಲ್ಲ’ ಎಂದು ದೂರಿದರು.ವಿಷಯ ತಿಳಿದು ಸ್ಥಳಕ್ಕೆ ಬಂದ ತಹ­ಶೀಲ್ದಾರ್‌ ಶಿವರುದ್ರಪ್ಪ, ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರಾದರೂ, ಜಿಲ್ಲಾಧಿ­ಕಾರಿ ಸ್ಥಳಕ್ಕೆ ಬರುವವರೆಗೆ ರಸ್ತೆತಡೆ ನಿಲ್ಲಿಸುವುದಿಲ್ಲ ಎಂದು ಪ್ರತಿಭನಾ­ಕಾರರು ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿಗಳನ್ನು ಕರೆಸುವುದಾಗಿ ತಿಳಿಸಿ ತಹಶೀಲ್ದಾರ್‌ ಅಲ್ಲಿಂದ ತೆರ­ಳಿದರು.

ಧಿಡೀರಾಗಿ ಬೆಳಿಗ್ಗೆಯಿಂದಲೇ ಗ್ರಾಮಸ್ಥರು ಕೈಗೊಂಡ ಪ್ರತಿಭಟ­ನೆಯಿಂದಾಗಿ ಚನ್ನಪಟ್ಟಣ-–ಹಲಗೂರು ರಸ್ತೆಯ ವಾಹನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಯಿತು. ಮೂರು ಗಂಟೆಗೂ ಹೆಚ್ಚುಕಾಲ ನಡೆದ ಪ್ರತಿ­ಭನೆಯಿಂದ ಶಾಲಾ-–ಕಾಲೇಜುಗಳಿಗೆ ತೆರ­ಳುವ ವಿದ್ಯಾರ್ಥಿಗಳು, ನೌಕರರು ಸಂಕಷ್ಟ ಅನುಭವಿಸುವಂತಾಯಿತು.

ಪ್ರತಿಭಟನೆಯಲ್ಲಿ ಗ್ರಾ.ಪಂ. ಮಾಜಿ ಅಧ್ಯಕ್ಷ ಆನಂದಸ್ವಾಮಿ, ಮಂಜುನಾಥ, ಗ್ರಾ.ಪಂ. ಸದಸ್ಯೆ ವಸಂತಮ್ಮ, ಮುಖಂ­ಡರಾದ ಮೋಹನ್‌ಕುಮಾರ್, ರಾಘ­ವೇಂದ್ರ, ಪುಟ್ಟಸ್ವಾಮಿಗೌಡ, ಸಿದ್ದ­ರಾಮು, ನಾರಾಯಣಸ್ವಾಮಿ, ಚನ್ನೇ­ಗೌಡ, ಕಲ್ಯಾಣಮ್ಮ, ತಿಮ್ಮಮ್ಮ, ಲಕ್ಷ್ಮೀ, ರತ್ನಮ್ಮ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.

ಕುರ್ಚಿ, ಹೂಕುಂಡ ಒಡೆದು ಆಕ್ರೋಶ
ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾಧಿ­ಕಾರಿಗಳನ್ನು ಕರೆತರವುದಾಗಿ ಭರವಸೆ ನೀಡಿ ಹೋದ ತಹಶೀಲ್ದಾರ್‌ ಶಿವರುದ್ರಪ್ಪ ಎಷ್ಟು ಹೊತ್ತು ಕಳೆದರೂ ಆಗಮಿಸಲಿಲ್ಲ ಎಂದು ಸಿಡಿಮಿಡಿಗೊಂಡ ತಾಲ್ಲೂಕಿನ ಸಂತೆಮೊಗೇನಹಳ್ಳಿ ಗ್ರಾಮದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಪಟ್ಟಣದ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿದರು. ಕುರ್ಚಿ, ಹೂಕುಂಡಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪ­ಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಪುರ ಠಾಣೆ ವೃತ್ತ ನಿರೀಕ್ಷಕ ಅಂಜನ್‌­ಕುಮಾರ್, ಎಸ್ಸೈ ವಿಜಯ್‌ಕುಮಾರ್  ಹಾಗೂ ಸಿಬ್ಬಂದಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿದರು.


ನಂತರ ಮಾತನಾಡಿದ ತಹಶೀಲ್ದಾರ್ ಶಿವರುದ್ರಪ್ಪ, ಈ ಸಂಬಂಧ ಗುರುವಾರ (ಫೆ.6) ಪಟ್ಟಣದಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ಸಮ್ಮುಖದಲ್ಲಿ ಸಭೆ ನಡೆಸುತ್ತೇವೆ. ಅಲ್ಲಿ ಗ್ರಾಮಸ್ಥರು ತಮ್ಮ ಸಮಸ್ಯೆ ನಿವೇದಿಸಿಕೊಳ್ಳುವಂತೆ ತಿಳಿಸಿದರು. ನಂತರ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT