ADVERTISEMENT

ವಿದ್ಯಾರ್ಥಿಗಳಿಗೆ ಪ್ರಜಾಪ್ರಭುತ್ವದ ಅರಿವು ಮೂಡಿಸಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2018, 13:38 IST
Last Updated 15 ಜೂನ್ 2018, 13:38 IST

ತಿಪ್ಪಸಂದ್ರ(ಮಾಗಡಿ): ವಿದ್ಯಾರ್ಥಿಗಳಿಗೆ ವಿಧಾನಸಭೆ ಮತ್ತು ಲೋಕಸಭೆ ರಚನೆ ಬಗ್ಗೆ ತಿಳಿಸುವ ಮೂಲಕ ಪ್ರಜಾಪ್ರಭುತ್ವದ ರಕ್ಷಣೆಗೆ ಹೆಚ್ಚಿನ ಒತ್ತುನೀಡಬೇಕಿದೆ ಎಂದು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸಿದ್ದಗಂಗಯ್ಯ ತಿಳಿಸಿದರು.

ಸರ್ಕಾರಿ ಮಾರುತಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳ ಆಯ್ಕೆ ಮತ್ತು ಅಣುಕು ಸಂಸತ್‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹನೀಯರು ಕಟ್ಟಿಬೆಳೆಸಿರುವ ಪ್ರಜಾಪ್ರಭುತ್ವದ ಮೌಲ್ಯ ಇಂದು ಅಪಹಾಸ್ಯಕ್ಕೆ ಈಡಾಗುತ್ತಿದೆ. ಸಂವಿಧಾನದ ಮೌಲ್ಯಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು, ಪ್ರಜಾರಾಜ್ಯದ ಆಶಯ ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳುವ ಗುರುತರ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ತಿಳಿಸಿದರು.

ADVERTISEMENT

ಮುಖ್ಯಶಿಕ್ಷಕ ಸುರೇಶ್‌ ಎಂ.ಎಸ್‌.ಮಾತನಾಡಿ, ಬ್ರಿಟಿಷರ ದಬ್ಬಾಳಿಕೆ, ದೌರ್ಜನ್ಯದ ವಿರುದ್ಧ ಹೋರಾಡಿ ಸ್ವಾತಂತ್ರ್ಯತಂದು ಕೊಟ್ಟು ದೇಶಪ್ರೇಮಿಗಳ ಶ್ರಮವನ್ನು ಯುವಜನರು ಅರ್ಥ ಮಾಡಿಕೊಳ್ಳಬೇಕಿದೆ. ದೇಶ ಮೊದಲು, ದೇಹ ನಂತರ ಎಂಬ ಧ್ಯೇಯವಾಕ್ಯ ನಮ್ಮೆಲ್ಲರದ್ದೂ ಆಗಬೇಕಿದೆ ಎಂದು ಆಶಿಸಿದರು.

ಜನತಾ ಸಭೆಗಳಾದ ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮಹತ್ವದ ಚರ್ಚೆಗಳು ನಡೆಯಬೇಕಿದೆ. ಜನಪ್ರತಿನಿಧಿಗಳು ಕಡ್ಡಾಯವಾಗಿ ಅಧಿವೇಶನಗಳಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು ಎಂದು ಹೇಳಿದರು.

ಶಿಕ್ಷಕರಾದ ಪ್ರಕಾಶ್‌ ಎಸ್‌.ಸಿ, ಸುಕನ್ಯಾ ಇ, ರೂಪಾ ಆಲದ ಕಟ್ಟಿ, ಲಕ್ಷ್ಮೀದೇವಮ್ಮ, ಕಿಶೋರ್‌, ರಮೇಶ್ ಮಾತನಾಡಿದರು.

ಅಣಕು ಸಂಸತ್‌: ಶಾಲಾ ಮಕ್ಕಳಿಂದ ಚುನಾವಣೆ ನಡೆಸಿ, ಮತದಾನ ಮಾಡಿಸಲಾಯಿತು. ಅಣುಕು ಸಂಸತ್‌ ರಚನೆಗೆ ನಡೆದ ಚುನಾವಣೆಯಲ್ಲಿ ಮಕ್ಕಳು ಸಾಲಾಗಿ ನಿಂತು ಮತದಾನ ಮಾಡಿದರು.

ರಚನೆ: ಶಾಲಾಭಿವೃದ್ಧಿ ರಚನೆ ಅಂಗವಾಗಿ ಸಭೆ ನಡೆಸಲಾಯಿತು.

ಸಿದ್ದಗಂಗಯ್ಯ(ಅಧ್ಯಕ್ಷ), ಚಿಕ್ಕಹನುಮಯ್ಯ(ಉಪಾಧ್ಯಕ್ಷ) ಆಯ್ಕೆಯಾಗಿದ್ದಾರೆ ಎಂದು ಮುಖ್ಯಶಿಕ್ಷಕ ಸುರೇಶ್‌ ಎಂ.ಎಸ್‌. ತಿಳಿಸಿದರು.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.