ರಾಮನಗರ: ಇಲ್ಲಿನ ನಗರಸಭೆಯ ಆಡಳಿತದ ಚುಕ್ಕಾಣಿ ಹಿಡಿಯಲು ಸಿದ್ಧತೆ ನಡೆಸಿರುವ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ– ಉಪಾಧ್ಯಕ್ಷ ಸ್ಥಾನಕ್ಕೆ ಬಾರಿ ಪೈಪೋಟಿ ಎದುರಾಗಿದ್ದು, ಜಾತಿ, ಧರ್ಮದ ಲಾಭಿ ಜತೆಗೆ ಅನುಭವದ ಆಧಾರದ ಮೇಲೆ ಸ್ಥಾನ ನೀಡುವಂತೆ ಆಕಾಂಕ್ಷಿಗಳು ಪಕ್ಷದ ಹಿರಿಯ ಮುಖಂಡರ ಮೇಲೆ ಒತ್ತಡ ಹೇರುತ್ತಿದ್ದಾರೆ.
ಹೀಗಾಗಿ ಸೋಮವಾರ ನಡೆಯಲಿರುವ ಅಧ್ಯಕ್ಷ– ಉಪಾಧ್ಯಕ್ಷ ಚುನಾವಣೆ ಹೆಚ್ಚು ಕುತೂಹಲ ಮೂಡಿಸಿದೆ.ರಾಮನಗರ ನಗರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮತ್ತು ಉಪಾ-ಧ್ಯಕ್ಷ ಸ್ಥಾನ ಬಿಸಿಎಂ (ಎ) ಪ್ರವರ್ಗಕ್ಕೆ ಮೀಸಲಾಗಿದೆ. ಅಧ್ಯಕ್ಷ ಸ್ಥಾನಕ್ಕೆ ಮಹಮ್ಮದ್ ಆರಿಫ್ ಖುರೇಷಿ (ವಾರ್ಡ್ 16), ಎ.ಬಿ.ಚೇತನ್ ಕುಮಾರ್ (ವಾರ್ಡ್ 1), ಡಿ.ಕೆ.ಶಿವಕುಮಾರ್(ವಾರ್ಡ್ 2), ಬಾಬು (ವಾರ್ಡ್ 27) ಅವರುಗಳ ನಡುವೆ ತೀವ್ರ ಪೈಪೋಟಿಯಿದೆ. ಇದಲ್ಲದೆ ಪಿ.ರವಿಕುಮಾರ್ (ವಾರ್ಡ್ 21), ಸೈಯದ್ ತಲ್ಹಾ ಪಾಷಾ (ವಾರ್ಡ್ 12) ಮತ್ತು ಸೈಯದ್ ನಿಜಾಂ ಪಾಷಾ (ವಾರ್ಡ್ 13) ಅವರು ಕೂಡ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.
ಬಲಾಬಲ: ನಗರಸಭೆಯ 31 ವಾರ್ಡ್ಗಳ ಪೈಕಿ ಕಾಂಗ್ರೆಸ್ ಸದಸ್ಯರು 16, ಜೆಡಿಎಸ್ 12, ಬಿಜೆಪಿ 2 ಮತ್ತು ಪಕ್ಷೇತರರು 1 ಸದಸ್ಯರಿದ್ದಾರೆ. ಆಡಳಿತ ನಡೆಸಲು ಕಾಂಗ್ರೆಸ್‌ಗೆ ಬಹುಮತವಿದ್ದು, ಜೊತೆಗೆ ಇಬ್ಬರು ಬಿಜೆಪಿ ಅಭ್ಯರ್ಥಿಗಳ ಪೈಕಿ ಒಬ್ಬರ ಬೆಂಬಲವಿದೆ. ಹೀಗಾಗಿ ಕಾಂಗ್ರೆಸ್ ಆಡಳಿತ ನಡೆಸುವ ಎಲ್ಲ ತಯಾರಿ ಮಾಡಿಕೊಂಡಿದೆ.
