ADVERTISEMENT

ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಣಿಕೆ ಕಾರ್ಯ: ಮೂರು ಸುತ್ತಿನ ಭದ್ರತೆ

​ಪ್ರಜಾವಾಣಿ ವಾರ್ತೆ
Published 22 ಮೇ 2019, 15:39 IST
Last Updated 22 ಮೇ 2019, 15:39 IST

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಗುರುವಾರ ನಡೆಯಲಿದ್ದು, 15 ಅಭ್ಯರ್ಥಿಗಳ ಭವಿಷ್ಯ ಇಂದೇ ನಿರ್ಧಾರ ಆಗಲಿದೆ.

ಬೆಳಿಗ್ಗೆ 8ಕ್ಕೆ ಇಲ್ಲಿನ ಅರ್ಚಕರಹಳ್ಳಿ ಬಳಿಯ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆರಂಭಗೊಳ್ಳಲಿದೆ. ಒಟ್ಟು ಮೂರು ಸುತ್ತಿನ ಭದ್ರತೆ ಕಲ್ಪಿಸಲಾಗಿದೆ. ಮೊದಲಿಗೆ ಸೇವಾ ಮತ್ತು ಅಂಚೆ ಮತ ಎಣಿಕೆ ನಡೆಯಲಿದ್ದು, ನಂತರದಲ್ಲಿ ಎಲೆಕ್ಟ್ರಾನಿಕ್‌ ಮತಗಳ ಎಣಿಕೆ ಕಾರ್ಯವು ಆರಂಭ ಆಗಲಿದೆ. ಮತ ಎಣಿಕೆ ಕಾರ್ಯಕ್ಕೆಂದೇ ಒಂದು ಸಾವಿರ ಸಿಬ್ಬಂದಿಯನ್ನು ಚುನಾವಣಾ ಆಯೋಗವು ಬಳಸಿಕೊಳ್ಳುತ್ತಿದೆ.

ಕ್ಷೇತ್ರದ ವ್ಯಾಪ್ತಿಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಮೂರು ಕೊಠಡಿಗಳಲ್ಲಿ 21 ಟೇಬಲ್ ಹಾಗೂ ಉಳಿದ ಎಲ್ಲಾ ವಿಧಾಾನಸಭಾ ಕ್ಷೇತ್ರಗಳಿಗೂ ತಲಾ ಎರಡು ಕೊಠಡಿಗಳಲ್ಲಿ ಮತ ಎಣಿಕೆಗೆ 14 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ ಏಳು ಟೇಬಲ್ ಗಳನ್ನು ಒದಗಿಸಲಾಗಿದೆ. ಒಂದು ಕೋಠಡಿಗೆ 7 ಟೇಬಲ್ ನಂತೆ ಒಟ್ಟು 17 ಕೊಠಡಿಗಳಿಗೆ 119 ಟೇಬಲ್ ಗಳ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ ಪ್ರತಿಯೊಂದು ಕೊಠಡಿಯಲ್ಲಿ ಹೆಚ್ಚುವರಿಯಾಗಿ ಟೇಬಲ್ ಗಳನ್ನು ಮೀಸಲಿಡಲಾಗಿದೆ.

ADVERTISEMENT

ಪ್ರತಿ ಮೇಜಿಗೆ ಮೇಲ್ವಿಚಾರಕರು, ಸಹಾಯಕ ಸಿಬ್ಬಂದಿ ಮತ್ತು ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ. ಅಭ್ಯರ್ಥಿಗಳು 14 ಟೇಬಲ್ ಗಳಿಗೆ ತಲಾ ಒಬ್ಬ ಎಣಿಕೆ ಏಜೆಂಟರನ್ನು ನೇಮಿಸಲು ಅವಕಾಶ ನೀಡಲಾಗಿದೆ. ಎರಡು ಕೊಠಡಿಗಳಿರುವ ಕ್ಷೇತ್ರಗಳಲ್ಲಿ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಕಾರಿ ಒಂದೊಂದು ಕೊಠಡಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ.

