ADVERTISEMENT

ಬಗೆ ಬಗೆಯ ಸವಿರುಚಿ ಅಡುಗೆ

ಕನಕೋತ್ಸವದ ಅಂಗವಾಗಿ ಸಸ್ಯಹಾರ, ಮಾಂಸಹಾರ ಖಾದ್ಯಗಳ ತಯಾರಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 12:36 IST
Last Updated 15 ಜನವರಿ 2018, 12:36 IST
ಕನಕಪುರ ಒಂದೇ ವೇದಿಕೆಯಲ್ಲಿ ಸವಿರುಚಿ ಅಡುಗೆ ಸ್ಪರ್ಧೆ ಕಾರ್ಯಕ್ರಮದಲ್ಲಿ 1500 ಮಂದಿ ಏಕ ಕಾಲಕ್ಕೆ ಪಾಲ್ಗೊಂಡು ಅಡುಗೆ ತಯಾರು ಮಾಡಿದರು
ಕನಕಪುರ ಒಂದೇ ವೇದಿಕೆಯಲ್ಲಿ ಸವಿರುಚಿ ಅಡುಗೆ ಸ್ಪರ್ಧೆ ಕಾರ್ಯಕ್ರಮದಲ್ಲಿ 1500 ಮಂದಿ ಏಕ ಕಾಲಕ್ಕೆ ಪಾಲ್ಗೊಂಡು ಅಡುಗೆ ತಯಾರು ಮಾಡಿದರು   

ಕನಕಪುರ: ಒಂದೇ ವೇದಿಕೆಯಲ್ಲಿ 1500ಕ್ಕೂ ಹೆಚ್ಚು ಮಂದಿ ಕೈಯಲ್ಲಿ ಏಕಕಾಲಕ್ಕೆ ಅಡುಗೆ ಮಾಡಿಸುವುದು ನಿಜಕ್ಕೂ ಕಷ್ಟದ ಕೆಲಸ. ಇದೊಂದು ದಾಖಲೆ ಎಂದು ಸಿನಿಮಾ ನಟ ಸಿಹಿಕಹಿ ಚಂದ್ರು ಅಭಿಪ್ರಾಯಪಟ್ಟರು.

ನಗರದ ಸೆಂಟ್‌ ಥಾಮಸ್‌ ಕಾಲೇಜು ಆವರಣದಲ್ಲಿ ಕನಕೋತ್ಸವದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸವಿರುಚಿ ಅಡುಗೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿದರು.

100 ಜನರನ್ನು ಒಂದೆಡೆ ಸೇರಿಸಿ ಅಡುಗೆ ಮಾಡಿಸುವುದೇ ತುಂಬ ಕಷ್ಟದ ಕೆಲಸ. ಸ್ಥಳಾವಕಾಳ, ಅಡುಗೆ ಮಾಡಲು ಬೇಕಾದ ವಸ್ತುಗಳ ಪೂರೈಕೆ, ಬೆಂಕಿಯ ಅನಾಹುತ, ಎಷ್ಟೆಲ್ಲಾ ಸಮಸ್ಯೆಯಿದ್ದರೂ ಯಾವುದಕ್ಕೂ ಹೆದರದೆ ಅಚ್ಚುಕಟ್ಟಾಗಿ ಕಾರ್ಯಕ್ರಮ ಆಯೋಜಿಸಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಪ್ರಯೋಗವನ್ನು ಯಾರು ಮಾಡಿದ್ದನ್ನು ನೋಡಿಲ್ಲ, ಇದೇ ಪ್ರಥಮ ಎಂದರು.

ADVERTISEMENT

ಸಾರ್ವಜನಿಕವಾಗಿ 1500 ಜನಕ್ಕೂ ಗ್ಯಾಸ್‌ ಸ್ಟೌ ಕೊಟ್ಟು ಅದಕ್ಕೆ ಅನಿಲ ಸಂಪರ್ಕ ಕೊಡಿಸಿ ಏಕ ಕಾಲಕ್ಕೆ ಎಲ್ಲರೂ ಒಟ್ಟಿಗೆ ಅಡುಗೆ ಮಾಡುವಂತ ವ್ಯವಸ್ಥೆಯನ್ನು ಸಂಸದ ಸುರೇಶ್‌ ಕಲ್ಪಿಸಿದ್ದಾರೆ. ಸಣ್ಣದೊಂದು ಬೆಂಕಿಯ ಕಿಡಿ ಹೊತ್ತಿದರೆ ಇಡೀ ಕಾರ್ಯಕ್ರಮವೇ ಬುಡಮೇಲಾಗಲಿದೆ. ಎಲ್ಲಾ ರೀತಿಯ ಅವಶ್ಯಕತೆ ಪೂರೈಕೆ ಮಾಡಿ ಒಂದೇ ವೇದಿಕೆಯಲ್ಲಿ ಕಾರ್ಯಕ್ರಮ ಮಾಡುತ್ತಿರುವುದು ದೊಡ್ಡ ಸಾಧನೆ ಎಂದರು.

