ಕನಕಪುರ: ಕೋಡಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುನಿನಗರದಲ್ಲಿ ₹50 ಲಕ್ಷದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಡಾ.ಬಿ.ಆರ್.ಅಂಬೇಡ್ಕರ್ ಭವನ ಐದು ವರ್ಷಗಳಿಂದ ಉದ್ಘಾಟನೆಯಾಗದೆ ಹಾಗೆ ಉಳಿದಿದೆ.
ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ನಿರ್ಮಾಣವಾಗಿರುವ ಅಂಬೇಡ್ಕರ್ ಭವನ ಇಷ್ಟು ವರ್ಷಗಳಿಂದ ಜನರ ಬಳಕೆಗೆ ಬಾರದೆ ಪಾಳು ಬಿದ್ದಿದೆ. ಬಳಕೆಯಾಗದೆ ನಿರುಪಯುಕ್ತವಾದ ಕಾರಣ ಕಟ್ಟಡ ಅಕ್ರಮ ಚಟುವಟಿಕೆಗಳ ತಾಣವಾಗಿದೆ.
ಕೋಡಿಹಳ್ಳಿ ಗ್ರಾಮ ಪಂಚಾಯಿತಿ 2016-17ರಲ್ಲಿ ಭವನ ನಿರ್ಮಾಣಕ್ಕೆ ನಿವೇಶನ ಹಸ್ತಾಂತರ ಮಾಡಿದ್ದು ನಿರ್ಮಿತಿ ಕೇಂದ್ರ ನಿರ್ಮಾಣದ ಜವಾಬ್ದಾರಿ ಹೊತ್ತಿದೆ. 2020ಕ್ಕೆ ಕಟ್ಟಡ ಪೂರ್ಣಗೊಂಡಿದ್ದು, ಸಣ್ಣಪುಟ್ಟ ಕೆಲಸ ಉಳಿದುಕೊಂಡಿವೆ.
ಭವನದ ಸುತ್ತಲೂ ಕಾಂಪೌಂಡ್ ನಿರ್ಮಿಸಿ, ವಿದ್ಯುತ್ ಸಂಪರ್ಕ ಕಲ್ಪಿಸಿದ ನಂತರ ನಿರ್ಮಿತಿ ಕೇಂದ್ರವು ಗ್ರಾಮ ಪಂಚಾಯಿತಿಗೆ ಕಟ್ಟಡವನ್ನು ಹಸ್ತಾಂತರಿಸಬೇಕಿತ್ತು. ಆದರೆ, ನಿರ್ಮಿತಿ ಕೇಂದ್ರ ಇದೂವರೆಗೂ ಭವನ ಹಸ್ತಾಂತರ ಮಾಡಿಲ್ಲ.ಕಟ್ಟಡ ಬಳಕೆಯಾಗದೆ ಪಾಳು ಬಿದ್ದಿದ್ದು, ಕಿಟಕಿ ಗಾಜು ಒಡೆದು ಹೋಗಿವೆ. ಕಟ್ಟಡದ ಸುತ್ತಲೂ ಗಿಡಗಂಟಿ ಬೆಳೆದಿದೆ. ನೀರಿನ ಟ್ಯಾಂಕ್ ಮೇಲೆ ಮುಚ್ಚಳ ಮುಚ್ಚಿಲ್ಲ. ಮಕ್ಕಳು ಬೀಳುವ ಅಪಾಯ ಇದೆ.
ಮುನಿನಗರ ಗ್ರಾಮದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡಿರುವುದು ಒಳ್ಳೆಯದು. ಆದರೆ, ಅದನ್ನು ಪೂರ್ಣಗೊಳಿಸಿ ಪಂಚಾಯಿತಿಗೆ ಹಸ್ತಾಂತರ ಮಾಡಿ ಜನರ ಬಳಕೆಗೆ ನೀಡಿದರೆ ಉಪಯೋಗವಾಗುತ್ತಿತ್ತು. ಐದು ವರ್ಷದಿಂದ ಪಾಳು ಬಿದ್ದಿರುವುದರಿಂದ ಕಟ್ಟಡ ಹಾಳಾಗುತ್ತಿದೆ. ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಶೀಘ್ರ ಉದ್ಘಾಟನೆ ಮಾಡಿ ಜನರ ಉಪಯೋಗ ಆಗುವಂತೆ ಮಾಡಬೇಕು.
ಹುಲಿಮಾದಯ್ಯ, ಗ್ರಾಮ ಪಂಚಾಯಿತಿ ಸದಸ್ಯ, ಮುನಿನಗರ
ಅಂಬೇಡ್ಕರ್ ಭವನವನ್ನು ಪಂಚಾಯಿತಿಗೆ ಹಸ್ತಾಂತರಿಸದೆ ಇರುವುದರಿಂದ ವ್ಯಕ್ತಿಯೊಬ್ಬರು ಅದರಲ್ಲಿ ವಾಸಿಸುತ್ತಿದ್ದಾರೆ. ಗ್ರಾಮ ಪಂಚಾಯಿತಿ ಗಮನಕ್ಕೂ ತರಲಾಗಿದೆ. ಸಣ್ಣಪುಟ್ಟ ಕೆಲಸ ಬಾಕಿ ಉಳಿದಿದೆ. ಕೆಲಸ ಮಾಡಿದ ಬಾಕಿ ಹಣ ಸರ್ಕಾರದಿಂದ ಬಂದಿಲ್ಲ ಎಂದು ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದಾರೆ.
ಚಿಕ್ಕಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯ, ಮುನಿನಗರ
ಸಮಾಜ ಕಲ್ಯಾಣ ಇಲಾಖೆ ಭವನ ನಿರ್ಮಾಣ ಮಾಡಿದ್ದು, ಇನ್ನೂ ಹಸ್ತಾಂತರ ಮಾಡಿಲ್ಲ. ಹಸ್ತಾಂತರ ಮಾಡಿದರೆ ಸಾರ್ವಜನಿಕರ ಬಳಕೆಗೆ ನೀಡಲಾಗುವುದುಶ್ರೀಧರ್, ಪ್ರಭಾರ ಪಿಡಿಒ, ಕೋಡಿಹಳ್ಳಿ
ಭವನ ನಿರ್ಮಾಣದ ಜವಾಬ್ದಾರಿಯನ್ನು ನಿರ್ಮಿತಿ ಕೇಂದ್ರಕ್ಕೆ ಕೊಡಲಾಗಿದೆ. ಬಾಕಿ ಕೆಲಸ ಪೂರ್ಣಗೊಳಿಸಿ ಶೀಘ್ರವೇ ಪಂಚಾಯಿತಿಗೆ ಹಸ್ತಾಂತರ ಮಾಡಲಾಗುವುದುಜಯಪ್ರಕಾಶ್ ಡಿ.ಎಂ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.