ರಾಮನಗರ: `ನಮಗೆ ಸಮಯಕ್ಕೆ ಸರಿಯಾಗಿ ವೇತನ ನೀಡುವುದಿಲ್ಲ, ಗುತ್ತಿಗೆದಾರರು ಮತ್ತು ಅಧಿಕಾರಿಗಳ ಕಿರುಕಳ ಅತೀವ. ನಮ್ಮ ಆರೋಗ್ಯ ಸುಧಾರಣೆಗೆ ಯಾರೂ ಗಮನ ಹರಿಸುವುದಿಲ್ಲ'...
ಇವು ರಾಮನಗರದ ಪೌರಕಾರ್ಮಿಕರ ಆರೋಪಗಳು. ನಗರಸಭೆ ವ್ಯಾಪ್ತಿಯಲ್ಲಿ ಪೌರ ಕಾರ್ಮಿಕರ ಕೊರತೆ ಇರುವ ಕಾರಣ ಇರುವ ಕೆಲವೇ ಕಾರ್ಮಿಕರ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ ಎಂಬುದು ಅವರ ದೂರು.
ರಾಮನಗರ ನಗರಸಭೆಯಲ್ಲಿ 31 ವಾರ್ಡ್‌ಗಳಿದ್ದು, 45 ಕಾಯಂ ಮತ್ತು 45 ಗುತ್ತಿಗೆ ಪೌರ ಕಾರ್ಮಿಕರಿದ್ದಾರೆ. ಆರೋಗ್ಯ ಭದ್ರತೆ ಇಲ್ಲದ ಕಾರಣ ಬಹುತೇಕರು ಆತಂಕದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಬಹುತೇಕರಿಗೆ ಆಸ್ತಮಾ, ಅಲರ್ಜಿ, ಇಸುಬು, ತುರಿಕೆ ಮೊದಲಾದ ಚರ್ಮದ ಕಾಯಿಲೆಗಳು ಅಂಟಿಕೊಂಡಿವೆ. ಕೆಲವರಿಗೆ ಉಸಿರಾಟದ ತೊಂದರೆಯೂ ಇದೆ. ಆದರೆ ಅಧಿಕಾರಿಗಳು ಮತ್ತು ನಗರಸಭೆ ಜನಪ್ರತಿನಿಧಿಗಳು ನಮ್ಮಗಳ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ ಎಂಬುದು ಅವರ ಬೇಸರದ ನುಡಿ.
ಒಳಚರಂಡಿ ಸಂಪರ್ಕ ಎಲ್ಲೆಡೆ ಇಲ್ಲ: `ನಗರದಲ್ಲಿ ಒಳಚರಂಡಿ ಸಂಪರ್ಕ ಸರಿಯಾಗಿಲ್ಲ. ಬಹುತೇಕ ಬಡಾವಣೆಗಳಲ್ಲಿ ಚರಂಡಿಗೆ ಯುಜಿಡಿ (ಅಂಡರ್‌ಗ್ರೌಂಡ್ ಡ್ರೈನೇಜ್) ಸಂಪರ್ಕ ಕಲ್ಪಿಸಲಾಗಿದೆ. ಇದರಿಂದ ಚರಂಡಿಯ ಗಲೀಜು ತೆಗೆಯುವುದು ಸವಾಲಿನ ಕೆಲಸವಾಗಿದೆ. 31 ವಾರ್ಡ್‌ಗಳಿಗೆ ಕೇವಲ ಒಂದು ಜೆಟ್ಟಿಂಗ್ ಮತ್ತು ಸಕ್ಕಿಂಗ್ ಯಂತ್ರಗಳಿವೆ. ಅಲ್ಲದೆ ಕೆಲವೆಡೆ ಯುಜಿಡಿ ಕಟ್ಟಿಕೊಂಡಾಗ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒತ್ತಡ ತಂದು ಪೌರ ಕಾರ್ಮಿಕರನ್ನೇ ಮ್ಯಾನ್‌ಹೋಲ್ ಒಳಗೆ ಇಳಿಸಿ ಮಲ ತೆಗೆಸಿರುವ ಉದಾಹರಣೆಗಳೂ ಇವೆ' ಎಂದು ಪೌರ ಕಾರ್ಮಿಕರು ನುಡಿಯುತ್ತಾರೆ.
