ADVERTISEMENT

ಮಾನವೀಯ ಸಂಬಂಧಗಳ ವ್ಯಾಪಾರೀಕರಣ: ಮಾಜಿ ಸಂಸದ ಡಾ.ಜಿ.ವೆಂಕಟೇಶ್

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 12:09 IST
Last Updated 19 ಅಕ್ಟೋಬರ್ 2018, 12:09 IST
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಡಾ.ಜಿ. ವೆಂಕಟೇಶ್‌ ಮಾತನಾಡಿದರು
ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಡಾ.ಜಿ. ವೆಂಕಟೇಶ್‌ ಮಾತನಾಡಿದರು   

ರಾಮನಗರ: ‘ಸಮಾಜದಲ್ಲಿ ತಾಂಡವವಾಡುತ್ತಿರುವ ಜಾತೀಯತೆ, ಭ್ರಷ್ಟಾಚಾರದಂತಹ ಪಿಡುಗುಗಳ ನಡುವೆ ಮಾನವೀಯ ಸಂಬಂಧಗಳು ವ್ಯಾಪಾರೀಕರಣಗೊಳ್ಳುತ್ತಿವೆ. ಈ ಸಂದರ್ಭದಲ್ಲಿ ರಾಮರಾಜ್ಯ ನಿರ್ಮಾಣ ಮಾಡುವ ಅಗತ್ಯವಿದೆ’ ಎಂದು ಮಾಜಿ ಸಂಸದ ಡಾ.ಜಿ.ವೆಂಕಟೇಶ್ ಹೇಳಿದರು.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಮಾಜದಲ್ಲಿ ಪ್ರಜಾಪ್ರಭುತ್ವದ ಉಳಿವಿಗಾಗಿ ಸಾಮಾಜಿಕ ನ್ಯಾಯ ಹಾಗೂ ಪರಿವರ್ತನೆಗಾಗಿ ಸಾಮಾಜಿಕ ಅಭಿವೃದ್ಧಿ ರಂಗ ರಾಜ್ಯಾದ್ಯಂತ ಜನಾಂದೋಲನ ರೂಪಿಸುತ್ತಿದೆ’ ಎಂದು ತಿಳಿಸಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಒಂದು ತಿಂಗಳು ವಾಸ್ತವ್ಯ ಹೂಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಲಾಗುವುದು. ಸಾಮಾಜಿಕ ಕಾಳಜಿ, ಕಳಕಳಿವುಳ್ಳ ಪ್ರಾಮಾಣಿಕರನ್ನು ಪತ್ತೆಹಚ್ಚಲಾಗುವುದು. ಸಾಮಾಜಿಕ ಜಾಗೃತಿ, ಹೋರಾಟ ಹಾಗೂ ಸಮಾಜ ಸೇವೆಗಳಿಂದ, ಜನನಾಯಕರನ್ನಾಗಿ ಹೊರ ಹೊಮ್ಮುವಂತಹ ತರಬೇತಿ, ಮಾಹಿತಿಗಳನ್ನು ನೀಡಲಾಗುವುದು ಎಂದರು.

ADVERTISEMENT

ಸಂವಿಧಾನದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ಕಾರ್ಯ ವೈಖರಿಗಳಿಂದ ಸಮಾಜದ ಎಲ್ಲ ಕ್ಷೇತ್ರಗಳ ವ್ಯವಸ್ಥೆಗಳು ಸಂಪೂರ್ಣವಾಗಿ ದಾರಿ ತಪ್ಪಿವೆ. ರಾಜ್ಯ ಹಾಗೂ ರಾಷ್ಟ್ರದ ಆದಾಯದಲ್ಲಿ ಶೇ 85ರಷ್ಟು ಪಾಲು ಪ್ರಭಾವಿ ಜನರಿಗೆ ಹಾಗೂ ಶೇ15ರಷ್ಟು ಆದಾಯ ಶ್ರೀಸಾಮಾನ್ಯರಿಗೆ ಸೇರುತ್ತಿದೆ. ಇದಕ್ಕೆಲ್ಲ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಜತೆಗೆ ಪ್ರಜಾಪ್ರತಿನಿಧಿಗಳ ಆಯ್ಕೆಯೂ ತಪ್ಪಾಗಿರುವುದು ಕಾರಣ ಎಂದರು.

ಎಲ್ಲ ರಾಜಕೀಯ ಪಕ್ಷಗಳು ಸಹ ಕುಟುಂಬ ರಾಜಕಾರಣಕ್ಕೆ ಮನ್ನಣೆ ನೀಡುತ್ತಿವೆ. ಜಾತಿ ಮತ್ತು ಹಣಬಲ ಉಳ್ಳವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ. ಜನಪ್ರತಿನಿಧಿಯಾಗಿ ಆಯ್ಕೆ ಮಾಡುವ ವ್ಯಕ್ತಿಗಳ ಚರಿತ್ರೆ, ಚಾರಿತ್ರ್ಯಗಳನ್ನು ಆಳವಾಗಿ ಅವಲೋಕನ ಮಾಡದೆ ಚುನಾಯಿಸಲಾಗುತ್ತಿದೆ ಎಂದರು.

ಹೈಕೋರ್ಟಿನ ನಿವೃತ್ತ ಸರ್ಕಾರಿ ಅಭಿಯೋಜಕ ಶ್ರೀನಿವಾಸ ಗೌಡ ಮಾತನಾಡಿ, ಪ್ರಾಮಾಣಿಕ, ದಕ್ಷ ಆಡಳಿತ ನೀಡಿದ ರಾಜಕಾರಣಿಗಳ ಮಕ್ಕಳು ರಾಜಕಾರಣದಲ್ಲಿ ಇಲ್ಲ. ಆದರೆ ಈಚೆಗೆ ಕುಟುಂಬ ರಾಜಕಾರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಅಭಿವೃದ್ಧಿ ರಂಗದ ಅಧ್ಯಕ್ಷ ಟಿ.ಎಲ್. ರಂಗನಾಥ್‌, ವೆಂಕಟೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.