ADVERTISEMENT

ಯೋಗೇಶ್ವರ್ ಆಧುನಿಕ ಭಗೀರಥ ಏನೂ ಅಲ್ಲ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2012, 11:08 IST
Last Updated 12 ಡಿಸೆಂಬರ್ 2012, 11:08 IST

ಚನ್ನಪಟ್ಟಣ: ತಾಲ್ಲೂಕಿನ ಇಗ್ಗಲೂರು ನೀರಾವರಿ ಯೋಜನೆ ಯಾರದು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳನ್ನು ಜನತೆಯ ಮುಂದಿಡಲು ಸಿದ್ಧ ಇರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಗ್ರಾಮಸಂದರ್ಶನ ನಡೆಸಿ ಅಕ್ಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ತಾಲ್ಲೂಕಿಗೆ ಶಾಶ್ವತ ನೀರಾವರಿ ಕಲ್ಪಿಸುತ್ತೇನೆಂದು ಸುಳ್ಳು ಹೇಳುತ್ತಾ ಕ್ಷೇತ್ರದ ಜನತೆಗೆ ಮಂಕುಬೂದಿ ಎರಚುತ್ತಾ ಆಧುನಿಕ ಭಗೀರಥರೆಂದು ಬಿಂಬಿಸಿಕೊಳ್ಳುತ್ತಿರುವ ಯೋಗೇಶ್ವರ್‌ಗೆ ಈ ದಾಖಲೆಗಳು ಉತ್ತರ ನೀಡಲಿವೆ' ಎಂದರು.

ಜನತಾದಳದಲ್ಲಿ ಸಚಿವರಾಗಿದ್ದ ಎಂ.ವರದೇಗೌಡರು ಉಪವಾಸ ಕುಳಿತು ಹೋರಾಟ ಮಾಡಿ ಇಗ್ಗಲೂರು ಜಲಾಶಯವನ್ನು ಕ್ಷೇತ್ರಕ್ಕೆ ತಂದರು. ಇದಕ್ಕೆ ಸಹಾಯ ಮಾಡಿದ್ದು ದೇವೇಗೌಡರು. ಆದರೆ ಇದನ್ನು ಮರೆತಿರುವ ಯೋಗೇಶ್ವರ್ ಇಂದು ನಾನೇ ಭಗೀರಥ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಕೇವಲ ನಾಲ್ಕೈದು ಕೆರೆಗಳಿಗೆ ನೀರು ಬಂದಾಕ್ಷಣ ಯೋಗೇಶ್ವರ್ ಆಧುನಿಕ ಭಗೀರಥನಾಗಲು ಸಾಧ್ಯವಿಲ್ಲ ಎಂದು ಟೀಕಿಸಿದರು.

ತಾಲ್ಲೂಕಿನಾದ್ಯಂತ ಕುಡಿಯುವ ನೀರಿಗೆ ತೊಂದರೆ ಇದ್ದು, ಜನತೆ ಪರದಾಡುತ್ತಿದ್ದಾರೆ. ಇದು ಮೊದಲು ಪರಿಹಾರವಾಗಬೇಕು. ಈ ಸಮಸ್ಯೆಯನ್ನು ಬಗೆಹರಿಸಲು ಮುಂದಾಗುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.

ಶಾಸಕಿ ಅನಿತಾಕುಮಾರಸ್ವಾಮಿ ಮಾತನಾಡಿ, `ಹನ್ನೆರಡು ವರ್ಷಗಳಿಂದ ಕ್ಷೇತ್ರದಲ್ಲಿ ಶಾಸಕರಾಗಿರುವ ಯೋಗೇಶ್ವರ್ ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಚಿಂತಿಸಿಲ್ಲ. ಕ್ಷೇತ್ರಕ್ಕೆ ಯಾವ ಮಹತ್ತರ ಕೊಡುಗೆಯನ್ನೂ ನೀಡಿಲ್ಲ. ಮುಂಬರುವ ಚುನಾವಣೆಯಲ್ಲಿ ಕ್ಷೇತ್ರದ ಜನತೆ ನನ್ನನ್ನು ಆಶೀರ್ವದಿಸಿದರೆ ಕ್ಷೇತ್ರದ ಎಲ್ಲಾ ಸಮಸ್ಯೆಗಳಿಗೂ ಆರು ತಿಂಗಳಲ್ಲಿ ಪರಿಹಾರ ಒದಗಿಸುವುದಾಗಿ ತಿಳಿಸಿದರು.

