ADVERTISEMENT

ಸೀಮೆ ಕರು ಸಾಗಣೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 13:18 IST
Last Updated 8 ಅಕ್ಟೋಬರ್ 2019, 13:18 IST

ರಾಮನಗರ: ವಾಹನದಲ್ಲಿ ಅಕ್ರಮವಾಗಿ 15 ಸೀಮೆ ಕರುಗಳನ್ನು ಸಾಗಿಸುತ್ತಿದ್ದ ಇಬ್ಬರನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಐಜೂರು ಬಡಾವಣೆ ವಾಸಿಗಳಾದ ಖಲೀಲ್ ಪಾಷ ಅವರ ಪುತ್ರ ಸಲೀಂ ಪಾಷ ಹಾಗೂ ಖಲೀಂ ಖಾನ್ ಬಂಧಿತ ಆರೋಪಿಗಳು. ಇವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಸಬಾ ಹೋಬಳಿಯ ಜೈಪುರ ಗೇಟ್ ಬಳಿ ಸಬ್ ಇನ್ ಸ್ಪೆಕ್ಟರ್ ಮತ್ತು ಸಿಬ್ಬಂದಿ ಗಸ್ತು ಮಾಡುತ್ತಿದ್ದ ವೇಳೆ ಅನುಮಾನಸ್ಪದವಾಗಿ ತೆರಳುತ್ತಿದ್ದ ವಾಹನ ತಡೆದು ಪರಿಶೀಲಿಸಿದರು. ಈ ವೇಳೆ ಅದರಲ್ಲಿ 15 ರಿಂದ 30 ದಿನಗಳ 15 ಗಂಡು ಸೀಮೆ ಕರುಗಳಿದ್ದು, ಸದರಿ ಸೀಮೆ ಕರುಗಳಿಗೆ ಆಹಾರ, ನೀರು, ಬೆಳಕು ವ್ಯವಸ್ಥೆ ಮಾಡದೆ ಒತ್ತೊತ್ತಾಗಿ ತುಂಬಿ ಯಾವುದೇ ಪರವಾನಗಿ ಇಲ್ಲದೆ ಸಾಗಾಣೆ ಮಾಡಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದರು.

ADVERTISEMENT

ಆರೋಪಿಗಳಾದ ಸಲೀಂ ಪಾಷ ಮತ್ತು ಖಲೀಂ ಖಾನ್ ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜುಕೋರರ ಬಂಧನ

ಕುಂಬಳಗೂಡು ಪೊಲೀಸ್ ಠಾಣೆ ವ್ಯಾಪ್ತಿಯ ಸೂಲಿಕೆರೆ ಫಾರೆಸ್ಟ್ ಬಳಿ ಅಕ್ರಮವಾಗಿ ಜೂಜಾಟ ಆಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು , 9 ಮಂದಿ ಪರಾರಿಯಾಗಿದ್ದಾರೆ. ಕೃಷ್ಣಪ್ಪರ ಪುತ್ರ ಕೆ.ಶಿವರಾಜು ಅಲಿಯಾಸ್ ಯಾದವ, ಮುನಿಯಪ್ಪರ ಪುತ್ರ ಗುರುಕಿರಣ್ ಬಂಧಿತರು. ಉಳಿದ ಆರೋಪಿಗಳಾದ ಗಣಿ, ರಘು, ಮುನಿಸ್ವಾಮಿ, ಸುಮಂತ್, ವರುಣ್, ಮೋಟಣ್ಣ, ಮರಿಯಣ್ಣ, ದರ್ಶನ್ ಹಾಗೂ ಹರೀಶ್ ಪರಾರಿಯಾಗಿದ್ದಾರೆ.

ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ₹56,250ವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ಸಂಬಂಧ ಕುಂಬಳಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಗಿಡಗಳು ವಶ

ರಾಮನಗರದಲ್ಲಿನ ಕೈಲಾಂಚ ಹೋಬಳಿಯ ನೆಲೆಮಲೆ ಗ್ರಾಮದಲ್ಲಿ ಪೊಲೀಸರು ದಾಳಿ ನಡೆಸಿ ಎರಡು ದೊಡ್ಡ ಮತ್ತು ಎರಡು ಚಿಕ್ಕ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡಿದ್ದಾರೆ.

ಗ್ರಾಮದ ಕೃಷ್ಣಯ್ಯ ಅವರ ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವ ಬಗ್ಗೆ ದೊರೆತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಗಾಂಜಾ ಗಿಡಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿ ಲೇಟ್ ಕೆಂಚಯ್ಯ ಪುತ್ರ ಕೃಷ್ಣಯ್ಯ ತಲೆಮರೆಸಿಕೊಂಡಿದ್ದಾನೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.