`ಛೇಂಬರ್ ಕೆಲಸ ಮಾಡುವವರಿಗೆ ಸೂಕ್ತ ರಕ್ಷಣಾ ಕವಚಗಳೇ ಇಲ್ಲವಾಗಿವೆ. ನಗರಸಭೆಯವರು ನಮಗೆ ಅಗತ್ಯ ಚಿಕಿತ್ಸೆಯನ್ನೂ ಕೊಡಿಸುವುದಿಲ್ಲ. ನಗರದಲ್ಲಿ ಹೊಟೆಲ್, ಬಾರ್, ರೆಸ್ಟೋರೆಂಟ್ ಮತ್ತು ನಿವಾಸಿಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆಯುತ್ತಾರೆ. ಒಣ ಮತ್ತು ಹಸಿ ತ್ಯಾಜ್ಯ ವಿಂಗಡಣೆ ಮಾಡುವುದಿಲ್ಲ. ಇದರಿಂದ ತ್ಯಾಜ್ಯ ಸಂಗ್ರಹಣೆ, ವಿಲೇವಾರಿ ಕಷ್ಟ ಸಾಧ್ಯವಾಗಿದೆ' ಎಂದು ಪೌರ ಕಾರ್ಮಿಕ ಗೋಪಾಲ್ ದೂರುತ್ತಾರೆ.
`ನಗರಸಭೆ ನಮಗೆ ಸರಿಯಾಗಿ ವೇತನ ಕೊಡುತ್ತಿಲ್ಲ. ಎರಡು ವರ್ಷದಿಂದ ನಿರಂತರವಾಗಿ ವಿಳಂಬ ಧೋರಣೆ ಅನುಸರಿಸಲಾಗುತ್ತಿದೆ. ಎರಡು-ಮೂರು ತಿಂಗಳಿಗೊಮ್ಮೆ ವೇತನ ನೀಡಲಾಗುತ್ತಿದೆ. ಹೀಗಾದರೆ ನಮ್ಮ ಸಂಸಾರವನ್ನು ನಡೆಸುವುದು ಹೇಗೆ' ಎಂದು ಅವರು ಪ್ರಶ್ನಿಸುತ್ತಾರೆ.
`ನಗರಸಭೆಯಲ್ಲಿ ಶಾಶ್ವತ ಮತ್ತು ಗುತ್ತಿಗೆ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದೇವೆ. ಕೇವಲ 18 ಕಾರ್ಮಿಕರಿಗೆ ಮಾತ್ರ ಸ್ವಂತದ್ದು ಎನ್ನುವ ಸಣ್ಣ ಸೂರು ಇದೆ. ಉಳಿದವರು ಬಾಡಿಗೆ ಮನೆಯಲ್ಲಿ ಜೀವನ ನಡೆಸಬೇಕಾಗಿದೆ. 2-3 ತಿಂಗಳಿಗೆ ಒಮ್ಮೆ ವೇತನ ನೀಡಿದರೆ ಬಾಡಿಗೆ ಕಟ್ಟಲು, ಮನೆ ಖರ್ಚಿಗೆ, ಮಕ್ಕಳ ವ್ಯಾಸಂಗದ ಖರ್ಚನ್ನು ನಿಭಾಯಿಸುವುದಾದರೂ ಹೇಗೆ' ಎಂದು ಪೌರ ಕಾರ್ಮಿಕ ಲಕ್ಷ್ಮೀನಾರಾಯಣ ತಮ್ಮ ಅಸಮಾಧಾನ ಹೊರ ಚೆಲ್ಲುತ್ತಾರೆ.
