ADVERTISEMENT

`15 ದಿನದಲ್ಲಿ ನರೇಗಾ ಜಾಬ್ ಕಾರ್ಡ್'

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 9:41 IST
Last Updated 6 ಜುಲೈ 2013, 9:41 IST

ಮಾಗಡಿ: `ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಡವರಿಗೆ 15 ದಿನಗಳ ಒಳಗಾಗಿ ನರೇಗಾ ಜಾಬ್ ಕಾರ್ಡ್ ನೀಡಲು ಪಿಡಿಒ ಗಳು ಮುಂದಾಗಬೇಕು' ಎಂದು ನರೇಗಾ ಲೆಕ್ಕಪರಿಶೋಧಕ ಅಧಿಕಾರಿ ರೇಖಾ ನುಡಿದರು.

ಅವರು ತಾಲ್ಲೂಕಿನ ಕುದೂರು ಹೋಬಳಿಯ ಕಣ್ಣೂರು ಗ್ರಾ.ಪಂ.ನಲ್ಲಿ ಗುರುವಾರ ನಡೆದ ನರೇಗಾ ಯೋಜನೆಯಡಿ 2013-14 ನೇ ಸಾಲಿನ ಸಾಮಾಜಿಕ ಲೆಕ್ಕ ತಪಾಸಣೆ ಮತ್ತು ಮೊದಲ ಹಂತದ ವಿಶೇಷ ಗ್ರಾಮ ಸಭೆಯಲ್ಲಿ ಮಾತನಾಡಿದರು.

ನರೇಗಾ ಜಾಬ್ ಕಾರ್ಡ್ ಹೊಂದಿರುವ ಕೂಲಿ ಕಾರ್ಮಿಕರಿಗೆ ವರ್ಷಕ್ಕೆ 150 ದಿನಗಳ ಕೆಲಸ ನೀಡಿ ದಿನಕ್ಕೆ ರೂ. 174ರಂತೆ ಕೂಲಿ ನೀಡಬೇಕು. ಕೂಲಿಕಾರ್ಮಿಕರ ಕೂಲಿ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲು ಪ್ರತಿ ಗ್ರಾ.ಪಂ.ವ್ಯಾಪ್ತಿಯಲ್ಲೂ ಕಾಯಕ ಬಂಧು ಹೆಸರಿನಲ್ಲಿ ವ್ಯಕ್ತಿಯೊಬ್ಬರನ್ನು ನೇಮಕ ಮಾಡಲಾಗುವುದು' ಎಂದರು.

ನರೇಗಾ ಯೋಜನೆಯಡಿ ಕೃಷಿ ಆಧಾರಿತ ಚಟುವಟಿಕೆಗಳು ಮತ್ತು ಪಶುಸಂಗೋಪನೆ, ಮೀನುಸಾಕಾಣಿಕೆ, ಕುಡಿಯುವ ನೀರಿನ ಟ್ಯಾಂಕ್‌ಗಳ ಸುತ್ತಮುತ್ತ ಕಾಂಕ್ರೀಟ್ ನಿರ್ಮಾಣ, ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತುನೀಡುವಂತೆ ಸೂಚಿಸಲಾಗಿದೆ. ನರೇಗಾ ಕಾಮಗಾರಿ ನಡೆದಿರುವ ಕಡೆಗಳಲ್ಲಿ 15 ದಿನಗಳ ಒಳಗಾಗಿ ಕಾಮಗಾರಿಯ ವಿವರಗಳನ್ನು ಒಳಗೊಂಡ ನಾಮಫಲಕಗಳನ್ನು ನಿಲ್ಲಿಸ ಬೇಕು' ಎಂದು ರೇಖಾ ತಿಳಿಸಿದರು.

ಗ್ರಾ.ಪಂ.ಅಧ್ಯಕ್ಷ ಎಸ್.ಎಚ್.ಕುಮಾರ್ ಮಾತನಾಡಿ, `ಗ್ರಾಮದ ಅಭಿವೃದ್ದಿಗೆ ಎಲ್ಲಾ ಸದಸ್ಯರು ಸಹಕರಿಸಬೇಕು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಪ್ಪುಮಾಡಿದರೆ ಜನತೆ ಪ್ರಶ್ನಿಸಬೇಕು. ನಮ್ಮ ಪಂಚಾಯ್ತಿಯಲ್ಲಿ ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆದಿವೆ' ಎಂದು ತಿಳಿಸಿದರು.

ಬಿಲ್ ಬಂದಿಲ್ಲ: `ಗ್ರಾ.ಪಂ.ವ್ಯಾಪ್ತಿಯಲ್ಲಿ ಖರೀದಿಸಿದ ಸಾಮಗ್ರಿಗಳ ಬಿಲ್‌ಗಳಿಗೆ ಹಣ ನೀಡಿಲ್ಲ ಎಂದು ಸದಸ್ಯರು ಆರೋಪಿಸಿದರು. ಗ್ರಾಮಸಭೆಯಲ್ಲಿ ಭಾಗವಹಿಸಿದ್ದ ನರೇಗಾ ಜಾಬ್ ಕಾರ್ಡುದಾರರು ಕೂಲಿ ಮಾಡಿದ ಹಣ ನೀಡಿಲ್ಲ. ತೀರಾ ಕಡುಬಡವರಿಗೆ ಜಾಬ್ ಕಾರ್ಡ್ ನೀಡಿಲ್ಲ' ಎಂದು ಆರೋಪಿಸಿದರು.

ಗ್ರಾ.ಪಂ.ಉಪಾಧ್ಯಕ್ಷ ಶಿವಕುಮಾರ ಸ್ವಾಮಿ, ಸದಸ್ಯರಾದ ಈಶ್ವರಯ್ಯ, ನರಸಿಂಹಮೂರ್ತಿ, ಸುಲೋಚನ, ಪದ್ಮಾವತಿ, ಗಾಯತ್ರಿ, ಪಾರ್ವತಮ್ಮ, ರತ್ನಮ್ಮ, ಮಂಗಳಮ್ಮ, ಪಿಡಿಒ ಚಂದ್ರಶೇಖರಯ್ಯ, ನೋಡಲ್ ಅಧಿಕಾರಿ ಯೋಗೇಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.