ADVERTISEMENT

ಬಾಕಿ ಗೌರವಧನ ನೀಡಲು ಆಗ್ರಹ

ಮಾಗಡಿ ವಿಧಾನಸಭಾ ಚುನಾವಣೆಯ ಪ್ರಕ್ರಿಯೆ ಚಿತ್ರೀಕರಣ ಸಂಬಂಧ ಒತ್ತಾಯ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2019, 14:04 IST
Last Updated 13 ಮಾರ್ಚ್ 2019, 14:04 IST

ಮಾಗಡಿ: ಕಳೆದ ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಚಿತ್ರೀಕರಿಸಿ, ವಿಡಿಯೊ ಮತ್ತು ಫೊಟೊ ತೆಗೆಸಿದ್ದ ಗೌರವಧನವನ್ನು ನೀಡಿಲ್ಲ. ಬಾಕಿ ಮೊತ್ತ ಕೂಡಲೇ ನೀಡಬೇಕು ಎಂದು ತಾಲ್ಲೂಕು ಫೋಟೋಗ್ರಾಫರ್ಸ್‌ ಮತ್ತು ವಿಡಿಯೊಗ್ರಾಫರ್ಸ್‌ ಸಂಘದ ಉಪಾಧ್ಯಕ್ಷ ಮಹೇಶ್‌ ಮನವಿ ಮಾಡಿದ್ದಾರೆ.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ವಿಧಾನಸಭಾ ಚುನಾವಣೆ ಪ್ರಕ್ರಿಯೆಯನ್ನು ಚಿತ್ರೀಕರಿಸಲು ಹಗಲು ರಾತ್ರಿ ಎನ್ನದೆ, ನಮ್ಮ ಫೋಟೋಗ್ರಾಫರ್‌ಗಳು ಕೆಲಸ ಮಾಡಿದ್ದೇವೆ. ಜಿಲ್ಲಾಧಿಕಾರಿಗಳೂ ಬಾಕಿ ಗೌರವಧನ ನೀಡುವಂತೆ ಚುನಾವಣಾ ಶಾಖೆಯ ಸಿಬ್ಬಂದಿಗೆ ಆದೇಶಿಸಿದ್ದಾರೆ’ ಎಂದು ಹೇಳಿದರು.

‘ತಾಲ್ಲೂಕು ಚುನಾವಣಾ ಶಾಖೆಯ ಸಿಬ್ಬಂದಿ ಬಾಕಿ ಮೊತ್ತ ನೀಡದೇ ಸತಾಯಿಸುವುದು ಖಂಡನೀಯ. ಆಯೋಗದಲ್ಲಿ ಹಣಕ್ಕೆ ಕೊರತೆ ಇದೆಯೇ. ಶಾಮಿಯಾನ, ಧ್ವನಿವರ್ಧಕದವರಿಗೂ ಮೊತ್ತವನ್ನು ನೀಡಬೇಕಿದೆ. ಕೂಡಲೇ ಇದನ್ನು ನೀಡದಿದ್ದರೆ ಸಂಸತ್‌ ಚುನಾವಣೆಯಲ್ಲಿ ವಿಡಿಯೊ ಚಿತ್ರೀಕರಣಕ್ಕೆ ಮುಂದಾಗದಂತೆ ಫೋಟೋಗ್ರಾಫರ್ಸ್‌ ಸಂಘ ನಿರ್ಧಾರ ಕೈಗೊಳ್ಳಬೇಕಾಗುತ್ತದೆ’ ಎಂದರು.

ADVERTISEMENT

ಸ್ಪಷ್ಟನೆ: ತಾಲ್ಲೂಕು ಚುನಾವಣಾ ಶಾಖೆಯ ಶ್ರೀಧರ್‌ ಮಾತನಾಡಿ, ‘ಚುನಾವಣಾಧಿಕಾರಿ ಹೊಸಬರು, ಕಾರ್ಯ ಒತ್ತಡದಿಂದ ಅವರು ಸಹಿ ಹಾಕಿಲ್ಲ. ಶಾಖೆಯಲ್ಲಿ ತುಂಬಾ ಕೆಲಸವಿದೆ’ ಎಂದು ತಿಳಿಸಿದರು.

ಮತದಾರರ ಪಟ್ಟಿ: ತಿರುಮಲೆ ಕಾಂಗ್ರೆಸ್‌ ಮುಖಂಡ ರಂಗಹನುಮಯ್ಯ ಮಾತನಾಡಿ, ಚುನಾವಣಾ ಶಾಖೆಯಲ್ಲಿ ಮತದಾರರ ಆಂತರಿಕ ಬದಲಾವಣೆಗೆ ಸಿಬ್ಬಂದಿ ಸ್ಪಂದಿಸುತ್ತಿಲ್ಲ. ನಮೂನೆ 8ಎ ಸೇರ್ಪಡೆ ಮತ್ತು ಆಂತರಿಕ ಬದಲಾವಣೆಗೆ ಜಿಲ್ಲಾಧಿಕಾರಿ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಪಟ್ಟಣದ 1 ನೇ ವಾರ್ಡಿನಲ್ಲಿ ಗಂಡನ ಹೆಸರು ಮತದಾರರ ಪಟ್ಟಿಯಲ್ಲಿದ್ದರೆ, ಪತ್ನಿಯ ಹೆಸರು 2 ನೇ ವಾರ್ಡಿನಲ್ಲಿದೆ. ಚುನಾವಣಾ ಆಯೋಗದ ಅಧಿಸೂಚನೆಯಂತೆ ಆನ್‌ಲೈನ್‌ ನಲ್ಲಿ ಮತದಾರರ ಹೆಸರು ನೋಂದಾಯಿಸಿಕೊಳ್ಳಲು ಅವಕಾಶವಿದೆ ಎಂದರು.

ಪುರಸಭೆ ಸದಸ್ಯ ರಘು, ಮತದಾರರ ಆಂತರಿಕ ಬದಲಾವಣೆಗೆ ಅವಕಾಶ ಮಾಡಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವುದಾಗಿ ತಿಳಿಸಿದರು.

ಮತದಾರರ ಪಟ್ಟಿಗೆ ಸೇರ್ಪಡೆ ವಿಚಾರವಾಗಿ ಗೊಂದಲ ಮೂಡಿದೆ. ವಿಧಾನಸಭಾ ಚುನಾವಣೆಗಿಂತ 20 ಸಾವಿರ ಮತದಾರರು ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದಾರೆ. ಪುರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬೆಂಗಳೂರು, ತುಮಕೂರು ನಿವಾಸಿಗಳ ಹೆಸರು ಸಹ ಮಾಗಡಿ ಮತದಾರರ ಪಟ್ಟಿಯಲ್ಲಿವೆ ಎಂದರು.

ಮದುವೆಯಾಗಿ ಗಂಡನ ಮನೆಗೆ ಹೋಗಿರುವ ಮಹಿಳೆಯರ ಹೆಸರು ಮತದಾರರ ಪಟ್ಟಿಯಲ್ಲಿದ್ದು, ಗೊಂದಲ ಮೂಡಿಸಿದೆ. ತಿರುಮಲೆ ಬಡಾವಣೆಯ ಸಾವಿರಾರು ನಿವಾಸಿಗಳ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.