1500 ಜನರಲ್ಲಿ 900ಮಂದಿ ಸಸ್ಯ ಆಹಾರ ಮಾಡಿದ್ದು ಎಲ್ಲರೂ ಮಾಡಿರುವ ಅಡುಗೆ ರುಚಿ ನೋಡಲು ಆಗುವುದಿಲ್ಲ. ಇದೊಂದು ಕ್ಲಿಷ್ಟಕರವಾದ ಸಮಸ್ಯೆ. ಹೊಸ ಬಗೆಯ, ವಿಶೇಷ ರೀತಿಯಲ್ಲಿ ಮಾಡಿರುವಂತ ಅಡುಗೆ ಸವಿರುಚಿ ಸವಿದು ಅರ್ಹರನ್ನು ಆಯ್ಕೆ ಮಾಡಲಾಗುವುದು. ಗೆದ್ದವರು ಸಮರ್ಥರು, ಸೋತವರು ಏನಿಲ್ಲವೆಂದು ಕೊಳ್ಳಬೇಡಿ. ಎಲ್ಲರೂ ಸಮರ್ಥರೇ ಎಂದು ಸ್ಪರ್ಥಾಗಳನ್ನು ಉರಿದುಂಬಿಸಿದರು.

ಸಂಸದ ಡಿ.ಕೆ.ಸುರೇಶ್‌ ಮಾತನಾಡಿ, ಪ್ರತಿ ಭಾರಿಯ ಕನಕೋತ್ಸವದಲ್ಲಿ ಏನಾದರೂ ಒಂದು ಹೊಸದನ್ನು ಮಾಡಬೇಕು ಎಂದು ಯೋಚಿಸಿ ಗ್ರಾಮೀಣ ಜನರು ಅಡುಗೆ ಮಾಡುವುದು ಒಂದು ವಿಶೇಷ ಕಲೆ. ಆ ಕಾರಣದಿಂದ ಸಸ್ಯ ಮತ್ತು ಮಾಂಸ ಆಹಾರ ಅಡುಗೆ ತಯಾರು ಸ್ಪರ್ಧೆ  ನಡೆಸಬೇಕೆಂದು ತೀರ್ಮಾನಿಸಿ ಸವಿರುಚಿ ಸ್ಪರ್ಧೆ ಮಾಡಲಾಗುತ್ತಿದೆ. ಸಸ್ಯ ಆಹಾರದಲ್ಲಿ 900 ಮಂದಿ, ಮಾಂಸ ಆಹಾರದಲ್ಲಿ 600 ಮಂದಿಗೆ ಅವಕಾಶ ಕಲ್ಪಿಸಲಾಗಿದೆ. 3000 ಸಾವಿರ ಸವಿರುಚಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ತಮ್ಮ ಹೆಸರು ನೋಂದವಣಿ ಮಾಡಿಕೊಂಡಿದ್ದರು. ಸ್ಥಳದ ಅಭಾವದಿಂದ ಬಂದ 3000 ಅರ್ಜಿಗಳಲ್ಲಿ ಮೊದಲು ಬಂದ 1500 ಮಂದಿಗೆ ಮಾತ್ರ ಅವಕಾಶ ಕಲ್ಪಿಸಿರುವುದಾಗಿ ಹೇಳಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಿಂದ ಜನರು ಸವಿರುಚಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಸಸ್ಯ ಆಹಾರ ಮತ್ತು ಮಾಂಸ ಆಹಾರದಲ್ಲಿ ಬಗೆ ಬಗೆಯ, ಹೊಸ ನಮೂನೆಯ ಅಡುಗೆ ತಯಾರಿಸಿದ್ದರು. ಸ್ಪರ್ಧೆಯಲ್ಲಿ ಪಾಲ್ಗೊಂಡ 1500 ಮಂದಿಗೂ ಉಚಿತವಾಗಿ ಅಡುಗೆ ಗ್ಯಾಸ್‌ ಸ್ಟೌಗಳನ್ನು ಆಯೋಜಕರು ನೀಡಿದ್ದರು. ನಟ ಸಿಹಿಕಹಿ ಮತ್ತು ಪ್ರಶಾಂತ ತಂಡದವರು ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.

ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ನಗರಸಭೆ ಅಧ್ಯಕ್ಷ ಕೆ.ಎನ್‌.ದಿಲೀಪ್‌, ಉಪಾಧ್ಯಕ್ಷ ಕೆ.ಜಗನ್ನಾಥ್‌, ಸದಸ್ಯ ಆರ್‌.ಕೃಷ್ಣಮೂರ್ತಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ಡಿ.ವಿಜಯದೇವು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಯಸಂದ್ರರವಿ ಸೇರಿದಂತೆ ಜಿಲ್ಲಾ, ತಾಲ್ಲೂಕು, ಗ್ರಾಮ, ನಗರಸಭೆ ಸದಸ್ಯರು, ರಾಜಕೀಯ ಮುಖಂಡರು ಕಾರ್ಯಕ್ರಮದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.