ADVERTISEMENT

ಪೋಷಕರನ್ನು ಸೆಳೆಯಲು ವಿಫಲವಾದ ಸರ್ಕಾರಿ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:49 IST
Last Updated 17 ಡಿಸೆಂಬರ್ 2013, 8:49 IST

ರಾಮನಗರ: ದಿನೇ ದಿನೇ ಜಿಲ್ಲೆಯ ಸರ್ಕಾರಿ ಶಾಲೆಗಳ ದಾಖಲಾತಿ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು  ನಾಲ್ಕು ವರ್ಷಗಳ ಅವಧಿಯಲ್ಲಿ 30ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಬಾಗಿಲಿಗೆ ಬೀಗ ಹಾಕಲಾಗಿದೆ.


ಪೋಷಕರ ಇಂಗ್ಲಿಷ್ ವ್ಯಾಮೋಹ ದಿಂದ ಕನ್ನಡ ಶಾಲೆಗಳು ಬರಿದಾಗುತ್ತಿವೆ. ಇಂಗ್ಲಿಷ್ ಭಾಷೆಯನ್ನು ಒಂದು ವಿಷಯ ವನ್ನಾಗಿ ಬೋಧಿಲಾಗುತ್ತಿದ್ದರೂ ಪೋಷಕರ ವಿಶ್ವಾಸ ಗಳಿಸುವಲ್ಲಿ ಸರ್ಕಾರಿ ಶಾಲೆಗಳು ವಿಫಲವಾಗಿವೆ ಎಂಬುದನ್ನು ಅಂಕಿ ಅಂಶಗಳು ಸಾರುತ್ತವೆ.

ಜಿಲ್ಲೆಯಲ್ಲಿ 1,548 ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿವೆ. ಇವುಗಳಲ್ಲಿ 1,394 ಸರ್ಕಾರಿ, 24 ಅನುದಾನಿತ ಮತ್ತು 171 ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು.  ಈ ವರ್ಷ ಜಿಲ್ಲೆಯ ಪ್ರಾಥಮಿಕ ಶಾಲೆಗಳಲ್ಲಿ 1,04,490 ವಿದ್ಯಾರ್ಥಿ ಗಳು ದಾಖಲಾ ಗಿದ್ದಾರೆ. ಇದರಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 64,717, ಅನುದಾನಿತ ಶಾಲೆಗಳಲ್ಲಿ 7,298 ವಿದ್ಯಾರ್ಥಿಗಳು ಮತ್ತು ಅನುದಾನ ರಹಿತ ಖಾಸಗಿ ಶಾಲೆಗಳಲ್ಲಿ 32,475 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

30 ಶಾಲೆಗಳು ಬಂದ್: ಒಂದೆಡೆ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚುವುದಿಲ್ಲ ಎಂದು ಹೇಳುತ್ತಿದೆ. ಇನ್ನೊಂದೆಡೆ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳನ್ನು ಕಡಿಮೆ ದಾಖಲಾತಿ ಹೆಸರಿನಲ್ಲಿ ಮುಚ್ಚುತ್ತಿದೆ. ವಿದ್ಯಾರ್ಥಿಗಳ ಕೊರತೆ, ಶಾಲಾ ವಿಲೀನದ ಕಾರಣದಿಂದ ಜಿಲ್ಲೆಯಲ್ಲಿ ಮೂರು ವರ್ಷದಲ್ಲಿ ಒಟ್ಟು 30 ಶಾಲೆಗಳಿಗೆ ಬೀಗ ಹಾಕಲಾಗಿದೆ.

  ಖಾಸಗಿ ಶಾಲೆಗಳನ್ನು ಬಯಸುವ ಪೋಷಕರು: ಅನುದಾನಿತ ರಹಿತ ಶಾಲೆಗಳ ಸಂಖ್ಯೆ ಕೇವಲ 171 ಇದ್ದರೂ ಇಲ್ಲಿ ವಿದ್ಯಾರ್ಥಿ ಗಳ ಸಂಖ್ಯೆ 32,475ರಷ್ಟಿದೆ. ಅಂದರೆ ಶೇ 31 ವಿದ್ಯಾರ್ಥಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಸಂಖ್ಯೆ ನಗರ ಪ್ರದೇಶಗಳಲ್ಲಿ ಶೇ 60ಕ್ಕೂ ಹೆಚ್ಚಿದೆ.

ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ ಶೇ 25ರಷ್ಟು ದಾಖಲಾತಿ ಪ್ರಮಾಣ ಕುಸಿತ ಕಂಡಿದರೆ, ನಗರ ಪ್ರದೇಶದಲ್ಲಿ ಇದು ಶೇ 50ಕ್ಕೂ ಹೆಚ್ಚಿದೆ ಎಂದು ಶಿಕ್ಷಣ ಇಲಾ ಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

100ಕ್ಕೂ ಅಧಿಕ ಸರ್ಕಾರಿ ಶಾಲೆ ಗಳಲ್ಲಿ 50ಕ್ಕೂ ಕಡಿಮೆ ವಿದ್ಯಾರ್ಥಿ ಗಳಿದ್ದಾರೆ. ರಾಮನಗರ ತಾಲ್ಲೂಕು ಬಿಡದಿ ಹೋಬಳಿ ದಾಸಪ್ಪನದೊಡ್ಡಿ ಗ್ರಾಮದಲ್ಲಿರುವ ಪ್ರಾಥಮಿಕ ಶಾಲೆ ಯಲ್ಲಿ 3ನೇ ತರಗತಿಯಲ್ಲಿ ವಿದ್ಯಾರ್ಥಿ ಗಳೇ ಇಲ್ಲ!

ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳಕ್ಕೆ ಸರ್ಕಾರ ಉಚಿತ ಶಿಕ್ಷಣ, ಪುಸ್ತಕ, ಸಮವಸ್ತ್ರ, ಊಟ ಮುಂತಾದ ಸವಲತ್ತುಗಳನ್ನು ನೀಡುತ್ತಿದೆ. ಆದರೂ ಪೋಷಕರ ಚಿತ್ತ ಖಾಸಗಿ ಶಾಲೆಗಳತ್ತ ಜಾರುತ್ತಿರುವುದು ವಿಪರ್ಯಾಸ.

ಎಸ್‌ಎಸ್‌ಎ ಅನುದಾನ: ರಾಮನಗರ ಜಿಲ್ಲೆಗೆ ಸರ್ವ ಶಿಕ್ಷಣ ಅಭಿಯಾನದಲ್ಲಿ  (ಎಸ್‌ಎಸ್‌ಎ) 2010–11ನೇ ಸಾಲಿನಲ್ಲಿ ರೂ 6.2 ಕೋಟಿ, 2011–-12ರಲ್ಲಿ ರೂ 5 ಕೋಟಿ, 2012– -13ನೇ ಸಾಲಿನಲ್ಲಿ ರೂ 8 ಕೋಟಿ ಅನುದಾನ ಬಂದಿದೆ. ಶಾಲೆಗಳಿಗೆ ಕಾಂಪೌಂಡ್ ಗೋಡೆಗಳು, ಹೆಚ್ಚುವರಿ ತರಗತಿ ಕೊಠಡಿಗಳು, ಪೀಠೋಪಕರಣ ಸೇರಿದಂತೆ ಹಾಲಿ ಇರುವ ಶಾಲೆಗಳ ಕಟ್ಟಡಗಳ ದುರಸ್ತಿ ಕಾರ್ಯಗಳು ನಡೆದಿವೆ.

ಎಸ್‌ಎಸ್‌ಎ ಮೂಲಕ ಜಿಲ್ಲೆಯ ಸರ್ಕಾರಿ ಶಾಲೆಗಳ 4,309 ತರಗತಿ ಕೊಠಡಿಗಳ ಪೈಕಿ 900ಕ್ಕೂ ಹೆಚ್ಚು ಕೊಠಡಿಗಳು ದುರಸ್ತಿಯಾಗಬೇಕು. 10ಕ್ಕೂ ಹೆಚ್ಚು ಶಾಲಾ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ ಎಂದು ಎಸ್‌ಎಸ್‌ಎ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT