ADVERTISEMENT

ಅವಧಿ ವಿಸ್ತರಿಸಿದರೆ ಮತ್ತೆ ಬಿ–ಖಾತೆ: ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ

ಜಾಲಮಂಗಲ ರಸ್ತೆಯಲ್ಲಿ ವಾರ್ಡ್ 25–26ಕ್ಕೆ ಸಂಬಂಧಿಸಿದಂತೆ ಇ–ಖಾತೆ ಅಭಿಯಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 5:38 IST
Last Updated 14 ಆಗಸ್ಟ್ 2025, 5:38 IST
ರಾಮನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಗರಸಭೆಯಿಂದ ಬುಧವಾರ ನಡೆದ ‘ನಿಮ್ಮ ಆಸ್ತಿ-ನಿಮ್ಮ ಹಕ್ಕು: ಮನೆ ಮನೆಗೆ ಇ-ಖಾತೆ ಅಭಿಯಾನ’ದ 4ನೇ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ
ರಾಮನಗರದ ಮಂಜುನಾಥ ಕಲ್ಯಾಣ ಮಂಟಪದಲ್ಲಿ ನಗರಸಭೆಯಿಂದ ಬುಧವಾರ ನಡೆದ ‘ನಿಮ್ಮ ಆಸ್ತಿ-ನಿಮ್ಮ ಹಕ್ಕು: ಮನೆ ಮನೆಗೆ ಇ-ಖಾತೆ ಅಭಿಯಾನ’ದ 4ನೇ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಲಾಯಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ಉಪಾಧ್ಯಕ್ಷೆ ಆಯೇಷಾ ಬಾನು, ಪೌರಾಯುಕ್ತ ಡಾ. ಜಯಣ್ಣ, ನಗರಸಭೆ ಸದಸ್ಯರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದಾರೆ   

ರಾಮನಗರ: ‘ಅನಧಿಕೃತ ಆಸ್ತಿಗಳನ್ನು ಅಧಿಕೃತಗೊಳಿಸಲು ರಾಜ್ಯ ಸರ್ಕಾರ ಶುರು ಮಾಡಿದ್ದ ಐತಿಹಾಸಿಕವಾದ ಬಿ–ಖಾತೆ ಅಭಿಯಾನದ ಕಾಲಾವಧಿ ಮುಗಿದಿದೆ. ಸರ್ಕಾರ ಮತ್ತೇ ದಿನಾಂಕವನ್ನು ವಿಸ್ತರಣೆ ಮಾಡಿದರೆ ಅರ್ಜಿಗಳನ್ನು ಪಡೆದು ಖಾತೆ ಮಾಡಿ ಕೊಡಲಾಗುವುದು’ ಎಂದು ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಹೇಳಿದರು.

ನಗರದ ಜಾಲಮಂಗಲ ರಸ್ತೆಯಲ್ಲಿರುವ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬುಧವಾರ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ ‘ನಿಮ್ಮ ಆಸ್ತಿ-ನಿಮ್ಮ ಹಕ್ಕು: ಮನೆ ಮನೆಗೆ ಇ-ಖಾತೆ ಅಭಿಯಾನ’ದ 4ನೇ ಕಾರ್ಯಕ್ರಮದಲ್ಲಿ ಅರ್ಜಿದಾರರಿಗೆ ಇ–ಖಾತೆಗಳನ್ನು ವಿತರಿಸಿ ಅವರು ಮಾತನಾಡಿದರು.

‘ಬಿ–ಖಾತೆ ಅಭಿಯಾನದಡಿ ಆ. 10ರವರೆಗೆ ಖಾತೆ ಮಾಡಿಕೊಡಲು ಸರ್ಕಾರ ಅವಕಾಶ ನೀಡಿತ್ತು. ಅದರಂತೆ, ರಾಮನಗರ ನಗರಸಭೆಯಲ್ಲಿ 1700ಕ್ಕೂ ಅಧಿಕ ಬಿ-ಖಾತೆಗಳನ್ನು ವಿತರಿಸಲಾಗಿದೆ. ಇನ್ನೂ 300 ಅರ್ಜಿಗಳಿಗೆ ಖಾತೆ ವಿತರಣೆ ಬಾಕಿ ಇದೆ. ಆದರೆ, ಸುಮಾರು 3 ಸಾವಿರ ಆಸ್ತಿ ಮಾಲೀಕರು ಬಿ-ಖಾತೆ ಪಡೆಯಲು ಅರ್ಜಿಯನ್ನೇ ಸಲ್ಲಿಸಿಲ್ಲ’ ಎಂದರು.

