ADVERTISEMENT

ತೆಂಗು ರೋಗ ನಿರ್ವಹಣೆ: ಗ್ರಾ.ಪಂ. ಮಟ್ಟದಲ್ಲಿ ಜಾಗೃತಿ

ತೆಂಗು ಬೆಳೆ ಅಭಿವೃದ್ಧಿ, ರೋಗ ನಿರ್ವಹಣೆ ಕುರಿತು ವಿಜ್ಞಾನಿಗಳೊಂದಿಗೆ ರೈತರ ಸಂವಾದ

​ಪ್ರಜಾವಾಣಿ ವಾರ್ತೆ
Published 4 ಜುಲೈ 2025, 5:53 IST
Last Updated 4 ಜುಲೈ 2025, 5:53 IST
ತೆಂಗು ಬೆಳೆಯ ವಿವಿಧ ರೋಗಗಳ ನಿಯಂತ್ರಣ ಹಾಗೂ  ತೆಂಗು ಅಭಿವೃದ್ಧಿ ಕುರಿತು ಕಾಸರಗೋಡು ತೆಂಗು ಬೆಳೆ ಉತ್ಪಾದನೆ ಸಂಶೋಧನಾ ವಿಭಾಗ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿಜ್ಞಾನಿಗಳು ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ವಿಜ್ಞಾನಿಗಳು ಇದ್ದಾರೆ
ತೆಂಗು ಬೆಳೆಯ ವಿವಿಧ ರೋಗಗಳ ನಿಯಂತ್ರಣ ಹಾಗೂ  ತೆಂಗು ಅಭಿವೃದ್ಧಿ ಕುರಿತು ಕಾಸರಗೋಡು ತೆಂಗು ಬೆಳೆ ಉತ್ಪಾದನೆ ಸಂಶೋಧನಾ ವಿಭಾಗ ಹಾಗೂ ತೋಟಗಾರಿಕೆ ಇಲಾಖೆ ವತಿಯಿಂದ ರಾಮನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ವಿಜ್ಞಾನಿಗಳು ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಶಾಸಕ ಸಿ.ಪಿ. ಯೋಗೇಶ್ವರ್ ಹಾಗೂ ವಿಜ್ಞಾನಿಗಳು ಇದ್ದಾರೆ   

ರಾಮನಗರ: ‘ಜಿಲ್ಲೆಯ ಬಹುತೇಕ ಕಡೆ ತೆಂಗಿಗೆ ರೋಗಬಾಧೆ ಕಾಣಿಸಿಕೊಂಡಿದೆ. ರೋಗ ನಿರ್ವಹಣೆ ಕುರಿತು ರೈತರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ರೋಗ ನಿಯಂತ್ರಣ ಜೊತೆಗೆ ಬೆಳೆ ಮೌಲ್ಯವರ್ಧನೆ ಮೂಲಕ ರೈತರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡಲು ಒತ್ತು ನೀಡಲಾಗುವುದು’ ಎಂದು ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್ ಭರವಸೆ ನೀಡಿದರು.

ಕಾಸರಗೋಡು ತೆಂಗು ಬೆಳೆ ಉತ್ಪಾದನೆ ಸಂಶೋಧನಾ ವಿಭಾಗ ಹಾಗೂ ಜಿಲ್ಲಾ ತೋಟಗಾರಿಕೆ ಇಲಾಖೆ ವತಿಯಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ, ‘ತೆಂಗಿನಲ್ಲಿ ಕಪ್ಪುತಲೆ ಹುಳು, ಬಿಳಿನೊಣ ನಿಯಂತ್ರಣ ಹಾಗೂ ತೆಂಗು ಅಭಿವೃದ್ಧಿ’ ಕುರಿತು ವಿಜ್ಞಾನಿಗಳ ತಂಡದೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರೈತರಿಗೆ ಪರ್ಯಾಯ ಆದಾಯಕ್ಕಾಗಿ ನೀರಾ ಉತ್ಪಾದನೆ ಉತ್ತೇಜಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯಲ್ಲಿ ಪ್ಲಾಂಟೆಷನ್ ಮಾಡಲು ಕ್ರಮ ವಹಿಸಲಾಗಿದೆ. ಇದರಿಂದ ಸುತ್ತಮುತ್ತಲಿನ ರೈತರಿಗೆ ಅನುಕೂಲವಾಗಲಿದೆ. ಬೆಂಗಳೂರು– ಮೈಸೂರು ಹೆದ್ದಾರಿಯು ಚನ್ನಪಟ್ಟಣ ಮತ್ತು ರಾಮನಗರ ಹಾದು ಹೋಗುವುದರಿಂದ ನೀರಾ ವ್ಯಾಪಾರಕ್ಕೆ ಅನುಕೂಲವಾಗಲಿದೆ.

