ADVERTISEMENT

ರಾಮನಗರ: ಕಾಂಗ್ರೆಸ್‌–ಬಿಜೆಪಿ ಒಳ ಒಪ್ಪಂದ

ರಾಮನಗರ ಎಪಿಎಂಸಿ: ಪರಾಜಿತ ಅಭ್ಯರ್ಥಿ ಆರೋಪ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2021, 3:44 IST
Last Updated 5 ನವೆಂಬರ್ 2021, 3:44 IST

ರಾಮನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಅಧಿಕಾರ ಹಿಡಿದಿದೆ ಎಂದು ಅಧ್ಯಕ್ಷ ಸ್ಥಾನದ ಪರಾಜಿತ ಅಭ್ಯರ್ಥಿ ದೊರೆಸ್ವಾಮಿ ಆರೋಪಿಸಿದರು.

‘ಸಮಿತಿಯಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚಾಗಿದ್ದರೂ ನಮಗೆ ಅಧಿಕಾರ ಕೈ ತಪ್ಪಿದ್ದಕ್ಕೆ ಅಧಿಕಾರಿಗಳ ದುರುಪಯೋಗ ಕಾರಣ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಸಮಿತಿಯಲ್ಲಿ 6 ಜೆಡಿಎಸ್ ಬೆಂಬಲಿತರು, 3 ನಾಮನಿರ್ದೇಶಿತರು ಸೇರಿ 9 ಮತಗಳು ಸಿಗುವ ನಿರೀಕ್ಷೆಯೊಂದಿಗೆ ಸ್ಪರ್ಧೆ ಮಾಡಿದ್ದೆ. ಬಿಜೆಪಿ ಬೆಂಬಲ ದೊರೆಯುವ ಭರವಸೆ ದೊರೆತಿತ್ತು. ಆದರೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುಲುವಾಡಿ ದೇವರಾಜು, ಮಾಗಡಿ ಕ್ಷೇತ್ರದ ಅಧ್ಯಕ್ಷ ಧನಂಜಯ ಕಾಂಗ್ರೆಸ್‌ ಜೊತೆ ಕೈ ಜೋಡಿಸಿ ನಮಗೆ ಅಧಿಕಾರ ತಪ್ಪಿಸಿದ್ದಾರೆ. ಇದೆಲ್ಲ ನೋಡುತ್ತಿದ್ದರೆ ಕಾಂಗ್ರೆಸ್‌, ಬಿಜೆಪಿಯ ಬಿ ಟೀಂ ಎನಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

ಸಮಿತಿಯ ಒಟ್ಟು 13 ನಿರ್ದೇಶಕರ ಚುನಾವಣೆಯಲ್ಲಿ 12 ಜೆಡಿಎಸ್ ಬೆಂಬಲಿತರು ಹಾಗೂ 1 ಕಾಂಗ್ರೆಸ್ ಬೆಂಬಲಿತರು ಗೆಲುವು ಸಾಧಿಸಿದ್ದರು. ಈ ಪೈಕಿ ಬಾಲಕೃಷ್ಣ ಬೆಂಬಲಿತ ಮೂವರು ಕಾಂಗ್ರೆಸ್‌ ಸೇರಿದ್ದಾರೆ. ಮೊದಲ ಚುನಾವಣೆಯಲ್ಲಿ ನಾನು ಅವಿರೋಧವಾಗಿ ಆಯ್ಕೆಯಾಗಿದ್ದೆ. 2020ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸಿದ್ದು, ಆಗಲೂ ಸಮಾನ ಮತ ಬಂದು ಲಾಟರಿಯಲ್ಲಿ ಅದೃಷ್ಟ ಕೈ ಕೊಟ್ಟಿತ್ತು’ ಎಂದು ವಿವರಿಸಿದರು.

‘ರಾಜ್ಯ ಸರ್ಕಾರವು ನಿಯಮಬಾಹಿರವಾಗಿ ಮೂವರನ್ನು ಸಮಿತಿಗೆ ನಾಮನಿರ್ದೇಶನ ಮಾಡಿದೆ. ಮಮತಾ ಎಂಬುವರ ಹೆಸರಿನಲ್ಲಿ ಪಹಣಿಯೇ ಇಲ್ಲದಿದ್ದರೂ ಅವರಿಗೆ ಸದಸ್ಯತ್ವ ನೀಡಿ ಮತದಾನದ ಹಕ್ಕು ನೀಡಲಾಗಿದೆ. ಈ ಕುರಿತು ಕಾನೂನು ಸಮರ ನಡೆಸಲಾಗುವುದು’ ಎಂದರು.

ಸಮಿತಿ ನಿರ್ದೇಶಕರಾದ ಎಚ್. ಪುಟ್ಟರಾಮಯ್ಯ, ವೆಂಕಟರಂಗಯ್ಯ, ಶಿವಕುಮಾರ್, ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.