ADVERTISEMENT

ಕಠಿಣ ಪರಿಶ್ರಮದಿಂದ ಮಹಿಳೆಯರ ಸಾಧನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 13:58 IST
Last Updated 25 ಜೂನ್ 2019, 13:58 IST
ಕನಕಪುರ ಬಸವನಗುಡಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ವೃಂದ ಅವರನ್ನು ಸನ್ಮಾನಿಸಿ ಗೌರವಿಸಿರುವುದು
ಕನಕಪುರ ಬಸವನಗುಡಿಯಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ವೃಂದ ಅವರನ್ನು ಸನ್ಮಾನಿಸಿ ಗೌರವಿಸಿರುವುದು   

ಕನಕಪುರ: ‘ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದ್ದು ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಉತ್ತಮ ಸಾಧನೆ ಮಾಡಿ ಸೈ ಎನಿಸಿಕೊಳ್ಳುತ್ತಿದ್ದಾರೆ’ ಎಂದು ಹಿರಿಯ ಸಾಹಿತಿ ಡಾ. ಕೆ.ವಿ. ರಾಜೇಶ್ವರಿ ಹೇಳಿದರು.

ನಗರದ ಎಂ.ಜಿ. ರಸ್ತೆಯಲ್ಲಿರುವ ಬಸವನಗುಡಿಯಲ್ಲಿ ಶ್ರೀ ಬಾಲಾಜಿ ಪಾದಯಾತ್ರೆ ಬಲಿಜ ಟ್ರಸ್ಟ್‌ ವತಿಯಿಂದ ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಹಾಗೂ ಡಾಕ್ಟರೇಟ್‌ ಪದವಿ ಸ್ವೀಕರಿಸಿರುವ ವೃಂದ ಅವರಿಗೆ ಮಂಗಳವಾರ ಆಯೋಜನೆ ಮಾಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಡಾ. ವೃಂದ ಅವರು ಆರೋಗ್ಯ ಇಲಾಖೆಯಲ್ಲಿ ಸುದೀರ್ಘವಾಗಿ ಸಲ್ಲಿಸಿರುವ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ಲೋರೆನ್ಸ್ ನೈಟಿಂಗಲ್‌ ಚಿನ್ನದ ಪದಕವನ್ನು ನೀಡಿದೆ. ಅವರ ಗುಣಾತ್ಮಕ ಸೇವೆಯೇ ಚಿನ್ನದ ಪದಕ ಸಿಗಲು ಕಾರಣವಾಗಿದ್ದು ಅವರು ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ADVERTISEMENT

ಒಂದು ಕಾಲದಲ್ಲಿ ಮಹಿಳೆಯೆಂದರೆ ನಾಲ್ಕು ಗೋಡೆಗಳಿಗೆ ಸೀಮಿತವೆನಿಸಿದ್ದರು. ಅಂತಹ ಪರಿಸ್ಥಿತಿಯಲ್ಲೂ ಕೆಲವು ಮಹಿಳೆಯರು ಎಲ್ಲ ಸಂಕೋಲೆಗಳನ್ನು ಮುರಿದು ಶಿಕ್ಷಣ ಪಡೆದು ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಅಂತಹವರಲ್ಲಿ ವೃಂದ ಅವರು ಒಬ್ಬರಾಗಿ ಬೇರೆಯವರಿಗೆ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ಪ್ರಜಾಪಿತ ಬ್ರಹ್ಮಕುಮಾರೀಸ್‌ ಕನಕಪುರ ಶಾಖೆಯ ಮುಖ್ಯಸ್ಥೆ ಬಿ.ಕೆ. ರೇಣುಕಾ ಮಾತನಾಡಿ, ‘ಅವರು ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಗ್ರಾಮೀಣ ಜನತೆಯ ಆರೋಗ್ಯ ಸೇವೆ ಮಾಡುವಂತ 10 ಸಾವಿರ ದಾದಿಯರಿಗೆ ತರಬೇತಿಯನ್ನು ನೀಡಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಗೌರವ ಡಾಕ್ಟರೇಟ್‌ ಸಹ ಲಭಿಸಿದೆ’ ಎಂದು ತಿಳಿಸಿದರು.

ಟ್ರಸ್ಟ್‌ನ ಸಂಸ್ಥಾಪಕ ಅಧ್ಯಕ್ಷ ಜಿ.ಎಲ್‌. ಸಂಪಂಗಿರಾಮುಲು, ಟ್ರಸ್ಟ್‌ನ ಮಹಿಳಾ ವಿಭಾಗದ ಗೌರವ ಅಧ್ಯಕ್ಷೆ ಹಿಂದುಮತಿ ಮುಕುಂದ, ಪದಾಧಿಕಾರಿಗಳಾದ ಗೀತಾ, ಶ್ಯಾಮಲ, ಸುಮಿತ್ರ, ರಮ್ಯ, ಅಂಬಿಕ, ಸೌಮ್ಯ ಮೊದಲಾದವರು ಉಪಸ್ಥಿತರಿದ್ದು ಅವರನ್ನು ಸನ್ಮಾನಿಸಿ ಗೌರವಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.