ಗೌರವ ಇಲ್ಲ: `ನಗರದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತೇವೆ. ಆ ಮೂಲಕ ನಗರವನ್ನು ಶುಚಿಯಾಗಿಡಲು ಬೆಳ್ಳಂಬೆಳಿಗ್ಗೆಯೇ ರಸ್ತೆಗಿಳಿಯುತ್ತೇವೆ. ಆದರೆ ನಾಗರಿಕರು, ಅಧಿಕಾರಿಗಳು ನಮ್ಮನ್ನು ಗೌರವಯುತವಾಗಿ ನೋಡುವುದಿಲ್ಲ. ನಮಗೆ ದೊರೆಯಬೇಕಾದ ಸೌಲಭ್ಯ ಪಡೆಯಲು ಹರಸಾಹಸ ಪಡಬೇಕು. ನಮಗ್ಯಾಕೆ ಈ ದುರ್ಗತಿ ಬಂದಿದೆ. ಊರನ್ನು ಶುಚಿ ಮಾಡುವ ನಾವು ಎಲ್ಲರಿಂದಲೂ ನಿರ್ಲಕ್ಷ್ಯಕ್ಕೊಳಗಾಗಿದ್ದೇವೆ. ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಕಾದ ದುಃಸ್ಥಿತಿ ಬಂದಿದೆಯಲ್ಲ' ಎಂದು ಅವರು ಕಂಬನಿ ಮಿಡಿಯುತ್ತಾರೆ.
`ನಮ್ಮ ಮಕ್ಕಳು ವಿದ್ಯಾವಂತರಾಗಿ ಒಳ್ಳೆ ಉದ್ಯೋಗ ಪಡೆಯಲಿ ಎಂಬ ಆಸೆಯ ಕಂಗಳಿಂದ ನಿತ್ಯ ಈ ಕಾಯಕವನ್ನು ಪ್ರಾಮಾಣಿಕವಾಗಿ ಮಾಡುತ್ತಿರುವೆ' ಎಂಬುದು ಅವರ ಪ್ರತಿಕ್ರಿಯೆ.
ಆರೋಗ್ಯ ಸಮಸ್ಯೆ: `ನಿತ್ಯ ನಗರದ ಕಸ ಎತ್ತುವ ನನಗೆ ಆರೋಗ್ಯ ತೊಂದರೆ ಇದೆ. ಕೆಲ ತಿಂಗಳಿಂದ ಒಂದೇ ಸಮನೆ `ಒಂದಾ' ಮಾಡಿಕೊಳ್ಳುತ್ತಿದ್ದೇನೆ. ಅದು ಯಾವಾಗ ಬರುತ್ತದೆ, ಯಾವಾಗ ನಿಲ್ಲುತ್ತದೆ ಎಂಬುದೇ ಗೊತ್ತಾಗುವುದಿಲ್ಲ. ನನ್ನ ಪ್ಯಾಂಟು ಯಾವಾಗಲೂ ತೇವವಾಗಿರುತ್ತದೆ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆಯುವಷ್ಟು ಶಕ್ತಿಯೂ ನನಗಿಲ್ಲ. ಅಧಿಕಾರಿಗಳಿಗೆ ತಿಳಿಸಿದರೆ ಅವರ‌್ಯಾರೂ ಇದನ್ನು ಕಿವಿ ಮೇಲೆ ಹಾಕಿಕೊಂಡಿಲ್ಲ. ನೀವಾದರೂ ನನಗೆ ಔಷಧ ಕೊಡಿಸಿ' ಎಂಬುದು ಮತ್ತೊಬ್ಬ ಪೌರ ಕಾರ್ಮಿಕ ಕುಳ್ಳ ನರಸಿಂಹ ಅಂಗಲಾಚಿದರು.
`ವರ್ಷದ ಹಿಂದೆ ಯುಜಿಡಿ ಶುಚಿಗೊಳಿಸಲು ಹೋಗಿದ್ದ ಕುಮಾರ ಎಂಬ ಗುತ್ತಿಗೆ ಪೌರ ಕಾರ್ಮಿಕನ ಕೈ, ಕಾಲು ಮತ್ತು ಮೈ ಮೇಲೆ ಇಸುಬು ಹರಡಿದೆ. ದೇಹದಿಂದ ಒಂದೇ ಸಮನೆ ಕೀವು ಸುರಿಯುತ್ತಿರುತ್ತದೆ. ಈಗ ಆತ ಈ ಕೆಲಸವನ್ನೇ ಬಿಟ್ಟು ಹೋಗಿದ್ದಾನೆ. ಇದೇ ಪರಿಸ್ಥಿತಿಯಾದರೆ ನಾವೂ ಕೆಲಸದಿಂದ ಹೋಗಬೇಕಾಗುತ್ತದೆ' ಎಂದು ಅವರು ಬೇಸರದಿಂದ ಹೇಳುತ್ತಾರೆ.
