ADVERTISEMENT

ನ್ಯಾಯಬೆಲೆ ಅಂಗಡಿಗಳಲ್ಲಿ ತರಹೇವಾರಿ ಬೆಲೆ

ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಣೆ ್ಞ ಸಾರ್ವಜನಿಕರಲ್ಲಿ ಗೊಂದಲ

​ಪ್ರಜಾವಾಣಿ ವಾರ್ತೆ
Published 26 ಜುಲೈ 2013, 9:59 IST
Last Updated 26 ಜುಲೈ 2013, 9:59 IST
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಿರುವ ಅಕ್ಕಿಗೆ ಅಗತ್ಯಕ್ಕಿಂತ ಹೆಚ್ಚು ದರ ಪಡೆದಿರುವ ರಶೀದಿ
ಚನ್ನಪಟ್ಟಣ ತಾಲ್ಲೂಕಿನ ಕೋಡಂಬಹಳ್ಳಿಯ ನ್ಯಾಯಬೆಲೆ ಅಂಗಡಿಯಲ್ಲಿ ಅನ್ನಭಾಗ್ಯ ಯೋಜನೆಯಡಿ ವಿತರಿಸಿರುವ ಅಕ್ಕಿಗೆ ಅಗತ್ಯಕ್ಕಿಂತ ಹೆಚ್ಚು ದರ ಪಡೆದಿರುವ ರಶೀದಿ   

ಚನ್ನಪಟ್ಟಣ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಕಾರ್ಡುದಾರರಿಗೆ ವಿತರಿಸುತ್ತಿರುವ ಒಂದು ಕೆ.ಜಿ. ಅಕ್ಕಿಯ ಬೆಲೆ ಎಷ್ಟು? -ಹೀಗೊಂದು ಪ್ರಶ್ನೆ ತಾಲ್ಲೂಕಿನಲ್ಲಿ ಸಾರ್ವಜನಿಕರನ್ನು ಕಾಡುತ್ತಿದೆ.

ಸರ್ಕಾರ ಬಡವರಿಗಾಗಿಯೇ ರೂಪಿಸಿರುವ ಈ ಯೋಜನೆಯಲ್ಲಿ 1 ಕೆ.ಜಿ. ಅಕ್ಕಿಗೆ 1 ರೂ. ಪಡೆಯಬೇಕೆಂಬ ನಿಯಮವಿದ್ದರೂ ತಾಲ್ಲೂಕಿನ ಹಲವಾರು ನ್ಯಾಯಬೆಲೆ ಅಂಗಡಿಗಳಲ್ಲಿ 1 ಕೆ.ಜಿ ಅಕ್ಕಿಗೆ ತರಹೇವಾರಿ ಬೆಲೆ ಪಡೆಯುತ್ತಿರುವ ಆರೋಪಗಳು ಕೇಳಿಬರುತ್ತಿದ್ದು, ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ.

ತಾಲ್ಲೂಕಿನ ಹಲವಾರು ನ್ಯಾಯಬೆಲೆ ಅಂಗಡಿಗಳಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ 30 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಸಕ್ಕರೆಗೆ ಸೇರಿ ಒಟ್ಟು 45 ರೂಪಾಯಿ ಗಳಿಂದ 53 ರೂಪಾಯಿಗಳವರೆಗೆ ವಸೂಲಿ ಮಾಡುತ್ತಿರುವ ದೂರುಗಳು ಕೇಳಿಬರುತ್ತಿದ್ದು, 30 ಕೆ.ಜಿ. ಅಕ್ಕಿ ಹಾಗೂ 1 ಕೆ.ಜಿ. ಸಕ್ಕರೆಗೆ ಸರ್ಕಾರ ನಿಗದಿಪಡಿಸಿರುವ ಬೆಲೆ 43.50ರೂಪಾಯಿ.

ಬಡವರಿಗೆ ಅತಿ ಕಡಿಮೆ ಬೆಲೆಯಲ್ಲಿ ಅಕ್ಕಿ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಅದರಂತೆ ಅಕ್ಕಿ ವಿತರಿಸುವಂತೆ ಸೂಚಿಸಿದ್ದರೂ, ನ್ಯಾಯಬೆಲೆ ಅಂಗಡಿಯವರು ಮಾತ್ರ ಹೆಚ್ಚು ಬೆಲೆ ವಸೂಲಿ ಮಾಡುತ್ತಿರುವುದು ಜನರಲ್ಲಿ ಅಸಮಾಧಾನ ಮೂಡಿಸಿದೆ.

ಇದು ಸರ್ಕಾರ ನಿಗದಿಪಡಿಸಿರುವ ಬೆಲೆಯೋ? ಅಥವಾ ನ್ಯಾಯಬೆಲೆ ಅಂಗಡಿಗಳ ಮಾಲೀಕರು ನಿಗದಿಗೊಳಿಸಿರುವ ಬೆಲೆಯೋ? ಎಂಬ ಜಿಜ್ಞಾಸೆ ಸಾರ್ವಜನಿಕರದ್ದು. ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರನ್ನು ವಿಚಾರಿಸಿದರೆ ಈ ಬಗ್ಗೆ ಸ್ಪಷ್ಟ ಉತ್ತರ ದೊರೆಯುತ್ತಿಲ್ಲ. ಲಾರಿಗಳಲ್ಲಿ ಅಕ್ಕಿ ದಾಸ್ತಾನು ಸಾಗಿಸಲು ಈ ವೆಚ್ಚ ತಗಲುತ್ತಿದ್ದು, ಈ ರೀತಿಯಲ್ಲಿ ಭರಿಸುತ್ತಿರುವುದಾಗಿ ಸಿದ್ಧ ಉತ್ತರ ನೀಡುತ್ತಿದ್ದಾರೆ.

