ರಾಮನಗದ ಅಂಬೇಡ್ಕರ್ ಭವನದಲ್ಲಿ ಕನಕಪುರದ ಮಾತೆ ಸಾವಿತ್ರಿ ಬಾಫುಲೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಗುರುವಂದನೆ ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ರಾಮನಗರ: ‘ಪ್ರಧಾನಿ, ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಉನ್ನತ ರಾಜಕೀಯ ಸ್ಥಾನಮಾನಗಳು ಇಂದಿಗೂ ಮೇಲ್ವರ್ಗಕ್ಕೆ ಮಾತ್ರ ಸೀಮಿತವಾಗಿವೆ. ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾದರೂ ದಲಿತರು ಮತ್ತು ಶೂದ್ರರಿಗೆ ಉನ್ನತ ಸ್ಥಾನಗಳು ಸಿಗುತ್ತಿಲ್ಲ’ ಎಂದು ಅಖಿಲ ಭಾರತ ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕನಕಪುರದ ಮಾತೆ ಸಾವಿತ್ರಿ ಬಾಫುಲೆ ಚಾರಿಟೇಬಲ್ ಟ್ರಸ್ಟ್ ಭಾನುವಾರ ಹಮ್ಮಿಕೊಂಡಿದ್ದ ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಗುರುವಂದನೆ, ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಮೇಲ್ವರ್ಗದವರು ಉನ್ನತಾಧಿಕಾರ ಅನುಭವಿಸುತ್ತಿದ್ದಾರೆ. ಈ ದೇಶವನ್ನು ಬಹುಸಂಖ್ಯಾತರು ಆಳಬೇಕೆಂಬ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಕನಸು ಇಂದಿಗೂ ನನಸಾಗಿತ್ತು. ದಲಿತರು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಸಂವಿಧಾನದ ಸಂಪೂರ್ಣ ಲಾಭ ಅನ್ಯರ ಪಾಲಾಗುವುದನ್ನು ತಪ್ಪಿಸಬೇಕು’ ಎಂದರು.
ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಾತನಾಡಿ, ‘ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಶಿಕ್ಷಣವೊಂದೇ ಅಸ್ತ್ರ. ಆ ನಿಟ್ಟಿನಲ್ಲಿ ನಾಗೇಶ್ ಅವರು ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡುತ್ತಿರುವ ಶ್ಲಾಘನೀಯ. ಸಮುದಾಯದವರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಟ್ರಸ್ಟ್ ಅಧ್ಯಕ್ಷ ಎಂ. ನಾಗೇಶ್ ಮಾತನಾಡಿ, ‘ಶೋಷಿತ ಸಮುದಾಯಗಳಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾ ಫುಲೆ ದಂಪತಿ ಶಿಕ್ಷಣ ಕ್ರಾಂತಿ ಮಾಡಿದರು. ಅವರ ಹೆಸರಿನ ನಮ್ಮ ಟ್ರಸ್ಟ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರುತ್ತಿದೆ’ ಎಂದರು.
ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಅವರಿಗೆ ಪುಷ್ಪವೃಷ್ಟಿ ಮೂಲಕ ಗುರುವಂದನೆ ಸಲ್ಲಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಆದಿಚುಂಚನಗಿರಿ ಮಹಾಸಂಸ್ಥಾನ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಎಎಸ್ ಅಧಿಕಾರಿ ಎನ್. ವೆಂಕಟರಾಜು, ಎಐಬಿಎಸ್‌ಪಿ ರಾಜ್ಯ ಪ್ರಧಾನಕಾರ್ಯದರ್ಶಿ ಅಂದಾನಪ್ಪ, ರಮೇಶ್, ನರಸಿಂಹಯ್ಯ, ಪಾರ್ವತಮ್ಮ, ಮಹದೇವ್, ವಿ.ಸ್ವಾಮಿ, ಮುರುಗೇಶ್, ಬಳಗೆರೆ ಭೈರಾಜು, ನಮನ ಚಂದ್ರು, ಶ್ರೀನಿವಾಸ ರಾವ್, ನಾರಾಯಣಪ್ಪ, ಮೆಳೇಕೋಟೆ ಶಿವಣ್ಣ ಹಾಗೂ ಇತರರು ಇದ್ದರು.
ದಲಿತರು ಅಲ್ಪಸಂಖ್ಯಾತರು ಹಿಂದುಳಿದ ವರ್ಗದವರ ಮತ ಪಡೆದು ಅಧಿಕಾರಕ್ಕೇರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಒಳ ಮೀಸಲಾತಿ ಘೋಷಿಸುವ ಮೂಲಕ ಆ ಸಮುದಾಯಗಳ ಋಣ ತೀರಿಸಬೇಕು.– ಮಾರಸಂದ್ರ ಮುನಿಯಪ್ಪ, ರಾಜ್ಯಾಧ್ಯಕ್ಷ ಅಖಿಲ ಭಾರತ ಬಹುಜನ ಸಮಾಜ ಪಕ್ಷ
ಕಾಂಗ್ರೆಸ್ ಬಿಜೆಪಿ ಸೇರಿದಂತೆ ಯಾವ ಪಕ್ಷದ ಸರ್ಕಾರವೂ ಸಂವಿಧಾನದವನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಿಲ್ಲ. ತುಳಿತಕ್ಕೆ ಒಳಗಾದ ದಲಿತರಿಗೆ ಸಂವಿಧಾನದ ಆಶಯದಂತೆ ಇಂದಿಗೂ ಸಾಮಾಜಿಕ ನ್ಯಾಯ ಸಿಕ್ಕಿಲ್ಲ– ನಾರಾಯಣಸ್ವಾಮಿ, ಮಾಜಿ ಕೇಂದ್ರ ಸಚಿವ
‘ಸಂಘಟನೆಗಳು ಶಿಕ್ಷಣಕ್ಕೆ ಸ್ಫೂರ್ತಿ ತುಂಬಲಿ’
‘ಸಂಘಟನೆಗಳು ಸಮುದಾಯಕ್ಕೆ ಅನ್ಯಾಯವಾದಾಗ ದನಿ ಎತ್ತಿ ಹೋರಾಡುವ ಜೊತೆಗೆ ಸಮುದಾಯದ ಮಕ್ಕಳ ಶಿಕ್ಷಣಕ್ಕೆ ಸ್ಪೂರ್ತಿ ತುಂಬಬೇಕು. ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಕಾರ ನೀಡಬೇಕು. ಇಂತಹ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳ ಮೂಲಕ ಶೈಕ್ಷಣಿಕ ಸಾಧನೆಗೆ ಪ್ರೋತ್ಸಾಹಿಸಬೇಕು. ಶಿಕ್ಷಣದಲ್ಲಿ ಪ್ರಗತಿ ಸಾಧಿಸದ ಹೊರತು ಸಮುದಾಯದ ಪ್ರಗತಿ ಅಸಾಧ್ಯ. ಮಾತೆ ಸಾವಿತ್ರಿಬಾ ಫುಲೆ ಅವರು ಹಿಂದಿನ ಕಠಿಣ ಪರಿಸ್ಥಿತಿಯಲ್ಲಿ ಶಿಕ್ಷಣ ಪಡೆದು ಶೋಷಿತರಿಗೆ ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಮೂಲಕ ನಿಜ ಸರಸ್ವತಿಯಾದರು. ಅಂತಹವರ ಸ್ಫೂರ್ತಿಗಾಥೆಯನ್ನು ಮಕ್ಕಳಿಗೆ ತಿಳಿಸುವ ಕೆಲಸವಾಗಬೇಕು’ ಎಂದು ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.