ADVERTISEMENT

ಸಿಟ್ಟನ್ನು ಕಡಿಮೆ ಪ್ರದರ್ಶಿಸಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 5:05 IST
Last Updated 19 ಜೂನ್ 2012, 5:05 IST

ರಾಮನಗರ: ಕಾನೂನಿನ ಅರಿವಿಲ್ಲದೆ ಜನರು ಕಷ್ಟನಷ್ಟ ಅನುಭವಿಸುತ್ತಿದ್ದು, ಇದನ್ನು ಮನಗಂಡು ಕಾನೂನು ಸೇವಾ ಪ್ರಾಧಿಕಾರದ ಮೂಲಕ ಜನಸಾಮಾನ್ಯರ ಮನೆ ಬಾಗಿಲಿಗೆ ಕಾನೂನಿನ ಪ್ರಾಥಮಿಕ ಜ್ಞಾನವನ್ನು ಮುಟ್ಟಿಸಲಾಗುತ್ತಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ವಿ.ಪುಷ್ಪಾವತಿ ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಜಿಲ್ಲಾ ಕಾರಾಗೃಹದ ಆಶ್ರಯದಲ್ಲಿ ಜಿಲ್ಲಾ ಬಂಧೀಖಾನೆಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆರೋಪಿಗಳು ಸನ್ಮಾರ್ಗದಲ್ಲಿ ನಡೆದು ಮಾದರಿಯಾದಾಗ ಸಮಾಜದಲ್ಲಿ ನೆಮ್ಮದಿ ಮೂಡುತ್ತದೆ ಎಂದರು.

ಮಾನಸಿಕ ರೋಗ ಹಾಗೂ ಚಿಕಿತ್ಸೆ ಕುರಿತು ಮಾತನಾಡಿದ ಜಿಲ್ಲಾ ಆಸ್ಪತ್ರೆಯ ಮನೋವೈದ್ಯೆ ರಜನಿ, ಕೋಪ ನಿಗ್ರಹ ಕಲೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅಪರಾಧ ನಿಯಂತ್ರಣಕ್ಕೆ ಮುಂದಾಗಬೇಕು.  ಕೋಪವನ್ನು ಕನಿಷ್ಠ ಪ್ರಮಾಣದಲ್ಲಿ ಪ್ರಕಟಿಸುವ ಕೌಶಲವನ್ನು ಅಭ್ಯಾಸ ಮಾಡಬೇಕು ಎಂದು ತಿಳಿಸಿದರು.

ಕೋಪದಿಂದ ವಿವೇಕ, ವಿವೇಚನೆ ಮಾಯವಾಗಿ ಆಕ್ರಮಣಕಾರಿ ವರ್ತನೆ ಉಂಟಾಗುತ್ತದೆ. ಆ ಮೂಲಕ ಅಪರಾಧ ಚಟುವಟಿಕೆ ಹೆಚ್ಚುತ್ತವೆ. ಇದರಿಂದ ವೈಯಕ್ತಿಕ ನೋವಿನ ಜತೆಗೆ ಇಡೀ ಕುಟುಂಬವೇ ತೊಂದರೆಗೆ ಸಿಲುಕುತ್ತದೆ ಎಂದರು.

ವಕೀಲರಾದ ಪೂರ್ಣಿಮಾ ಮಾತನಾಡಿದರು. ಆಪಾದನೆಯ ರಾಜಿ ಕುರಿತು ವಕೀಲ ಆರ್.ಚಂದ್ರಶೇಖರ್ ಉಪನ್ಯಾಸ ನೀಡಿದರು.  ಕಾರಾಗೃಹದ ಅಧೀಕ್ಷಕಿ ಆರ್.ಲತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜೈಲರ್ ಶಿವಕುಮಾರ್, ವಾರ್ಡನ್ ಕೆ.ಟಿ.ಸೊಣ್ಣೇಗೌಡ, ರಮೇಶ್, ಬಸವರಾಜ್ ಕರೀಕಾರ್, ಸುಲೋಚನಾ, ಸವಿತಾ, ರತ್ನಮ್ಮ, ನ್ಯಾಯಾಲಯದ ಸಿಬ್ಬಂದಿ ಕೃಷ್ಣಸ್ವಾಮಿ, ನೇತ್ರಾವತಿ ಶಿವರಾಜ್, ಹನೀಫ್ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.