ರಾಮನಗರ: ಲೋಡ್ ಶೆಡ್ಡಿಂಗ್ ಇಲ್ಲದೆ ನಿರಂತರ ವಿದ್ಯುತ್ ಸರಬರಾಜು ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರವೇನೋ ಪದೇ ಪದೇ ಹೇಳುತ್ತಿದೆ. ಆದರೆ ರಾಜಧಾನಿ ಬೆಂಗಳೂರಿನಿಂದ ಕೇವಲ 50 ಕಿ.ಮೀ ದೂರದಲ್ಲಿರುವ ರಾಮನಗರ ಜಿಲ್ಲೆಯಲ್ಲಿಯೇ ನಿರಂತರ ವಿದ್ಯುತ್ ಕಣ್ಣಾಮುಚ್ಚಾಲೆ ನಡೆಯುತ್ತಿದೆ.
ಜಿಲ್ಲೆಯಲ್ಲಿ ವಿದ್ಯುತ್ ಕಡಿತದ ಪ್ರಮಾಣ ಹೆಚ್ಚಿದ್ದು, ಇದರಿಂದ ದಿನೇ ದಿನೇ ಕುಡಿಯುವ ನೀರಿನ ಬವಣೆ ಮುಗಿಲು ಮುಟ್ಟುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿಗಾಗಿ ಜನತೆ ತತ್ತರಿಸುತ್ತಿದ್ದಾರೆ. ದನ ಕರುಗಳಿಗೂ ಕುಡಿಯಲು ನೀರು ದೊರಕುತ್ತಿಲ್ಲವಾಗಿದೆ. ದೊರೆಯುವ ಅಲ್ಪ ಸ್ವಲ್ಪ ನೀರಿಗೂ ವಿದ್ಯುತ್ ಸಮಸ್ಯೆ ಮುಳುವಾಗಿದೆ.
10 ವಾರ್ಡ್‌ಗಳಲ್ಲಿ ತೀವ್ರ ಸಮಸ್ಯೆ: ರಾಮನಗರ ನಗರಸಭೆ ವ್ಯಾಪ್ತಿಯ 30 ವಾರ್ಡ್‌ಗಳಲ್ಲಿ 1ರಿಂದ 10 ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ. ಅರ್ಕಾವತಿ ನದಿ ಬತ್ತಿದ ನಂತರ ಈ ಭಾಗದ ಜನರ ಕುಡಿಯುವ ನೀರಿನ ಬವಣೆ ಹೆಚ್ಚಾಗಿದೆ. ಹಾಗಾಗಿ ಈ ಪ್ರದೇಶಗಳಲ್ಲಿ ಬೋರ್‌ವೆಲ್ ಮತ್ತು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಉಳಿದ 20 ವಾರ್ಡ್‌ಗಳಿಗೆ ಕಾವೇರಿ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ದುರ್ದೈವ ಎಂದರೆ ಹಲವಾರು ಬಾರಿ ವಿದ್ಯುತ್ ಕಡಿತ ಆಗುತ್ತಿರುವುದರಿಂದ ಸಮರ್ಪಕವಾಗಿ ನೀರು ಕಾವೇರಿಯಿಂದ ರಾಮನಗರಕ್ಕೆ ಪಂಪಾಗುತ್ತಿಲ್ಲ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಇದರಿಂದ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಿಸಿದೆ.
ರಾಮನಗರ ಮತ್ತು ಚನ್ನಪಟ್ಟಣ ನಗರಗಳಿಗೆ 2002ರಲ್ಲಿ (ಒಟ್ಟು 3.20 ಲಕ್ಷ ಜನಸಂಖ್ಯೆ) ಕಾವೇರಿ 1ನೇ ಹಂತದಿಂದ 18 ಎಂ.ಎಲ್.ಡಿ (ದಶಲಕ್ಷ ಲೀಟ್ಕರ್) ನೀರು ಸರಬರಾಜು ಮಾಡುವ ಯೋಜನೆ ಕೈಗೆತ್ತಿಕೊಳ್ಳಲಾಯಿತು. ಪ್ರಸ್ತುತ ಈ ಯೋಜನೆಯಿಂದ ಎರಡೂ ನಗರಗಳಿಗೆ ಸೇರಿಸಿ ತಲಾ 9 ಎಂ.ಎಲ್.ಡಿ ನೀರು ಸರಬರಾಜು ಆಗುತ್ತಿದೆ.
ಕಾವೇರಿ 2ನೇ ಹಂತದಿಂದ ಎರಡೂ ನಗರಗಳಿಗೆ 8 ಎಂ.ಎಲ್.ಡಿ (ತಲಾ 4) ನೀರು ತರಬಹುದು. ನಂತರದ ಐದು ವರ್ಷದಲ್ಲಿ ಶಾಶ್ವತ ನೀರಿಗೆ ಪರ್ಯಾಯ ಯೋಜನೆ ರೂಪಿಸಬೇಕಿದೆ ಎಂದು ಜಲಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಪ್ರಸ್ತುತ ಚನ್ನಪಟ್ಟಣ ನಗರದ ಶೇ 75ರಷ್ಟು ಹಾಗೂ ರಾಮನಗರದ ಶೇ 50 ಜನತೆಗೆ ಕಾವೇರಿ ನೀರು ಪೂರೈಕೆಯಾಗುತ್ತಿದೆ. ಉಳಿದ ಭಾಗದಲ್ಲಿ ಕೊಳವೆ ಬಾವಿ ಮೂಲಕ ನೀರು ಪೂರೈಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ವಿದ್ಯುತ್ ಕಡಿತ- ನೀರಿನ ಬವಣೆ: ಕಾವೇರಿಯಿಂದ ರಾಮನಗರಕ್ಕೆ ನೀರು ತರಬೇಕು ಎಂದರೆ ಮೂರು ಕಡೆ ಪಂಪ್ ಮಾಡಬೇಕು. ತೊರೆಕಾಡನಹಳ್ಳಿ, ಗುರುವಿನಪುರ ಹಾಗೂ ಚನ್ನಪಟ್ಟಣದಲ್ಲಿ ನೀರನ್ನು ಪಂಪ್ ಮಾಡಿದರೆ ಮಾತ್ರ ನೀರು ರಾಮನಗರ ತಲುಪುವುದು. ಇದಕ್ಕೆ ನಿರಂತರ ವಿದ್ಯುತ್ ಸರಬರಾಜು ಇರಬೇಕು. ವಿದ್ಯುತ್ ಸಂಪರ್ಕ ಒಂದು ಗಂಟೆ ಕಡಿತವಾದರೆ ಕನಿಷ್ಠ 4 ಗಂಟೆಗಳ ಕಾಲ ನೀರು ಸರಬರಾಜು ಸ್ಥಗಿತಗೊಳ್ಳುತ್ತದೆ ಎಂದು ಜಲಮಂಡಳಿ ಎಂಜಿನಿಯರ್‌ಗಳು ಹೇಳುತ್ತಾರೆ.
