ADVERTISEMENT

ಬನ್ನೇರುಘಟ್ಟಕ್ಕೆ ಇಬ್ಬರು ಅತಿಥಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2012, 19:30 IST
Last Updated 2 ಫೆಬ್ರುವರಿ 2012, 19:30 IST

ಆನೇಕಲ್: ತುಮಕೂರು ಜಿಲ್ಲೆಯ ಗುಬ್ಬಿಯಿಂದ ಸಂರಕ್ಷಿಸಲಾದ ಒಂದು ಹೆಣ್ಣು ಕರಡಿ ಮತ್ತು ಎರಡೂವರೆ ತಿಂಗಳ ಎರಡು ಮರಿಗಳಿಗೆ ಬನ್ನೇರುಘಟ್ಟ ಜೈವಿಕ ಉದ್ಯಾನದ ಕರಡಿ ಧಾಮದಲ್ಲಿ ಆಶ್ರಯ ನೀಡಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜು ತಿಳಿಸಿದರು.

ಗುಬ್ಬಿ ಸಮೀಪ ಕಾಣಿಸಿಕೊಂಡಿದ್ದ ಕರಡಿಯನ್ನು ಸೆರೆ ಹಿಡಿಯಲು 10ದಿನಗಳ ಹಿಂದೆ ಬೋನನ್ನು ಇಡಲಾಗಿತ್ತು.  ಸೆರೆಸಿಕ್ಕ ಕರಡಿ ಬೋನಿನಿಂದ ಹೊರಬರಲು ಹರಸಾಹಸ ಮಾಡಿ ಕಬ್ಬಿಣದ ಸರಳುಗಳನ್ನು ಹಲ್ಲುಗಳಿಂದ ಕಚ್ಚಿದೆ. ಇದರಿಂದ ಅದರ ಬಾಯಿಯ ಮುಂಭಾಗ ಮುರಿದುಹೋಗಿದ್ದು ಕೋರೆ ದವಡೆ ಮಾತ್ರ ಉಳಿದಿದೆ. ಪಾದ ಮತ್ತು ಉಗುರುಗಳಿಗೂ ಸಹ ಸಣ್ಣ ಪುಟ್ಟ ಗಾಯಗಳಾಗಿರುವುದು ವೈದ್ಯಕೀಯ ಪರೀಕ್ಷೆ ನಡೆಸಿದ ಸಂದರ್ಭದಲ್ಲಿ ಕಂಡು ಬಂದಿದೆ.

ಮರಿಗಳು ನಿರ್ಜಲೀಕರಣದಿಂದ (ಡಿಹೈಡ್ರೇಷನ್) ಬಳಲುತ್ತಿದ್ದು ಅವುಗಳಿಗೂ ಸಹ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮತ್ತು ಮರಿಗಳನ್ನು ಉದ್ಯಾನದ ಪ್ರಶಾಂತ ಸ್ಥಳದಲ್ಲಿ ಬಿಡಲಾಗಿದ್ದು ಉದ್ಯಾನದ ವೈದ್ಯರು ಸೂಕ್ಷ್ಮವಾಗಿ ಗಮನಿಸಿ ಆರೈಕೆ ಮಾಡುತ್ತಿದ್ದಾರೆ. ಕರಡಿಗಳು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿವೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.