ADVERTISEMENT

ಕೆಂಚನಹಳ್ಳಿಯಲ್ಲಿ ಅರವಟಿಗೆ ಸೇವೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2019, 13:30 IST
Last Updated 12 ಏಪ್ರಿಲ್ 2019, 13:30 IST
ಮಾಗಡಿ ತಾಲ್ಲೂಕಿನ ಕೆಂಚನಹಳ್ಳಿಯಲ್ಲಿ ನಡೆದ ಅರವಟಿಕೆ ಸೇವೆಗೆ ಡಾ.ಮುನಿರಾಜಪ್ಪ ಚಾಲನೆ ನೀಡಿದರು.
ಮಾಗಡಿ ತಾಲ್ಲೂಕಿನ ಕೆಂಚನಹಳ್ಳಿಯಲ್ಲಿ ನಡೆದ ಅರವಟಿಕೆ ಸೇವೆಗೆ ಡಾ.ಮುನಿರಾಜಪ್ಪ ಚಾಲನೆ ನೀಡಿದರು.   

ತಿಪ್ಪಸಂದ್ರ (ಮಾಗಡಿ): ಅರವಟಿಗೆಗಳು ಮಾಗಡಿ ಸೀಮೆಯ ಜನಪದ ಜೀವಂತಿಕೆಯ ಪರೋಪಕಾರದ ಸೇವೆಗಳಾಗಿವೆ ಎಂದು ಕನ್ನಡ ಸಹೃದಯ ಬಳಗದ ಅಧ್ಯಕ್ಷ ಡಾ.ಮುನಿರಾಜಪ್ಪ ತಿಳಿಸಿದರು.

ಯಡಿಯೂರು ಸಿದ್ದಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವದ ಅಂಗವಾಗಿ ಕೆಂಚನಹಳ್ಳಿಯಲ್ಲಿ ಶುಕ್ರವಾರ ನಡೆದ ಡಾ.ಶಿವಕುಮಾರ ಸ್ವಾಮೀಜಿ ಸಂಸ್ಮರಣೆ ಹಾಗೂ ಅರವಟಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕಾದರೆ ಪರೋಪಕಾರಿಯಾಗಿರಬೇಕು. ಸನ್ಮಾರ್ಗದಲ್ಲಿ ಸಾಗಬೇಕು. ಡಾ.ಶಿವಕುಮಾರಸ್ವಾಮೀಜಿ ಸಮಾಜಕ್ಕೆ ಮಾಡಿದ ಸೇವೆ, ತ್ಯಾಗಗಳಿಂದಾಗಿ ಮಹಾತ್ಮರಾಗಿ ಜನಮಾನಸದಲ್ಲಿ ಅಮರರಾಗಿದ್ದಾರೆ. ಸತ್ಯ, ನಿಷ್ಠೆ, ಶ್ರಮಜೀವನದಲ್ಲಿ ನಂಬಿಕೆ ಇಟ್ಟುಕೊಂಡು ಬದುಕುವುದು ಬಹುಮುಖ್ಯವಾಗಿದೆ ಎಂದು ತಿಳಿಸಿದರು.

ADVERTISEMENT

ಸಂಪತ್ತನ್ನು ಕೂಡಿಡುವುದರಿಂದ ಲಾಭವಿಲ್ಲ. ಕಳ್ಳಕಾಕರ ಭಯ, ನಿಜವಾದ ಸೇವೆಯ ಮೂಲಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಮುಂದಾಗೋಣ ಎಂದರು.

ಕಲಾವಿದೆ ಕ್ಯಾತ್ಸಂದ್ರ ಎಂ.ಶ್ರೀನಿವಾಸ್‌ ಮಾತನಾಡಿ ಭಗವಂತನ ಒಲುಮೆಯಿಂದ ದೊರೆತ ಈ ಮಾನವ ಜೀವವನ್ನು ಭಗವಂತನಿಗೆ ಪ್ರಿಯವಾಗಿರುವ ದೀನರ ಸೇವೆ ಮಾಡುತ್ತಾ ಬದುಕುಬೇಕಿದೆ ಎಂದರು.

ಲಕ್ಷ್ಮೀದೇವಿ ಅಮ್ಮನವರ ದೇಗುಲದ ಪಾರುಪತ್ತೇದಾರ್‌ ಗಂಗಹನುಮಯ್ಯ, ಅರ್ಚಕ ರಾಮಕೃಷ್ಣ ದೀಕ್ಷಿತ್‌, ಡೈರಿ ಅಧ್ಯಕ್ಷ ಕೆಂಚೇಗೌಡ, ಅರವಟಿಕೆಯ ವ್ಯವಸ್ಥಾಪಕ ಕೆಂಚೇಗೌಡ ನಿಸ್ವಾರ್ಥ ಸೇವಾ ಕಾರ್ಯಗಳ ಬಗ್ಗೆ ಮಾತನಾಡಿದರು.ಕುಣಿಗಲ್‌ ಮಾಗಡಿ ಮಾರ್ಗವಾಗಿ ಸಂಚರಿಸುವ ವಾಹನಗಳನ್ನು ನಿಲ್ಲಿಸಿ, ನೀರುಮಜ್ಜಿಗೆ, ಕೋಸಂಬರಿ, ಪಾನಕ, ರಸಾಯನ ವಿತರಿಸಲಾಯಿತು. ಡಾ.ಶಿವಕುಮಾರಸ್ವಾಮಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕೆಂಚನಹಳ್ಳಿ ಸುತ್ತಲಿನ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.