ADVERTISEMENT

ಕಾಮಗಾರಿಗಳ ಮೇಲೆ ಡ್ರೋಣ್‌ ಕಣ್ಗಾವಲು!

₹1.9 ಲಕ್ಷ ವೆಚ್ಚದಲ್ಲಿ ಖರೀದಿ ಮಾಡಿದ ಜಿ.ಪಂ: ತಾಲ್ಲೂಕಿಗೆ ಒಂದರಂತೆ ನೀಡುವ ಇಂಗಿತ

​ಪ್ರಜಾವಾಣಿ ವಾರ್ತೆ
Published 31 ಮೇ 2020, 15:05 IST
Last Updated 31 ಮೇ 2020, 15:05 IST
ಹೊಸತಾಗಿ ಖರೀದಿಸಿದ ಡ್ರೋಣ್‌ ಕಾರ್ಯಕ್ಷಮತೆ ಪರಿಶೀಲಿಸುತ್ತಿರುವ ಜಿ.ಪಂ. ಸಿಇಒ ಇಕ್ರಂ
ಹೊಸತಾಗಿ ಖರೀದಿಸಿದ ಡ್ರೋಣ್‌ ಕಾರ್ಯಕ್ಷಮತೆ ಪರಿಶೀಲಿಸುತ್ತಿರುವ ಜಿ.ಪಂ. ಸಿಇಒ ಇಕ್ರಂ   

ರಾಮನಗರ: ಇಲ್ಲಿನ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆಯಲಿರುವ ಕಾಮಗಾರಿಗಳು ಇನ್ನು ಮುಂದೆ ಡ್ರೋಣ್‌ ಕಣ್ಗಾವಲಿಗೆ ಒಳಪಡಲಿವೆ. ಹೌದು. ಇದಕ್ಕೆಂದೇ ಜಿಲ್ಲಾ ಪಂಚಾಯತಿಯು ಬರೋಬ್ಬರಿ ₹1.9 ಲಕ್ಷ ವೆಚ್ಚದಲ್ಲಿ ಡ್ರೋಣ್ ಅನ್ನು ಖರೀದಿ ಮಾಡಿದೆ. ನರೇಗಾ ಕಾಮಗಾರಿ, ಕೆರೆ, ಕಲ್ಯಾಣಿ, ಕಾಲುದಾರಿ ವೀಕ್ಷಣೆ, ಸಿಬ್ಬಂದಿಗಳ ಕಾರ್ಯವೈಖರಿ... ;ಹೀಗೆ ಹತ್ತಾರು ಬಗೆಯ ಕಾಮಗಾರಿಗಳನ್ನು ಈ ಮೂಲಕ ಕುಳಿತಲ್ಲಿಯೇ ವೀಕ್ಷಣೆ ಮಾಡಬಹುದಾಗಿದೆ.

ಏನಿದರ ವಿಶೇಷ: ಒಂದು ಸಾವಿರ ಅಡಿ ಎತ್ತರದವರೆಗೆ ಹಾರುವ ಸಾಮರ್ಥ್ಯ ಹೊಂದಿರುವ ಈ ಡ್ರೋಣ್‌ 120 ಡಿಗ್ರಿ ಕೋನದವರೆಗೂ ತಿರುಗುವ ಸಾಮರ್ಥ್ಯ ಹೊಂದಿದೆ. 8 ಕಿ.ಮೀ ದೂರದವರೆಗೂ ಸಂಚರಿಸಲಿದೆ. ಆದರೆ, ಬ್ಯಾಟರಿ ಸಾಮರ್ಥ್ಯ 15 ನಿಮಿಷ ಇದ್ದು, 5 ಬ್ಯಾಟರಿಗಳನ್ನು ಹೆಚ್ಚುವರಿಯಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಒಂದು ಗಂಟೆ ಕಾಲ ಸತತವಾಗಿ ಹಾರಾಟ ನಡೆಸಲು ವ್ಯವಸ್ಥೆ ಮಾಡಲಾಗಿದೆ. 44ಕೆ ಸಾಮರ್ಥ್ಯ ಹೊಂದಿರುವ ಕ್ಯಾಮೆರಾ ಇದರಲ್ಲಿ ಇದ್ದು, 1 ಸಾವಿರ ಅಡಿ ಎತ್ತರದಲ್ಲಿ ಹಾರಿದರೂ ಸ್ಪಷ್ಟವಾಗಿ ಭಾವಚಿತ್ರಗಳನ್ನು ಸೆರೆ ಹಿಡಿಯಲಿದೆ. ಚಲನಚಿತ್ರಗಳನ್ನು ತೆಗೆಯಬಲ್ಲ ವಿಡಿಯೊ ಕ್ವಾಲಿಟಿ ಇದೆ. 6 ಸೆನ್ಸರ್‌ಗಳಿವೆ.

ತಾಲ್ಲೂಕಿಗೆ ಒಂದು: ಮುಂದಿನ ದಿನಗಳಲ್ಲಿ ಪ್ರತಿ ತಾಲೂಕಿಗೆ ಒಂದರಂತೆ ಡ್ರೋನ್ ನೀಡುವ ಮೂಲಕ ಆಯಾ ತಾಲೂಕಿನ ನಡೆಯುತ್ತಿರುವ ಕಾಮಗಾರಿಗಳ ವೀಕ್ಷಣೆಯನ್ನು ಜಿಪಂ ಸಿಇಒ ವಿಕ್ರಂ ಕುಳಿತಲ್ಲಿಯೇ ಪರಿಶೀಲನೆ ನಡೆಸಲಿದ್ದಾರೆ. ಇಂತಹ ವಿಡಿಯೊಗಳನ್ನು ಜಾಲತಾಣಗಳ ಮೂಲಕ ಪ್ರಚಾರಪಡಿಸಿ, ನರೇಗಾ ಕಾಮಗಾರಿಗಳು ಹಾಗೂ ಸಾರ್ವಜನಿಕರು ಬಳಸಿಕೊಳ್ಳಬಹುದಾದ ಯೋಜನೆಗಳನ್ನು ಜನರಿಗೆ ತಲುಪಿಸುವ ಮತ್ತೊಂದು ಕಾರ್ಯವೂ ನಡೆಯಲಿದೆ. ಈಗಾಗಲೇ ಹೆಚ್ಚು ಪ್ರಚಾರದಲ್ಲಿ ಇರುವ ರಾಮನಗರ ಜಿಲ್ಲಾ ಪಂಚಾಯಿತಿ ಟ್ವಿಟರ್ ಖಾತೆ, ಫೇಸ್‌ಬುಕ್ ಖಾತೆಗಳ ಮೂಲಕ ಇನ್ನಷ್ಟು ಪ್ರಚಾರ ಪಡಿಸುವುದರೊಂದಿಗೆ ಅಧಿಕಾರಿಗಳಿಗೂ ಸ್ಪೂರ್ತಿ ತುಂಬುವ ಕೆಲಸ ನಡೆಸಲು ಜಿ.ಪಂ. ಎಲ್ಲ ಆಯಾಮಗಳಿಂದಲೂ ಡ್ರೋಣ್‌ ಬಳಸಿಕೊಳ್ಳಲು ಚಿಂತನೆ ನಡೆಸಿರುವುದು ವಿಶೇಷ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.