ADVERTISEMENT

ಜಾನಪದ ಲೋಕೋತ್ಸವಕ್ಕೆ ಕ್ಷಣಗಣನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2018, 7:16 IST
Last Updated 10 ಫೆಬ್ರುವರಿ 2018, 7:16 IST

ರಾಮನಗರ: ಸಾಂಸ್ಕೃತಿಕ ಸಮಾಗಮದ ವೇದಿಕೆಯಾದ ಪ್ರವಾಸಿ ಜಾನಪದ ಲೋಕೋತ್ಸವದ ಉದ್ಘಾಟನೆಗೆ ಇಲ್ಲಿನ ಜಾನಪದ ಲೋಕದ ಆವರಣದಲ್ಲಿ ಕ್ಷಣಗಣನೆ ಆರಂಭವಾಗಿದೆ. ‘ಲೋಕಸಿರಿ’ ಎನ್ನುವ ಅಪರೂಪದ ವಸ್ತು ಸಂಗ್ರಹಾಲಯವು ಇದೇ ಉತ್ಸವದ ಸಂದರ್ಭ ಉದ್ಘಾಟನೆಗೊಳ್ಳಲಿದೆ.

ಜಾನಪದ ವಸ್ತು ವಿಶೇಷಗಳೆಲ್ಲವನ್ನೂ ಒಂದೇ ಸೂರಿನಡಿ ತರಬೇಕು ಎನ್ನುವುದು ಜಾನಪದ ಲೋಕದ ರುವಾರಿ ಎಚ್.ಎಲ್. ನಾಗೇಗೌಡ ಅವರ ಕನಸಾಗಿತ್ತು. ಅದರಂತೆ ಅಪರೂಪದ ಒಂದೊಂದೇ ಪರಿಕರಗಳು ಸಂಗ್ರಹವಾಗುತ್ತಿದ್ದು, ಇವುಗಳನ್ನು ಒಳಗೊಂಡ ವಸ್ತು ಸಂಗ್ರಹಾಲಯವನ್ನು ಅಧಿಕೃತವಾಗಿ ಅನಾವರಣಗೊಳಿಸಲಾಗುತ್ತಿದೆ.

ಯಕ್ಷಗಾನ, ಹಾಡುಗಾರರ ವೇಷಗಳು, ಕೀಲುಕುದುರೆ, ಬುಡಬುಡಿಕೆ, ಕೊರವಯ್ಯ ಭೂತದ ವಿಗ್ರಹಗಳೂ ಸೇರಿದಂತೆ ನಾನಾ ನಮೂನೆಯ ವಸ್ತು, ವಿನ್ಯಾಸಗಳು ಈ ಸಂಗ್ರಹಾಲಯದಲ್ಲಿ ಇರಲಿವೆ. ಜಾನಪದ ಕಲೆಗಳ ಬಗ್ಗೆ ಆಸಕ್ತಿ ಇರುವವರ ಜೊತೆಗೆ ಸಂಶೋಧನಾ ವಿದ್ಯಾರ್ಥಿಗಳಿಗೂ ಇದರಿಂದ ಹೆಚ್ಚು ಅನುಕೂಲವಾಗಲಿದೆ. ವಿಧಾನ ಪರಿಷತ್ ಸದಸ್ಯ ವಿ. ಸೋಮಣ್ಣ ಅವರ ಅನುದಾನದಲ್ಲಿ ನಿರ್ಮಿಸಲಾದ ಕುಟೀರದ ಉದ್ಘಾಟನೆಯೂ ಈ ಸಂದರ್ಭ ನೆರವೇರಲಿದೆ.

ADVERTISEMENT

‘ಯಕ್ಷಗಾನ ರಸೋಲ್ಲಾಸ ಕಾರ್ಯಕ್ರಮವು ಈ ಬಾರಿಯ ವಿಶೇಷಗಳಲ್ಲಿ ಒಂದಾಗಲಿದೆ. ಇಲ್ಲಿನ ಯುವ ಕಲಾವಿದರನ್ನು ಪ್ರೋತ್ಸಾಹಿಸುವ ಸಲುವಾಗಿ ಕಾಲೇಜು ತಂಡಗಳಿಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದು ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜು ತಿಳಿಸಿದರು.

ಉತ್ಸವದ ಸಲುವಾಗಿ ಜಾನಪದ ಲೋಕವನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಕುರಕುಶಲ ವಸ್ತುಪ್ರದರ್ಶನದ ಮಳಿಗೆಗಳು ಸಿದ್ಧವಾಗಿವೆ. ಮಡಿಕೆ, ಬುಟ್ಟಿ ಹೆಣೆಯುವುದು ಸೇರಿದಂತೆ ವಿವಿಧ ಕರಕುಶಲ ಕಲೆಗಳ ಪ್ರದರ್ಶನವೂ ಇರಲಿದೆ. ಸಾರ್ವಜನಿಕರಿಗೆ ಉತ್ಸವದ ಎರಡೂ ದಿನ ಉಚಿತ ಪ್ರವೇಶವಿದೆ.

ಇಂದಿನ ಕಾರ್ಯಕ್ರಮಗಳು: ಬೆಳಿಗ್ಗೆ 10.30ಕ್ಕೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವಿ ಸಿಂಗ್‌ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಅನ್ನದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷ ಟಿ. ತಿಮ್ಮೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಮಧ್ಯಾಹ್ನ 11.30ಕ್ಕೆ ಕರಕುಶಲ ಮೇಳಕ್ಕೆ ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಟಿ. ಟಾಕಪ್ಪ ಚಾಲನೆ ನೀಡಲಿದ್ದಾರೆ.

ಮಧ್ಯಾಹ್ನ 2.30ಕ್ಕೆ ‘ಆಧುನಿಕತೆಯತ್ತ ಜಾನಪದ ಕಲೆಗಳು–ಒಂದು ಮುಕ್ತ ಚರ್ಚೆ’ ಕುರಿತು ವಿಚಾರ ಸಂಕಿರಣವು ನಡೆಯಲಿದೆ. ಟಿ. ತಿಮ್ಮೇಗೌಡ ಅಧ್ಯಕ್ಷತೆ ಹಾಗೂ ಜಾನಪದ ತಜ್ಞ ಶ್ರೀನಿವಾಸ ಕಪ್ಪಣ್ಣ ಸಾರಥ್ಯ ವಹಿಸಲಿದ್ದಾರೆ. ಹತ್ತಾರು ಜಾನಪದ ತಜ್ಞರು ಹಾಗೂ ಆಸಕ್ತರು ಭಾಗಿಯಾಗಲಿದ್ದಾರೆ.

ಸಂಜೆ 5.30ಕ್ಕೆ ಬಯಲು ರಂಗಮಂದಿರದಲ್ಲಿ ಕಲಾ ಪ್ರದರ್ಶನವು ನಡೆಯಲಿದೆ. ಹಾಸನದ ಕುಮಾರಯ್ಯ ಮತ್ತು ತಂಡದವರಿಂದ ಚಿಟ್‌ ಮೇಳ, ಚಿತ್ರದುರ್ಗದ ವೆಂಕಟೇಶನಾಯ್ಕ ಅವರಿಂದ ಲಂಬಾಣಿ ನೃತ್ಯ, ದಾವಣಗೆರೆಯ ಯುಗಧರ್ಮ ರಾಜಣ್ಣ ಅವರಿಂದ ತತ್ವಪದ, ರಾಮನಗರದ ಮಾಯಣ್ಣ ಮತ್ತು ತಂಡದವರಿಂದ ಪೂಜಾ ಕುಣಿತವು ಪ್ರದರ್ಶನಗೊಳ್ಳಲಿದೆ. ತುಮಕೂರಿನ ಕುಮಾರಸ್ವಾಮಿ ಮತ್ತು ತಂಡದವರಿಂದ ಸೋಮನ ಕುಣಿತ, ಶಿವಮೊಗ್ಗದ ಕುಣಬಿ ಕಲಾತಂಡದವರಿಂದ ಕೋಲಾಟ, ಬೆಂಗಳೂರಿನ ಜೋಗಿಲ ಸಿದ್ದರಾಜು ತಂಡದವರಿಂದ ಜನಪದ ಹಾಡುಗಾರಿಕೆ, ಹಾಸನದ ಉಮೇಶ ಮತ್ತು ಸಂಗಡಿಗರಿಂದ ಕಂಸಾಳೆ ಹಾಗೂ ಕಾಸರಗೋಡಿನ ಆದಿ ಪಿರನ್ನ ಮುತ್ತಪ್ಪನ್‌ ಜನಪದ ನೃತ್ಯ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.