ADVERTISEMENT

ಡಿಕೆ ಸಹೋದರರಿಂದ ವಿಷಬೀಜ ಬಿತ್ತುವ ಕೆಲಸ: ಸಿಪಿವೈ

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 15:31 IST
Last Updated 30 ಜುಲೈ 2020, 15:31 IST
ಸಿ.ಪಿ. ಯೋಗೇಶ್ವರ್‌
ಸಿ.ಪಿ. ಯೋಗೇಶ್ವರ್‌   

ರಾಮನಗರ:'ಡಿ.ಕೆ. ಶಿವಕುಮಾರ್‍ ಹಾಗೂ ಅವರ ಸಹೋದರ ಸುರೇಶ್‌ ನನ್ನ ಹಾಗೂ ಬಿಜೆಪಿ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ’ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಪಿ. ಯೋಗೇಶ್ವರ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಯೋಗೇಶ್ವರ್‌ ಕಾಂಗ್ರೆಸ್ ಸೇರಲು ಉತ್ಸುಕರಾಗಿದ್ದು, ನನ್ನ ಸಂಪರ್ಕದಲ್ಲಿ ಇದ್ದರು. ಹದಿನೈದು ದಿನದ ಹಿಂದೆ ನನ್ನ ಕಾಲು ಹಿಡಿಯಲು ಬಂದಿದ್ದರು’ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಫೇಸ್‌ಬುಕ್‌ ಖಾತೆ ಮೂಲಕ ಸ್ಪಷ್ಟನೆ ನೀಡಿರುವ ಯೋಗೇಶ್ವರ್‌ 'ಅವರ ಹೇಳಿಕೆ ಸಂಪೂರ್ಣ ಸುಳ್ಳು. ನಾನು ಅವರನ್ನು ಭೇಟಿ ಮಾಡಿಲ್ಲ. ಬಿಜೆಪಿಯಲ್ಲಿ ನನಗೆ ಎಲ್ಲವೂ ಸಿಗುತ್ತಿದ್ದು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ’ ಎಂದಿದ್ದಾರೆ.

'ನಾನು ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಪರಿಷತ್‌ ಸದಸ್ಯರನ್ನಾಗಿ ಮಾಡುವುದಾಗಿ ಬಿಜೆಪಿ ವರಿಷ್ಠರು ಆರು ತಿಂಗಳ ಹಿಂದೆಯೇ ಭರವಸೆ ನೀಡಿದ್ದರು. ಅದರಂತೆ ನಡೆದುಕೊಂಡಿದ್ದಾರೆ. ಬಿಜೆಪಿಯ ಸಿದ್ದಾಂತ ನಂಬಿಕೊಂಡು ಬಂದಿದ್ದು, ಪಕ್ಷದೊಳಗೆ ನನಗೆ ಸಿಗಬೇಕಾದ ಸ್ಥಾನಮಾನಗಳು ಹಂತಹಂತವಾಗಿ ಸಿಗುತ್ತಿವೆ. ಯಾವ ದೊಡ್ಡ ಹುದ್ದೆಯ ಆಕಾಂಕ್ಷೆ ಇಟ್ಟುಕೊಂಡಿಲ್ಲ. ಡಿಕೆಶಿ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಅದರ ಘನತೆಗೆ ತಕ್ಕಂತೆ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ADVERTISEMENT

'ಸರ್ಕಾರ ಬರಲು, ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ನನ್ನದೂ ಅಳಿಲು ಸೇವೆ ಇದೆ. ನಾನು ಮತ್ತೆ ಸರ್ಕಾರ ಅಸ್ಥಿರಗೊಳಿಸಲು ಸಂಚು ಮಾಡುವ ಅಗತ್ಯ ಇಲ್ಲ. ಇದು ನನ್ನ ಕನಸಿನ ಸರ್ಕಾರ. ಬಿಎಸ್‌ವೈ ಮುಂದಿನ ಮೂರು ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ಪೂರೈಸಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.