ಬೆಂಗಳೂರು ಲೋಕಸಭಾ ಕ್ಷೇತ್ರವು ದೇಶದ ಅತಿ ದೊಡ್ಡ ಲೋಕಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಕಾಂಗ್ರೆಸ್‌ನಿಂದ ಮೂರನೇ ಬಾರಿ ಅಭ್ಯರ್ಥಿಯಾಗಿ ಡಿ.ಕೆ. ಸುರೇಶ್‌, ಬಿಜೆಪಿಯಿಂದ ಪಕ್ಷದ ವಕ್ತಾರ ಅಶ್ವಥ್‌ ನಾರಾಯಣ ಗೌಡ ಸೇರಿದಂತೆ ಒಟ್ಟು 15 ಅಭ್ಯರ್ಥಿಗಳು ಈ ಬಾರಿಯ ಚುನಾವಣಾ ಕಣದಲ್ಲಿ ಇದ್ದಾರೆ. ಏಪ್ರಿಲ್‌ 18ರಂದು ಕ್ಷೇತ್ರದಾದ್ಯಂತ ನಡೆದ ಮತದಾನದಲ್ಲಿ ಎಂಟು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿನ 16.20 ಲಕ್ಷ ಮಂದಿ ಹಕ್ಕು ಚಲಾಯಿಸಿದ್ದರು.

ಒಟ್ಟು 20–25 ಸುತ್ತುಗಳಲ್ಲಿ ಮತ ಎಣಿಕೆ ಕಾರ್ಯವು ನಡೆಯಲಿದ್ದು, ಮಧ್ಯಾಹ್ನದ ನಂತರವಷ್ಟೇ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ. ಈ ಬಾರಿ ವಿವಿ ಪ್ಯಾಟ್‌ಗಳ ಜೊತೆ ಮತಗಳ ತಾಳೆ ಹಾಕುವ ಪ್ರಕ್ರಿಯೆ ಕೂಡ ಇರಲಿದ್ದು, ಫಲಿತಾಂಶವು ಇನ್ನಷ್ಟು ತಡವಾಗಿ ಸಿಗಲಿದೆ.

ಚುನಾವಣಾ ಸಿಬ್ಬಂದಿಗೆ ಈಗಾಗಲೇ ತರಬೇತಿಯನ್ನು ನೀಡಲಾಗಿದೆ. ಬೆಳಗ್ಗೆ 6ಕ್ಕೆಲ್ಲ ಅವರು ಎಣಿಕೆ ಕೇಂದ್ರದಲ್ಲಿ ಹಾಜರಿರಲಿದ್ದಾರೆ. ಎಲ್ಲ ಸಿಬ್ಬಂದಿ, ಅಭ್ಯರ್ಥಿಗಳು, ಏಜೆಂಟರಿಗೆ ಗುರುತಿನ ಪತ್ರವನ್ನು ಕಡ್ಡಾಯಗೊಳಿಸಲಾಗಿದೆ. ಒಳಗೆ ಎಲೆಕ್ಟ್ರಾನಿಕ್‌ ಉಪಕರಣ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ನಿಷೇಧಾಜ್ಞೆ ಜಾರಿ: ಗುರುವಾರ ಮಧ್ಯರಾತ್ರಿ 12 ಗಂಟೆಯವರೆಗೆ ಶುಷ್ಕ ದಿನವನ್ನಾಗಿ ಘೋಷಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ರಾತ್ರಿ 12ರವರೆಗೂ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರನ್ವಯ ಷರತ್ತುಗಳಿಗೆ ಒಳಪಡಿಸಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ಅಂಕಿ–ಅಂಶ

24,97,141ಕ್ಷೇತ್ರದಲ್ಲಿನ ಒಟ್ಟು ಮತದಾರರು

16,20,440ಮತ ಚಲಾಯಿಸಿದವರು

64.89ಶೇಕಡವಾರು ಮತದಾನ ಪ್ರಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.