ರಾಮನಗರ: ಧರ್ಮಸ್ಥಳ ಕ್ಷೇತ್ರ ಮತ್ತು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ವಿರುದ್ಧ ಸಾಮಾಜಿಕ ಜಾಲತಾಣ ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಅಪಪ್ರಚಾರ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಧರ್ಮಸ್ಥಳ ಭಕ್ತಾಭಿಮಾನ ವೇದಿಕೆ ನೇತೃತ್ವದಲ್ಲಿ ನೂರಾರು ಭಕ್ತರು ನಗರದಲ್ಲಿ ಬುಧವಾರ ಜನಾಗ್ರಹ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಜೂನಿಯರ್ ಕಾಲೇಜು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಇರುವ ಪಂಚಮುಖಿ ಆಂಜನೇಯ ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ನಡೆದ ಮೆರವಣಿಗೆಯಲ್ಲಿ ವಿವಿಧ ಮಠಗಳ ಸ್ವಾಮೀಜಿ ಸೇರಿದಂತೆ ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್ ಮುಖಂಡರು ಸಹ ಪಾಲ್ಗೊಂಡು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಸಹ ಪಾಲ್ಗೊಂಡಿದ್ದರು. ‘ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುವವರಿಗೆ ಧಿಕ್ಕಾರ’ ಎಂಬ ಫಲಕಗಳನ್ನಿಡಿದು ಮುಸ್ಲಿಂ ಮಹಿಳೆಯರು ಸೇರಿದಂತೆ ಹಲವರು ಹೆಜ್ಜೆ ಹಾಕಿದರು. ಮಾರ್ಗದುದ್ದಕ್ಕೂ ಯೂಟ್ಯೂಬರ್‌ಗಳ ವಿರುದ್ಧ ಘೋಷಣೆಗಳು ಕೂಗಿ, ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ದೇವಸ್ಥಾನದ ಆವರಣಕ್ಕೆ ಬಂದ ಹೆಚ್ಚುವರಿ ಜಿಲ್ಲಾಧಿಕಾರಿ ಆರ್. ಚಂದ್ರಯ್ಯ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಪ್ರತಿಭಟನೆಯಿಂದಾಗಿ ಬೆಂಗಳೂರು–ಮೈಸೂರು ರಸ್ತೆಯ ಬೆಂಗಳೂರು ಮಾರ್ಗವು ಕೆಲ ಹೊತ್ತು ಬಂದ್ ಆಯಿತು. ಪರ್ಯಾಯವಾಗಿ ಮತ್ತೊಂದು ರಸ್ತೆಯಲ್ಲಿ ವಾಹನಗಳ ಸಂಚಾರಕ್ಕೆ ಪೊಲೀಸರು ವ್ಯವಸ್ಥೆ ಮಾಡಿದರು.
ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಬಮೂಲ್ ನಿರ್ದೇಶಕರಾದ ಪಿ. ನಾಗರಾಜು, ಹರೀಶ್‍ಕುಮಾರ್, ಲಿಂಗೇಶ್‍ಕುಮಾರ್, ಮುಖಂಡರಾದ ಬಿಡದಿ ಚಿಕ್ಕಣ್ಣಯ್ಯ, ರವಿಕುಮಾರ್ ಗೌಡ, ಚಂದ್ರೇಗೌಡ, ಜಯ ಕರ್ನಾಟಕ ಪ್ರಕಾಶ್ ರೈ, ರವಿ, ಎಸ್.ಆರ್. ನಾಗರಾಜು, ಮುರಳೀಧರ್, ಬಸವರಾಜು, ಕವಿತಾ ರಾವ್, ಜೈಕುಮಾರ್ ಹಾಗೂ ಇತರರು ಇದ್ದರು.
Highlights - ಬಿಜೆಪಿ, ಜೆಡಿಎಸ್, ಕೈ ಮುಖಂಡರು ಭಾಗಿ ಅಪಪ್ರಚಾರಕ್ಕೆ ಕಡಿವಾಣ ಹಾಕಿ ಯೂಟ್ಯೂಬರ್‌ಗಳ ವಿರುದ್ಧ ಘೋಷಣೆ
ಅಪರಿಚಿತ ಶವಗಳನ್ನು ಹೂತಿರುವ ಆರೋಪದ ಮೇಲೆ ಧರ್ಮಸ್ಥಳದ ಸುತ್ತ ನಡೆಯುತ್ತಿರುವ ಶವ ಶೋಧವು ಕ್ಷೇತ್ರದ ವಿರುದ್ಧದ ಷಡ್ಯಂತ್ರವಾಗಿದೆ. ಇದಕ್ಕೆ ನ್ಯಾಯಾಂಗ ಮತ್ತು ಶಾಸಕಾಂಗ ಉತ್ತರ ನೀಡಬೇಕುರಾಜಶೇಖರ ಶಿವಾಚಾರ್ಯ ಸ್ವಾಮೀಜಿ ದಾಸೋಹ ಮಠ ಅವ್ವೇರಹಳ್ಳಿ
ಕಾಣದ ಕೈಗಳು ಧರ್ಮಸ್ಥಳದ ವಿರುದ್ಧ ಪಿತೂರಿಯಲ್ಲಿ ತೊಡಗಿವೆ. ಸುಳ್ಳು ಸುದ್ದಿ ಬಿತ್ತರಿಸಿ ಪ್ರಚಾರ ಪಡೆಯುತ್ತಿವೆ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಕಾಣದ ಕೈಗಳ ಬಂಡವಾಳ ಬಯಲು ಮಾಡಬೇಕುಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಬೇವೂರು
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಾಭಿವೃದ್ಧಿಗೆ ಜಾತಿ ಮತ್ತು ಧರ್ಮ ಬೇಧವಿಲ್ಲದೆ ಶ್ರಮಿಸುತ್ತಿದ್ದಾರೆ. ಅವರ ವಿರುದ್ಧ ಎಡಪಂಥೀಯರು ಸುಳ್ಳು ಆರೋಪ ಮಾಡುತ್ತಿದ್ದಾರೆ. ಸುಳ್ಳಿನ ವಿರುದ್ಧ ಸತ್ಯಕ್ಕೆ ಜಯ ಸಿಗಲಿದೆಶಿವರುದ್ರ ಸ್ವಾಮೀಜಿ ವಿರಕ್ತ ಮಠಾಧ್ಯಕ್ಷ ಕುಡಿನೀರುಕಟ್ಟೆ
- ಕೆಲ ಯೂಟ್ಯೂಬರ್‌ಗಳು ಧರ್ಮಸ್ಥಳದ ಹೆಸರಿಗೆ ಕಳಂಕ ತರುತ್ತಿದ್ದಾರೆ. ಸರ್ಕಾರ ರಚಿಸಿರುವ ಎಸ್ಐಟಿ ಪಾರದರ್ಶಕವಾಗಿ ತನಿಖೆ ನಡೆಸಿ ಸತ್ಯವನ್ನು ಜಗತ್ತಿಗೆ ಸಾರಲಿ. ತಪ್ಪು ನಡೆದಿದ್ದರೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿಎ. ಮಂಜುನಾಥ್ ಜೆಡಿಎಸ್ ಜಿಲ್ಲಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.