ADVERTISEMENT

ಸಂಶೋದನಾಧಿಕಾರಿ ಡಾ. ರವಿ ಭಟ್, ‘ತೆಂಗು ಬೆಳೆ ನಾಟಿ ಕ್ರಮಬದ್ಧವಾಗಿರಬೇಕು. ನೀರು, ವಾತಾವರಣ, ಮಣ್ಣು ಪೋಷಕಾಂಶಗಳ ನಿರ್ವಹಣೆ ಬಹಳ ಮುಖ್ಯ. ಹೆಚ್ಚಾಗಿ ಸಾವಯವ ಗೊಬ್ಬರ ಬಳಸಬೇಕು. ತೆಂಗು ಮಧ್ಯೆ ಹಣ್ಣು, ತರಕಾರಿ ಹಾಗೂ ಇತರೆ ಬೆಳೆಗಳನ್ನು ತಜ್ಞರ ಸಲಹೆ ಪಡೆದು ಬೆಳೆಯಬಹುದು. ಇದರಿಂದ ಕೀಟ ರೋಗಗಳ ಬಾಧೆ ಕಡಿಮೆ ಆಗುತ್ತದೆ’ ಎಂದು ತಿಳಿಸಿದರು.

ತೆಂಗು ಬೆಳೆ ಸಂಸ್ಥೆ ನಿರ್ದೇಶಕರಾದ ಡಾ. ಹೆಬ್ಬಾರ್, ‘ತೆಂಗಿನಿಂದ ನೀರಾ, ಎಳನೀರು ಹಾಗೂ ತೆಂಗಿನ ಕಾಯಿಯಿಂದ 200ರಿಂದ 300 ಬಗೆಯ ಪಾದಾರ್ಥಗಳನ್ನು ತಯಾರಿಸಬಹುದು. ಒಂದು ಮರದ ನೀರಾದಿಂದ ವರ್ಷಕ್ಕೆ ₹20 ಸಾವಿರ ಗಳಿಸಬಹುದು. ಹಾಗಾಗಿ, ಬೆಳೆಗಾರರು ತೆಂಗು ಮೌಲ್ಯವರ್ಧನೆಗೂ ಗಮನ ಹರಿಸಬೇಕು’ ಎಂದು ಸಲಹೆ ನೀಡಿದರು.

ಸಂಶೋಧನಾಧಿಕಾರಿ ಡಾ. ಜೋಸೇಪ್ ರಾಜಕುಮಾರ್ ಅವರು, ಕೆಂಪುಮೂತಿ ಹುಳು ಹಾಗೂ ಕಪ್ಪುತಲೆ ಹುಳುಗಳನ್ನು ನಿಯಂತ್ರಿಸುವ ಬಗ್ಗೆ ಮತ್ತು ಡಾ. ಚಂದ್ರಶೇಖರ್ ಅವರು ಪರೋಪಕಾರಿ ಮತ್ತು ಪರತಂತ್ರ ಜೀವಿಗಳ ಉತ್ಪಾದನೆ ಕುರಿತು ಮಾಹಿತಿ ನೀಡಿದರು. ತೋಟಗಾರಿಕೆ ಉಪ ನಿರ್ದೇಶಕ ಮುನೇಗೌಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್, ಯೋಜನಾ ನಿರ್ದೇಶಕ ಚಿಕ್ಕಸುಬ್ಬಯ್ಯ, ತೆಂಗು ಬೆಳೆ ಸಂಶೋನಾಧಿಕಾರಿ,ರೈತರು ಹಾಗೂ ಅಧಿಕಾರಿಗಳು ಇದ್ದರು.

ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತರು ಹಾಗೂ ಅಧಿಕಾರಿಗಳು
ರೋಗಬಾಧೆ ಮತ್ತು ಹವಾಮಾನ ವೈಪರೀತ್ಯದಿಂದಾಗಿ ತೆಂಗು ಬೆಳೆಗಾರರು ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಅವರನ್ನು ನಷ್ಟದಿಂದ ಪಾರು ಮಾಡಲು ತೆಂಗು ಬೆಳೆಗೂ ವಿಮೆ ಮಾಡಿಸಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಕ್ರಮ ವಹಿಸಬೇಕು
– ಸಿ.ಪಿ. ಯೋಗೇಶ್ವರ್ ಶಾಸಕ

‘ಮೂರು ರೋಗ ಸಾಮಾನ್ಯ’