ADVERTISEMENT

‘ಭೂ ಪರಿವರ್ತನೆಯಾಗದ ಮತ್ತು ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದ ಇಲ್ಲದ ಕಂದಾಯ ನಿವೇಶನಗಳಲ್ಲಿ ಮನೆ ಮತ್ತು ಕಟ್ಟಡ ನಿರ್ಮಿಸಿದವರಿಗೆ ಬಿ-ಖಾತೆ ಮಾಡಿ ಕೊಡುವ ಸಲುವಾಗಿ ಸರ್ಕಾರ ಅಭಿಯಾನ ಆರಂಭಿಸಿತ್ತು. ಮೊದಲು ನಿಗದಿಪಡಿಸಿದ್ದ ಸಮಯವು ಕಡಿಮೆಯಾಯಿತು ಎಂದು ಎರಡು ಸಲ ವಿಸ್ತರಣೆ ಮಾಡಿತ್ತು’ ಎಂದು ತಿಳಿಸಿದರು.

‘ನಮೂನೆ-3 (ಎ-ಖಾತಾ) ವಿತರಣೆಯು ಮುಂದಿನ ದಿನಗಳಲ್ಲಿ ನಿರಂತರವಾಗಿ ಮುಂದುವರೆಯಲಿದೆ. ಈವರೆಗೆ ಮೂರು ಅಭಿಯಾನದ ಮೂಲಕ ವಾರ್ಡ್‍ಗಳಿಗೆ ತೆರಳಿ ಖಾತೆ ವಿತರಿಸಿದ್ದೇವೆ. ಇದರಿಂದ ನೂರಾರು ಮಂದಿ ಪ್ರಯೋಜನ ಪಡೆದುಕೊಂಡಿದ್ದಾರೆ. ಇದೀಗ ನಡೆಯುತ್ತಿರುವ ಅಭಿಯಾನದಲ್ಲಿ 25 ಮತ್ತು 26ನೇ ವಾರ್ಡ್‍ಗೆ ಸಂಬಂಧಿಸಿದ ಆಸ್ತಿಗಳಿಗೆ ಖಾತೆ ವಿತರಣೆ ಮಾಡಲಾಗಿದೆ’ ಎಂದರು.

ಅಭಿಯಾನದ ಅಂಗವಾಗಿ ನಗರಸಭೆಯ ಕಂದಾಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ, ಬೆಳಿಗ್ಗೆಯಿಂದ ಸಂಜೆವರೆಗೆ ಮಂಜುನಾಥ ಕಲ್ಯಾಣ ಮಂಟಪದಲ್ಲಿ ಬೀಡು ಬಿಟ್ಟರು. ಸ್ಥಳದಲ್ಲೇ ಅರ್ಜಿ ಸ್ವೀಕರಿಸಿ ಇ–ಖಾತೆ ಸೃಜಿಸಿದರು. ಸುಮಾರು 50 ಮಂದಿ ಅರ್ಜಿ ಸಲ್ಲಿಸಿದರು. ಸ್ಥಳದಲ್ಲೇ 25ಕ್ಕೂ ಅಧಿಕ ಮಂದಿಗೆ ಇ–ಖಾತೆಗಳನ್ನು ಅಧ್ಯಕ್ಷ ಶೇಷಾದ್ರಿ, ಉಪಾಧ್ಯಕ್ಷೆ ಆಯೇಷಾ ಬಾನು ಹಾಗೂ ಪೌರಾಯುಕ್ತ ಡಾ. ಜಯಣ್ಣ ವಿತರಿಸಿದರು.

ಪ್ರೊಬೆಷನರಿ ಉಪ ವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಸದಸ್ಯರಾದ ಮುತ್ತುರಾಜ್, ಮಂಜುನಾಥ್, ನರಸಿಂಹ, ದೌಲತ್ ಷರೀಫ್, ಅಜ್ಮತ್, ಟಿಎಪಿಎಂಸಿ ಅಧ್ಯಕ್ಷ ದೊಡ್ಡಿ ಸೂರಿ, ಮುಖಂಡರಾದ ವೆಂಕಟೇಶ್, ರಮೇಶ್, ಶಿವಣ್ಣ, ರಾಜಣ್ಣ, ನಾಗೇಶ್, ಕಂದಾಯ ಅಧಿಕಾರಿ ಕಿರಣ್, ಕಂದಾಯ ನಿರೀಕ್ಷಕ ಆರ್. ನಾಗರಾಜು ಸೇರಿದಂತೆ ವಿವಿಧ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.