ಇನ್ನೊಂದೆಡೆ ಒಬ್ಬ ಬಿಜೆಪಿ ಸದಸ್ಯ ಹಾಗೂ ಪಕ್ಷೇತರರು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದಾರೆ. ಶಾಸಕ (ಎಚ್.ಡಿ.ಕುಮಾರಸ್ವಾಮಿ) ಮತ್ತು ವಿಧಾನ ಪರಿಷತ್ತಿನ ಸದಸ್ಯ ಸೈಯದ್ ಮುದೀರ್ ಆಘಾ ಅವರು ಮತ ಚಲಾಯಿಸುವ ಹಕ್ಕು ಹೊಂದಿರುವ ಕಾರಣ ಜೆಡಿಎಸ್ ಬಲ 16ಕ್ಕೆ ಏರಿಕೆಯಾಗುತ್ತದೆ. ಸಂಸದ ಡಿ.ಕೆ.ಸುರೇಶ್ ಮತ ಮತ್ತು ಬಿಜೆಪಿ ಒಬ್ಬ ಸದಸ್ಯನ ಬೆಂಬಲದಿಂದ ಕಾಂಗ್ರೆಸ್ ಮತ 18ಕ್ಕೆ ಏರಿಕೆಯಾಗುತ್ತದೆ.
ಅನುಭವಕ್ಕೆ ಮಾನ್ಯ ಮಾಡಿ: ಎರಡನೇ ಬಾರಿಗೆ ಗೆಲುವು ಸಾಧಿಸಿರುವ ಮಹಮ್ಮದ ಆರಿಫ್ ಖುರೇಷಿ ತಾವು ಹಿರಿಯ ಸದಸ್ಯರಾಗಿದ್ದು, ತಮಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹಠ ಹಿಡಿದಿದ್ದಾರೆ. ಎರಡು ಬಾರಿಯೂ ಸಾಮಾನ್ಯ ಕ್ಷೇತ್ರದಿಂದ ಗೆಲುವು ಸಾಧಿಸಿದ್ದೇನೆ. ನಗರ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಜತೆಗೆ ನನ್ನ ತಂದೆಯವರು ಸಹ ಎರಡು ಬಾರಿ ಕೌನ್ಸಿಲರ್ ಆಗಿದ್ದರು.
ಹಾಗಾಗಿ ನಗರಸಭೆಯ ಆಡಳಿತದ ಬಗ್ಗೆ ಅರಿವಿರುವುದರಿಂದ ನನಗೆ ಪ್ರಾಶಸ್ತ್ಯ ನೀಡಬೇಕು ಎಂದು ಮುಖಂಡರ ಬಳಿ ಬೇಡಿಕೆ ಇಟ್ಟಿದ್ದಾರೆ.
ಇನ್ನೊಂದೆಡೆ ರಾಮನಗರ ಪುರಸಭೆಯ (ಹಿಂದೆ) ಮಾಜಿ ಅಧ್ಯಕ್ಷರ ಪುತ್ರ ಸೈಯದ್ ತಲ್ಹಾ ಪಾಷಾ ಮತ್ತು ನಿಜಾಂ ಪಾಷಾ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.
ಜಾತಿ ಬಲ: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿರುವುದರಿಂದ ಒಕ್ಕಲಿಗ ಅಭ್ಯರ್ಥಿಯನ್ನು ಪರಿಗಣಿಸುವಂತೆ ಒಕ್ಕಲಿಗ ಸದಸ್ಯರು ಲಾಬಿ ನಡೆಸುತ್ತಿದ್ದಾರೆ. ಸದಸ್ಯರಾದ ಎ.ಬಿ.ಚೇತನ್ ಕುಮಾರ್, ಡಿ.ಕೆ.ಶಿವಕುಮಾರ್, ಬಾಬು ಪರವಾಗಿ ಕಾಂಗ್ರೆಸ್‌ನ ಒಕ್ಕಲಿಗ ಮುಖಂಡರು ಲಾಬಿ ನಡೆಸಿದ್ದಾರೆ. ದಲಿತ ಸಮುದಾಯಕ್ಕೆ ಈ ಬಾರಿ ಅವಕಾಶ ಕೊಡಬೇಕು ಎಂದು ಸದಸ್ಯ ಪಿ.ರವಿಕುಮಾರ್ ಬೆಂಬಲಿಗರು ಕಾಂಗ್ರೆಸ್ ಮುಖಂಡರನ್ನು ಆಗ್ರಹಿಸಿದ್ದಾರೆ ಎನ್ನಲಾಗಿದೆ.