`ಕುಡಿಯದಿದ್ದರೆ ಕೆಲಸ ಮಾಡಲಿಕ್ಕೇ ಆಗುವುದಿಲ್ಲ'
`ಪ್ರತಿದಿನ ನಗರದ ಗಲೀಜು ಶುಚಿಗೊಳಿಸಲು ಕೆಲಸಕ್ಕೆ ಇಳಿಯುವ ಮೊದಲಿಗೆ ನಾವು ಮದ್ಯಪಾನ ಮಾಡಲೇ ಬೇಕಾದ ಅನಿವಾರ್ಯತೆ ಇದೆ.ಕಾರ್ಮಿಕರಿಗೆ ಸೂಕ್ತ ರಕ್ಷಣಾ ಕವಚಗಳು ಇಲ್ಲದಿರುವುದರಿಂದ ಹಾಗೂ ಅವರಿಗೆ ಯಾವುದೇ ಆರೋಗ್ಯ ಭದ್ರತೆ ಇಲ್ಲದ ಕಾರಣ ಬೇಸರದ ಜೀವನಕ್ಕೆ ಖಿನ್ನರಾಗಿ ಮದ್ಯ ಸೇವನೆ ದಾಸರಾಗಿದ್ದಾರೆ. ಕುಡಿಯದಿದ್ದರೆ ಯಾವುದೇ ರೀತಿಯ ಗಲೀಜು ತೆಗೆಯಲು ನಮ್ಮಿಂದ ಸಾಧ್ಯವಾಗುವುದೇ ಇಲ್ಲ. ನಿತ್ಯ ಬೆಳಿಗ್ಗೆ ಕೆಲಸಕ್ಕೆ ಬರುವ ಮೊದಲೇ ಒಂದು ಅಥವಾ ಎರಡು ಕ್ವಾರ್ಟ್‌ರ್ ಮದ್ಯ ಸೇವಿಸಿದರೆ ಮಾತ್ರ ಕೆಲಸ ಮಾಡಲು ಸಾಧ್ಯ. ಇಲ್ಲದಿದ್ದರೆ ಆಗುವುದೇ ಇಲ್ಲ' ಎಂಬುದು ಬಹಳಷ್ಟು ಪುರುಷ ಪೌರ ಕಾರ್ಮಿಕರ ಹೇಳಿಕೆ.
ದಿನಕ್ಕೆ ರೂ.170 ವೇತನ ನೀಡಿದರೆ ಹೇಗೆ?
ನಗರ ಶುಚಿಗೊಳಿಸುವ ಪೌರ ಕಾರ್ಮಿಕರಿಗೆ ಅಗತ್ಯ ಸೌಲಭ್ಯ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ಸರಿಯಾದ ಸಮಯಕ್ಕೆ ವೇತನ ನೀಡುತ್ತಿಲ್ಲ. ಅವರ ಆರೋಗ್ಯದ ಬಗ್ಗೆ ಕಾಳಜಿ ತೋರುತ್ತಿಲ್ಲ. ಗಾರೆ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ದಿನಕ್ಕೆ 400ರಿಂದ 500 ರೂಪಾಯಿ ವೇತನ ಬರುತ್ತದೆ.
ಆದರೆ ಇಡೀ ನಗರದ ತ್ಯಾಜ್ಯ ತೆಗೆಯುವ ಪೌರ ಕಾರ್ಮಿಕರಿಗೆ ದಿನಕ್ಕೆ 170 ರೂಪಾಯಿ ವೇತನ ನೀಡಿದರೆ ಹೇಗೆ? ಅದನ್ನೂ ಎರಡು-ಮೂರು ತಿಂಗಳಿಗೊಮ್ಮೆ ನೀಡಿದರೆ ಅವರು ಜೀವನ ನಡೆಸುವುದು ಹೇಗೆ' ಎಂದು ರಾಮನಗರ ನಗರಸಭೆಯ ಮಾಜಿ ಅಧ್ಯಕ್ಷ ಸಾಬಾನ್ ಸಾಬ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.