‘ತೆಂಗಿನ ಬೆಳೆಯಲ್ಲಿ ಸುಳಿಕೊರೆ ಕಾಂಡಸೋರುವ ರೋಗ ಮತ್ತು ಅಣಬೆ ರೋಗವನ್ನು ಸಾಮಾನ್ಯವಾಗಿ ಕಾಣಬಹುದು. ಶಿಲೀಂಧ್ರದಿಂದ ಬರುವ ಕಾಂಡಸೋರುವ ರೋಗವನ್ನು ಎಲ್ಲಾ ಪ್ರದೇಶದಲ್ಲಿ ಕಾಣಬಹುದು. ಅಣಬೆರೋಗ ಮರದ ತಳಭಾಗದಲ್ಲಿ ಶುರುವಾಗುತ್ತದೆ. ಒಂದಕ್ಕೊಂದು ಹರಡಿ ಇಡೀ ಮರವನ್ನೇ ಆವರಿಸಿ ಹಾಳು ಮಾಡುತ್ತವೆ. ಸುಳಿಕೊರೆ ರೋಗವು ಶಿಲೀಂಧ್ರದಿಂದ ಬರುವಂತಹ ರೋಗ. ತೇವಾಂಶ ಮತ್ತು ಮಳೆ ಹೆಚ್ಚು ಇರುವೆಡೆ ಬರುವ ಇದಕ್ಕೆ ಆರಂಭದಲ್ಲೇ ಔಷಧ ಸಿಂಪಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ. ಮಣ್ಣಿನಿಂದ ಬರುವ ಶಿಲೀಂಧ್ರ ರೋಗವು ತೆಂಗಿನ ಮರದ ಕಾಂಡದೊಳಗೆ ಪ್ರವೇಶಿಸುತ್ತದೆ. ಈ ರೋಗದಿಂದ ಮರವು ಕ್ರಮೇಣ ಸಣ್ಣದಾಗುತ್ತದೆ. ಇವುಗಳನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಿದಲ್ಲಿ ರೋಗ ಹತೋಟಿಗೆ ಬರುತ್ತದೆ’ ಎಂದು ತೆಂಗು ಬೆಳೆ ಉತ್ಪಾದನೆಯ ಸಂಶೋಧನಾ ವಿಭಾಗದ ಸಂಶೋದನಾಧಿಕಾರಿ ಡಾ. ವಿನಾಯಕ ಹೆಗಡೆ ಸಲಹೆ ನೀಡಿದರು.

‘ನಷ್ಟ ಸರಿದೂಗಿಸುವುದು ಹೇಗೆ?’

‘ಜಿಲ್ಲೆಯಲ್ಲಿ ಸರಾಸರಿ 1.63 ಲಕ್ಷ ಮೆಟ್ರಿಕ್ ಟನ್ ತೆಂಗು ಉತ್ಪಾದನೆಯಾಗುತ್ತದೆ. ಅದರಲ್ಲಿ ಶೇ 85ರಷ್ಟು ಬೆಳೆ ಹಾನಿಯಾಗಿದ್ದು ಸುಮಾರು ₹700 ಕೋಟಿ ನಷ್ಟವಾಗಿದೆ. ಈ ನಷ್ಟವನ್ನು ಸರಿದೂಗಿಸಿಕೊಳ್ಳುವುದು ಹೇಗೆ? ಇಂತಹ ಸಂದರ್ಭದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿಯ ಪಾತ್ರವೇನು? ಕಳೆದೆರಡು ವರ್ಷದಿಂದ ಜಿಲ್ಲೆಯಲ್ಲಿ ತೆಂಗು ಮತ್ತು ಮಾವು ನಷ್ಟಕ್ಕೆ ಪರಿಹಾರ ಕೋರಿ ಕೇಂದ್ರ ಮತ್ತು ರಾಜ್ಯಕ್ಕೆ ವರದಿ ಕೊಟ್ಟರೂ ಪ್ರಯೋಜನವಾಗಿಲ್ಲ. ರೈತರ ಸಂಕಷ್ಟಕ್ಕೆ ಸ್ಪಂದಿಸದ ನಿಧಿಯು ಕೇವಲ ಹೆಸರಿಗಷ್ಟೇ ಇವೆಯೇ? ’ ಎಂದು ಅಸಮಾಧಾನ ವ್ಯಕ್ತಪಡಿಸಿದ ರೈತ ನಾಯಕ ಸಿ. ಪುಟ್ಟಸ್ವಾಮಿ ‘ತೆಂಗಿಗೆ ಜಿಲ್ಲೆಯಲ್ಲಿ ಎದುರಾಗಿರುವ ಕೀಟಬಾಧೆ ಹಾಗೂ ರೋಗಬಾಧೆ ಬೇರೆ ರಾಷ್ಟ್ರಗಳಲ್ಲೂ ಇದೆಯೇ? ಅಲ್ಲೇನು ಪರಿಹಾರ ಸೂತ್ರ ಕಂಡುಕೊಂಡಿದ್ದಾರೆ ಎಂಬುದನ್ನು ತಿಳಿದುಕೊಂಡು ನಮಗೂ ಹೇಳಿ’ ಎಂದು ವಿಜ್ಞಾನಿಗಳಿಗೆ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.