ನಂತರ ಕುಮಾರಸ್ವಾಮಿ ದಂಪತಿ ತಾಲ್ಲೂಕಿನ ಸೋಮನಾಥಪುರ, ಮಾಳಗಾಳು, ಅಕ್ಕೂರು ಹೊಸಹಳ್ಳಿ, ಸಾದರಹಳ್ಳಿ, ನಾಗಾಪುರ, ಬಾಣಗಹಳ್ಳಿ, ಕಾಲಿಕೆರೆ, ಮಾದಾಪುರ, ಅಂಬಾಡಹಳ್ಳಿ, ಹಾರೋಕೊಪ್ಪ, ಸೋಗಾಲಪಾಳ್ಯ, ಸೋಗಾಲ, ಸಾದಹಳ್ಳಿ, ಮೋಳೆ, ಅವ್ವೇರಹಳ್ಳಿಗಳಲ್ಲಿ ಗ್ರಾಮ ಸಂದರ್ಶನ ನಡೆಸಿದರು. ಇದೇ ವೇಳೆ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದ ಬಿಸಲಮ್ಮ ದೇವರ ಕರಗದ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಗ್ರಾಮಸಂದರ್ಶನದ ವೇಳೆ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ, ಜಿಲ್ಲಾ ಪಂಚಾಯ್ತಿ ಸದಸ್ಯೆ ನಾಗೇಶ್ವರಿ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನೇಗೌಡ, ಬಮೂಲ್ ನಿರ್ದೇಶಕ ಎಸ್.ಲಿಂಗೇಶ್‌ಕುಮಾರ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ರೇಖಾ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಎನ್.ರಾಜಣ್ಣ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಚಿನ್ನಗಿರಿಗೌಡ, ಮಾರೇಗೌಡ, ಗುರುಕುಮಾರ್, ಕಾಂತರಾಜು, ಮುಖಂಡರಾದ ಬೋರ‌್ವೆಲ್ ರಾಮಚಂದ್ರು, ವಿಶಾಲ ರಘು, ಎಚ್.ಡಿ.ಕುಮಾರಸ್ವಾಮಿ ಯುವ ಸೇನೆ ಪದಾಧಿಕಾರಿಗಳು ಭಾಗವಹಿಸಿದ್ದರು.

`ಬೆಳಗಾವಿಯ ವಿಧಾನಮಂಡಲ ಅಧಿವೇಶನ ನೀರಸ'
ಬೆಳಗಾವಿಯಲ್ಲಿ ನಡೆದಿರುವ ವಿಧಾನಮಂಡಲ ಅಧಿವೇಶನ ನೀರಸವಾಗಿ ನಡೆದಿರುವುದು ವಿಷಾದನೀಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ಈ ಅಧಿವೇಶನ ಇತಿಹಾಸದ ಪುಟದಲ್ಲಿ ಸೇರುತ್ತದೆ ಎಂಬುದನ್ನು ಬಿಟ್ಟರೆ ರಾಜ್ಯದ ಜನತೆಗೆ ಪ್ರಯೋಜನವಾಗುವಂತಹ ಯಾವುದೇ ಚರ್ಚೆಗಳು ಇಲ್ಲಿ ನಡೆದಿಲ್ಲ. ಇದೊಂದು ಸಪ್ಪೆ ಅದಿವೇಶನವಾಗಿದೆ ಎಂದರು. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಹಾವು ಸಾಯಬಾರದು, ಕೋಲು ಮುರಿಯಬಾರದು ಎಂಬಂತೆ ನಿರ್ಣಯಗಳಾಗಿವೆ. ನೀರು ಹರಿಸುವ ವಿಚಾರದಲ್ಲಿ ಕೇಂದ್ರದ ನಿಲುವು ರಾಜ್ಯಕ್ಕೆ ಮಾರಕವಾಗಿದ್ದರೂ ರಾಜ್ಯ ಸರ್ಕಾರ ಈ ಬಗ್ಗೆ ಚಕಾರವೆತ್ತದಿರುವುದು ದುರಂತ. ರಾಜ್ಯದ ಜಲಾಶಯಗಳಲ್ಲಿ ಇರುವ ನೀರಿನ ಮಟ್ಟ ನೋಡಿದರೆ ತಮಿಳುನಾಡಿಗೆ ನೀರು ಬಿಡುವಂತಿಲ್ಲ. ಸರ್ಕಾರ ನೀರು ಹರಿಸಿ ರಾಜ್ಯದ ಜನತೆಗೆ ದ್ರೋಹ ಮಾಡಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.