ಆಹಾರ ನಿರೀಕ್ಷಕ ಮಲ್ಲಿಕಾರ್ಜುನ್ ಅವರನ್ನು ವಿಚಾರಿಸಿದರೆ, `ನ್ಯಾಯಬೆಲೆ ಅಂಗಡಿಗಳ ಮಾಲೀಕರು ಅಂತಹ ಯಾವುದೇ ಹೆಚ್ಚು ದರ ಪಡೆಯುವ ನಿಯಮ ಇಲ್ಲ. ಸರ್ಕಾರ ನಿಗದಿಗೊಳಿಸಿರುವ ದರವನ್ನೇ ಪಡೆಯಬೇಕು. ಒಂದು ವೇಳೆ ನ್ಯಾಯಬೆಲೆ ಅಂಗಡಿಯವರು ಹೆಚ್ಚು ದರ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರು ರಶೀದಿ ಸಮೇತ ದೂರು ನೀಡಿದರೆ ಅಂಥವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದರು. ಒಟ್ಟಿನಲ್ಲಿ ಸರ್ಕಾರ ಬಡವರಿಗಾಗಿ ರೂಪಿಸಿದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ನ್ಯಾಯಬೆಲೆ ಅಂಗಡಿಯವರು ತಮಗಿಷ್ಟ ಬಂದಂತೆ ಬದಲಾಯಿಸಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ದೂರು: ತಾಲ್ಲೂಕಿನ ನ್ಯಾಯಬೆಲೆ ಅಂಗಡಿ ಮಾಲೀಕರು ಒಂದು ಕೆ.ಜಿ. ಅಕ್ಕಿಗೆ 1.50 ರೂ ವಸೂಲಿ ಮಾಡುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಚ್.ಡಿ.ಕುಮಾರಸ್ವಾಮಿ ಯುವ ಸೇನೆ ಪದಾಧಿಕಾರಿಗಳು ಗುರುವಾರ ತಹಶೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಹಣ ವಸೂಲಿಯ ರಶೀದಿ ಸಮೇತ ಮನವಿ ಪತ್ರ ಅರ್ಪಿಸಿದ ಅವರು, `ತಾಲ್ಲೂಕಿನ ಕೆಲವು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ತೂಕದಲ್ಲಿಯೂ ವಂಚನೆ ಮಾಡಲಾಗುತ್ತಿದೆ' ಎಂದು ಪತ್ರದಲ್ಲಿ ವಿವರಿಸಿದ್ದಾರೆ.

`ತಾಲ್ಲೂಕಿನ ಬಹುತೇಕ ನ್ಯಾಯಬೆಲೆ ಅಂಗಡಿ ತಿಂಗಳಲ್ಲಿ 2-3 ದಿನಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದೆ. ಆ ದಿನಗಳಲ್ಲಿ ಮಾತ್ರ ಪಡಿತರ ವಸ್ತುಗಳನ್ನು ಕೊಂಡುಕೊಳ್ಳುವಂತೆ ಸಾರ್ವಜನಿಕರಿಗೆ ತಾಕೀತು ಮಾಡುತ್ತಾರೆ. ಬಡಬಗ್ಗರು, ಕೂಲಿನಾಲಿ ಮಾಡಿ ಬದುಕುವ ಜನರು ಹಣವಿಲ್ಲದೆ ಆ ದಿನಗಗಳಲ್ಲಿ ಅಕ್ಕಿ ಕೊಳ್ಳಲು ಸಾಧ್ಯವಾಗದಿದ್ದರೆ, ಅವರಿಗೆ ಮುಂದೆ ಪಡಿತರ ವಸ್ತುಗಳನ್ನು ವಿತರಿಸುವುದೇ ಇಲ್ಲ' ಎಂದರು.

ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ಸಾರ್ವಜನಿಕರಿಗೆ 1ರೂ.  ಬದಲಿಗೆ 1.50ರೂ.ಗೆ 1 ಕೆ.ಜಿ. ಅಕ್ಕಿ ಮಾರಾಟ ಮಾಡುತ್ತಿರುವುದು ಜನರಿಗೆ ಹಾಗೂ ಸರ್ಕಾರಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಇದರ ವಿರುದ್ಧ ತಹಶೀಲ್ದಾರ್ ಅವರು ಕ್ರಮಕೈಗೊಳ್ಳಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಯುವಸೇನೆಯ ಪದಾಧಿಕಾರಿಗಳಾದ ಎಸ್.ಪಿ.ಅಶ್ವತ್ಥ್‌ಕುಮಾರ್, ಸಿ.ರಾಮಸ್ವಾಮಿ, ಕೆ.ಎಸ್.ನಾಗರಾಜು, ಶಿವರಾಮ್, ಕೆ.ಪುಟ್ಟಸ್ವಾಮಿಗೌಡ ಒತ್ತಾಯಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.