ಅಧಿಕಾರ ಹಂಚಿಕೆ ಸಾಧ್ಯತೆ: ವಿವಿಧ ಬಗೆಯ ಒತ್ತಡ ಮತ್ತು ಲಾಬಿಯಿಂದ ಬೇಸತ್ತಿರುವ ಕಾಂಗ್ರೆಸ್ ಮುಖಂಡರು ಮೊದಲ ಅವಧಿಯಲ್ಲಿ ಇಬ್ಬರು ಅಥವಾ ಮೂವರ ನಡುವೆ ಅಧಿಕಾರ ಹಂಚಿಕೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದರೆ ಯಾರಿಗೆ ಮೊದಲು ಅವಕಾಶ ಒದಗಿಸಬೇಕು ಎಂಬುದನ್ನು ಮುಖಂಡರು ಇನ್ನೂ ನಿರ್ಧರಿಸಿಲ್ಲ ಎಂದು ಗೊತ್ತಾಗಿದೆ. ಈ ನಡುವೆ ಕಾಂಗ್ರೆಸ್‌ನ 15 ಸದಸ್ಯರು ಚಿಕ್ಕಮಗಳೂರಿನಲ್ಲಿ ವಾಸ್ತವ್ಯ ಹೂಡಿದ್ದು, ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನೇರವಾಗಿ ನಗರಸಭೆ ಚುನಾವಣಾ ಸ್ಥಳಕ್ಕೆ ಬರಲಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಕಾದು ನೋಡುವ ತಂತ್ರ: ಜೆಡಿಎಸ್‌ಗೆ ಸ್ವಂತ ಶಕ್ತಿಯ ಮೇಲೆ ಅಧಿಕಾರ ರಚಿಸುವಷ್ಟು ಬಲ ಇಲ್ಲದಿದ್ದರೂ ಕಾಂಗ್ರೆಸ್ ಸದಸ್ಯರಲ್ಲಿ ಬಂಡಾಯ ಸ್ಫೋಟವಾದರೆ ಜೆಡಿಎಸ್ ಅದನ್ನು ಸದುಪಯೋಗಪಡಿಸಿಕೊಳ್ಳು ತಂತ್ರ ಅನುಸರಿಸಿದೆ. ಇನ್ನೂ ಕ್ಷೇತ್ರದ ಶಾಸಕ ಎಚ್.ಡಿ.ಕುಮಾರಸ್ವಾಮಿ ಅವರು ಮತ ಚಲಾಯಿಸಲು ಆಗಮಿಸುತ್ತಾರೋ ಇಲ್ಲವೋ ಎಂಬ ಕುತೂಹಲವೂ ಸದಸ್ಯರಲ್ಲಿದೆ. ಒಂದು ವೇಳೆ ಕಾಂಗ್ರೆಸ್ ಭಿನ್ನಮತದ ಲಾಭ ದೊರೆಯುವುದಾದರೆ ಅವರು ಮತ ಚಲಾಯಿಸಲು ಬರುತ್ತಾರೆ ಎಂದು ಗೊತ್ತಾಗಿದೆ. ಆದರೆ ಅಧಿಕಾರ ಹಿಡಿಯಲು ಯಾವುದೇ ವಾಮ ಮಾರ್ಗ ಅನುಸರಿಸಬಾರದು ಎಂಬ ಸಂದೇಶವನ್ನು ಸ್ಥಳೀಯ ಜೆಡಿಎಸ್ ಮುಖಂಡರಿಗೆ ರವಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.