ADVERTISEMENT

ರಾಮನಗರ: ಕೊರೊನಾ ಸೈನಿಕರಿಗೂ ಅಂಟಿದ ಸೋಂಕು

ವೈದ್ಯರು, ಪೊಲೀಸರಿಗೆ ವೈರಸ್‌ ಬಾಧೆ: ಸಂಪೂರ್ಣ ಲಾಕ್‌ಡೌನ್‌ಗೆ ಮಾಗಡಿ ಸಜ್ಜು

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 14:16 IST
Last Updated 11 ಜುಲೈ 2020, 14:16 IST
ಸಾತನೂರು ಪೊಲೀಸ್ ವಸತಿ ಸಮುಚ್ಚಯವನ್ನು ಶನಿವಾರ ಸ್ಯಾನಿಟೈಜ್‌ ಮಾಡಲಾಯಿತು
ಸಾತನೂರು ಪೊಲೀಸ್ ವಸತಿ ಸಮುಚ್ಚಯವನ್ನು ಶನಿವಾರ ಸ್ಯಾನಿಟೈಜ್‌ ಮಾಡಲಾಯಿತು   

ರಾಮನಗರ: ಜಿಲ್ಲೆಯಲ್ಲಿ ಶನಿವಾರ30 ಮಂದಿಯಲ್ಲಿ ಕೋವಿಡ್‌ ಸೋಂಕು ಕಾಣಿಸಿಕೊಂಡಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 385ಕ್ಕೆ ಏರಿಕೆಯಾಗಿದೆ.

ಚನ್ನಪಟ್ಟಣ ತಾಲೂಕಿನಲ್ಲಿ 14, ಕನಕಪುರದಲ್ಲಿ 3, ಮಾಗಡಿಯಲ್ಲಿ 9, ರಾಮನಗರ ತಾಲೂಕಿನಲ್ಲಿ 4 ಪ್ರಕರಣಗಳು ಪತ್ತೆಯಾಗಿವೆ. ಇಂದು 7 ಮಂದಿ ಗುಣಮುಖರಾಗಿ ಹೊರನಡೆದಿದ್ದಾರೆ. 191 ಸಕ್ರಿಯ ಪ್ರಕರಣಗಳಿವೆ. ಮಾಗಡಿಯ ತಾಲ್ಲೂಕು ಆಸ್ಪತ್ರೆಯಲ್ಲಿನ ಮಹಿಳಾ ವೈದ್ಯರೊಬ್ಬರಿಗೆ ಶನಿವಾರ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಒಂದು ದಿನದ ಮಟ್ಟಿಗೆ ಇಡೀ ಆಸ್ಪತ್ರೆ ಬಂದ್‌ ಆಗಿದ್ದು, ಫೀವರ್ ಕ್ಲಿನಿಕ್ ಹೊರತು ಪಡಿಸಿ, ತುರ್ತು ಆರೋಗ್ಯ ಸೇವೆಯಷ್ಟೇ ಲಭ್ಯವಿತ್ತು. ಆಸ್ಪತ್ರೆಗೆ ಭೇಟಿ ನೀಡಿದವರೆಲ್ಲರೂ ಸ್ವಯಂಪ್ರೇರಿತರಾಗಿ ಕೊರೊನಾ ಪರೀಕ್ಷೆಗೆ ಒಳಪಡುವಂತೆ ಹಾಗು ಗೃಹ ಕ್ವಾರೆಂಟೈನ್‌ನಲ್ಲಿರುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ. ಈವರೆಗೂ ಜಿಲ್ಲೆಯಲ್ಲಿ ಎಂಟು ಮಂದಿ ವೈದ್ಯಕೀಯ ಸಿಬ್ಬಂದಿಗೆ ಸೋಂಕು ತಗುಲಿರುವುದು ಆತಂಕ ಮೂಡಿಸಿದೆ.

ಜಿಲ್ಲೆಯಲ್ಲಿ ಮಾಗಡಿ ತಾಲ್ಲೂಕಿನಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕೋವಿಡ್‌ ಪ್ರಕರಣಗಳು ವರದಿ ಆಗುತ್ತಿವೆ. ಈವರೆಗೆ138 ಪ್ರಕರಣಗಳು ದೃಢಪಟ್ಟಿದ್ದು, ಏಳು ಮಂದಿ ಸಾವಿಗೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸ್ವಯಂಪ್ರೇರಿತ ಲಾಕ್‌ಡೌನ್‌ಗೆ ಸಿದ್ಧತೆ ನಡೆದಿದೆ. ಇದೇ 13ರಿಂದ 23ವರೆಗೆ10 ದಿನ ಕಾಲ ಮಾಗಡಿ ಪಟ್ಟಣ ಲಾಕ್‌ಡೌನ್‌ ಆಗಲಿದೆ.

ADVERTISEMENT

ಪೊಲೀಸರಲ್ಲೂ ಸೋಂಕು

ಕನಕಪುರ ತಾಲ್ಲೂಕಿನ ಸಾತನೂರು ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರಲ್ಲಿ ಸೋಂಕು ದೃಢಪಟ್ಟಿದೆ. ಇವರನ್ನು ಕಾಡುಶಿವನಹಳ್ಳಿ ಬಳಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಕರ್ತವ್ಯದ ಬಳಿಕ ಕೋವಿಡ್ ಪರೀಕ್ಷೆ ನಡೆಸಿ, ಕಳೆದ 6 ದಿನಗಳಿಂದಲೂ ಪೊಲೀಸ್ ವಸತಿಗೃಹದಲ್ಲೇ ಇದ್ದರು. ಸದ್ಯ ಅವರಿದ್ದ ವಸತಿ ಸಮುಚ್ಚಯ ಹಾಗೂ ಠಾಣೆಯನ್ನು ಸ್ಯಾನಿಟೈಸ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಏಳು ಪೊಲೀಸರಿಗೆ ಕೊರೊನಾ ಸೋಂಕು ತಗುಲಿದೆ. ಇವರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.