ಮೂರು ಪಂಪಿಂಗ್ ಕೇಂದ್ರಗಳಲ್ಲಿ ನಿರಂತರ ವಿದ್ಯುತ್ ಇರಬೇಕು. ಒಂದರಲ್ಲಿ ವಿದ್ಯುತ್ ಸಂಪರ್ಕ ಕಡಿತವಾದರೂ ನೀರು ರಾಮನಗರಕ್ಕೆ ಬರುವುದಿಲ್ಲ ಎನ್ನುತ್ತಾರೆ ಅವರು.ಎಷ್ಟು ಗಂಟೆ ವಿದ್ಯುತ್ ಸ್ಥಗಿತ: ಫೆಬ್ರುವರಿ ತಿಂಗಳಿನಲ್ಲಿ ಚನ್ನಪಟ್ಟಣ ಪಂಪಿಂಗ್ ಕೇಂದ್ರದಲ್ಲಿ 13.15 ಗಂಟೆಗಳ ಕಾಲ ವಿದ್ಯುತ್ ಸ್ಥಗಿತವಾಗಿತ್ತು. ಅದೇ ರೀತಿ ಮಾರ್ಚ್ 16ರವರೆಗೆ 14.20 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಂಡಿತ್ತು. ಇದರಿಂದ ನಿರಂತರ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಎದುರಾಗಿ ಸಾರ್ವಜನಿಕರಿಗೆ ತೊಂದರೆಯಾಗಿತ್ತು ಎಂದು ಅಧಿಕಾರಿಗಳು ಅಂಕಿ ಅಂಶ ನೀಡುತ್ತಾರೆ.
ಗುರುವಿನಪುರ ಪಂಪಿಂಗ್ ಕೇಂದ್ರದಲ್ಲಿ ಫೆಬ್ರುವರಿ ಮತ್ತು ಮಾರ್ಚ್ (15ರವರೆಗೆ) ಒಟ್ಟು 24.55 ಗಂಟೆಗಳ ಕಾಲ ವಿದ್ಯುತ್ ಸಂಪರ್ಕ ಇರಲಿಲ್ಲ. ತೊರೆಕಾಡನಹಳ್ಳಿಯಲ್ಲಿ ಈ ಅವಧಿಯಲ್ಲಿ ಕೇವಲ 50 ನಿಮಿಷಗಳ ಕಾಲ ವಿದ್ಯುತ್ ಕಡಿತ ಉಂಟಾಗಿದೆ ಎಂದು ಅವರು ಮಾಹಿತಿ ನೀಡುತ್ತಾರೆ. ಗುರುವಿನಪುರ ಮತ್ತು ಚನ್ನಪಟ್ಟಣ ಪಂಪಿಂಗ್ ಕೇಂದ್ರಗಳಲ್ಲಿ ಹೆಚ್ಚುಕಾಲ ವಿದ್ಯುತ್ ಸ್ಥಗಿತಗೊಂಡಿದೆ. ಆದರೆ ತೊರೆಕಾಡನಹಳ್ಳಿಯಲ್ಲಿ ಅಲ್ಪ ಪ್ರಮಾಣದ ವಿದ್ಯುತ್ ಕಡಿತವಾಗಿದೆ ಎಂದು ಅವರು ವಿವರಿಸುತ್ತಾರೆ.
ತೊರೆಕಾಡನಹಳ್ಳಿಯಿಂದ ದೊಡ್ಡ ಪ್ರಮಾಣದಲ್ಲಿ ನೀರು ಬೆಂಗಳೂರು ಮಹಾನಗರಕ್ಕೆ ಪಂಪ್ ಆಗುತ್ತದೆ. ಆದ್ದರಿಂದ ಈ ಕೇಂದ್ರದಲ್ಲಿ ವಿದ್ಯುತ್ ಕಡಿತ ಮಾಡುವ ಕಾರ್ಯಕ್ಕೆ ಬೆಸ್ಕಾಂ ಕೈಹಾಕಿಲ್ಲ. ಆದರೆ ರಾಮನಗರ ಮತ್ತು ಚನ್ನಪಟ್ಟಣ ಜನತೆಗೆ ನೀರು ಸರಬರಾಜು ಮಾಡುವ ಪಂಪಿಂಗ್ ಕೇಂದ್ರಗಳಲ್ಲಿ ಈ ರೀತಿ ವಿದ್ಯುತ್ ಕಡಿತ ಉಂಟಾಗಿದೆ ಎಂದು ಅವರು ವಿವರಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.