ADVERTISEMENT

ಮೇಕೆದಾಟು– ಶೀಘ್ರ ನ್ಯಾಯ ಸಿಗುವ ಭರವಸೆ: ಡಿ.ಕೆ. ಸುರೇಶ್

ಸುರೇಶ್‌

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 7:12 IST
Last Updated 1 ಅಕ್ಟೋಬರ್ 2023, 7:12 IST
ಮೇಕೆದಾಟು ಪ್ರದೇಶದಲ್ಲಿ ಹರಿಯುತ್ತಿರುವ ಕಾವೇರಿ (ಸಂಗ್ರಹ ಚಿತ್ರ)
ಮೇಕೆದಾಟು ಪ್ರದೇಶದಲ್ಲಿ ಹರಿಯುತ್ತಿರುವ ಕಾವೇರಿ (ಸಂಗ್ರಹ ಚಿತ್ರ)   

ಚನ್ನಪಟ್ಟಣ: ಮೇಕೆದಾಟು ಯೋಜನೆ ಜಾರಿಗೊಳಿಸುವ ವಿಚಾರದಲ್ಲಿ ಈಗಾಗಲೇ ಕೇಂದ್ರ ಸರ್ಕಾರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಚರ್ಚೆ ನಡೆಸಿದ್ದು, ಶೀಘ್ರದಲ್ಲೇ ನ್ಯಾಯ ಸಿಗುವ ಭರವಸೆ ಇದೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.

ಚನ್ನಪಟ್ಟಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯೋಜನೆ ಜಾರಿಗೊಳಿಸಲು ಸಾಧ್ಯವಾಗಲಿದೆ. ನ್ಯಾಯಾಲಯದಲ್ಲಿ ಮೇಕೆದಾಟು ವಿಚಾರ ಶೀಘ್ರ ಇತ್ಯರ್ಥ ಆಗಬೇಕು. ವಿವಾದ ಬಗೆಹರಿಸುವುದು ಕೇಂದ್ರದ ಕೈಯಲ್ಲಿ ಇದೆ. ಪರಿಸರ ಇಲಾಖೆ ಅನುಮತಿ ಪಡೆದು ಕೇಂದ್ರ ಸರ್ಕಾರ ಮನಸ್ಸು ಮಾಡಬೇಕು ಎಂದರು.

ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ ತೆಗೆದಿದೆ. ಹಿಂದೆ ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಲಾಗಿದೆ. ಕಾಂಗ್ರೆಸ್ ಕಾವೇರಿ ನೀರಾವರಿ ವಿಚಾರದಲ್ಲಿ ಶಾಶ್ವತ ಪರಿಹಾರದ ಚಿಂತನೆ ನಡೆಸಿತ್ತು. ಈ ನೀರಿನ ಸಮಸ್ಯೆಗೆ ಮೇಕೆದಾಟು ಒಂದೇ ಪರಿಹಾರ. ಇದು ಶೀಘ್ರ ಬಗೆಹರಿಯಲಿದೆ ಎನ್ನುವ ಭರವಸೆ ಇದೆ ಎಂದರು.

ADVERTISEMENT

ಕಾವೇರಿ ನ್ಯಾಯಾಧೀಕರಣದ ತೀರ್ಪಿನಿಂದಾಗಿ ಈಗ ಸಂಕಷ್ಟ ಬಂದಿದೆ. ಇದು ಕೇಂದ್ರ ಸರ್ಕಾರ ಮಾಡಿರುವ ನ್ಯಾಯಾಧೀಕರಣ. ಕಾಂಗ್ರೆಸ್ ಇದನ್ನು ಮಾಡಿಲ್ಲ. ಬಿಜೆಪಿ ನೇತೃತ್ವದ ಬೋರ್ಡ್ ನೀರು ಬಿಡುವಂತೆ ತೀರ್ಮಾನ ನೀಡಿದೆ. ನೀರು ಹರಿಸುವ ವಿಚಾರದಲ್ಲಿ ಬೋರ್ಡ್ ಗೆ ಸಂಪೂರ್ಣ ಅಧಿಕಾರ ಇದೆ. ಸರ್ಕಾರದ ಪರವಾಗಿ ಅಧಿಕಾರಿಗಳು, ವಕೀಲರು ವಾದ ಮಾಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.